Advertisement

ಸಿಎಂ ವಿರುದ್ಧ ಸ್ಪರ್ಧಿಸೋ ಧೈರ್ಯ ಬಿಎಸ್‌ವೈಗಿಲ್ಲ

03:50 PM Apr 24, 2018 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ಮಾಡುವ ಧೈರ್ಯ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಲೇವಡಿ ಮಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರಿಗೆ ಬ್ಲಿಡ್‌ ಪ್ರಶರ್‌ ಹೆಚ್ಚಾಗಿದೆ. ಬಾದಾಮಿಯಲ್ಲಿ ನಿಂತು ರಕ್ತದೊತ್ತಡ ತಡೆಯುವ ಶಕ್ತಿ ಅವರಿಗಿಲ್ಲ ಎಂದು ವ್ಯಂಗ್ಯವಾಡಿದರು.

Advertisement

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಇಲ್ಲದೇ ಗ್ರಾಪಂ ಚುನಾವಣೆಯಲ್ಲಿ ಸೋತವರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಅದನ್ನು ನೋಡಿದರೆ, ಅವರ ಪಕ್ಷ ಅಭ್ಯರ್ಥಿಗಳಿಲ್ಲದೇ ಅಧೋಗತಿಗೆ ಇಳಿದಿದೆ ಎಂದರು. ವರುಣಾ ಕ್ಷೇತ್ರದಲ್ಲಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಅವರನ್ನು ಎದುರಿಸಲಾಗದೇ ಯಡಿಯೂರಪ್ಪ ಪುತ್ರ ವಿಜಯೇಂದ್ರ ಪಲಾಯನ ಮಾಡಿದ್ದಾರೆ.

2008 ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಕಸ್ಮಿಕವಾಗಿ ಅಧಿಕಾರಕ್ಕೆ ಬಂದಿತ್ತು. ಮತ್ತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಬಾದಾಮಿ ಚಾಲುಕ್ಯರ ದೊರೆ ಎರಡನೇ ಪುಲಕೇಶಿ ಹರ್ಷವರ್ಧನನ್ನು ಸೋಲಿಸಿದಂತೆ ಸಿದ್ದರಾಮಯ್ಯ ಮೋದಿಯವರನ್ನು ಓಡಿಸುತ್ತಾರೆ ಎಂದು ಹೇಳಿದರು. 

ಈ ಚುನಾವಣೆ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನಡೆಯುತ್ತಿದೆ. ಜೆಡಿಎಸ್‌ ಬಿಜೆಪಿಯ ಬಿ ಟೀಂ ಎನ್ನುವುದು ದಿನದಿಂದ ದಿನಕ್ಕೆ ಸಾಬೀತಾಗುತ್ತಿದೆ. ಕೆಲವು ಜಿಲ್ಲೆಗಳಲ್ಲಿ ಜೆಡಿಎಸ್‌ಗೆ ಅಸ್ತಿತ್ವವೇ ಇಲ್ಲ. ಹೀಗಾಗಿ ಅವರು ಜೆಡಿಎಸ್‌ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಬಾರಿಯೂ ಮತ್ತೆ ಕಾಂಗ್ರೆಸ್‌ 130 ಕ್ಕೂ ಹೆಚ್ಚು ಸ್ಥಾನ ಪಡೆದು ಸ್ವಂತ ಬಲದ ಮೇಲೆಯೇ ಸರ್ಕಾರ ರಚನೆ ಮಾಡಲಿದೆ ಎಂದು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next