Advertisement

ಈ ಊರಲ್ಲಿ ಕಾರ್ತಿಕ ಮಾಸವರೆಗೆ ಗಂಡ್ಮಕ್ಕಳ ಮದುವೆ ನಡೆಯಲ್ಲ !

01:34 PM May 13, 2019 | Team Udayavani |

ಕಲಾದಗಿ: ಆ ಊರಿನಲ್ಲಿ ಬರುವ ಕಾರ್ತಿಕ ಮಾಸದವರೆಗೆ ಅಂದರೆ ತುಳಸಿ ಲಗ್ನದವರೆಗೆ ಗಂಡು ಮಕ್ಕಳ ಮದುವೆ ನಡೆಯುವಂತಿಲ್ಲ..ಅಲ್ಲಿಯತನಕ ಮನೆಗಳಿಗೆ ಸುಣ್ಣ-ಬಣ್ಣ ಹಚ್ಚುವುದಿಲ್ಲ..ಕಸಬರಿಗೆ ಖರೀದಿ ಮಾಡೋ ಹಾಗಿಲ್ಲ..ಎತ್ತುಗಳಿಗೆ ಶೃಂಗಾರ ಮಾಡುವಂತಿಲ್ಲ..!

Advertisement

ಇದೆಲ್ಲಾ ನಡೆಯುವುದು ಜಿಲ್ಲೆಯ ಜಾಗೃತ ಪವಮಾನ ಸುಕ್ಷೇತ್ರ ತುಳಸಿಗೇರಿಯಲ್ಲಿ. ಹೌದು. ತುಳಸಿಗೇರಿಯಲ್ಲಿ ಮೇ 13 ರಂದು ನಡೆಯಲಿರುವ ಶ್ರೀ ಮಾರುತೇಶ್ವರ ಓಕುಳಿ ನಂತರ ಅಂದಾಜು 6 ತಿಂಗಳವರೆಗೂ ಈ ಎಲ್ಲ ಪ್ರಕ್ರಿಯೆಗಳು ನಡೆಯಲ್ಲ.

ಹಲವು ವರ್ಷಗಳ ಸಂಪ್ರದಾಯ: ಓಕುಳಿ ನಂತರ ಬರುವ ತುಳಸಿ ಲಗ್ನದವರೆಗೂ ಊರಿನಲ್ಲಿ ಹೆಣ್ಣು ಮಕ್ಕಳ ಮದುವೆ ನಡೆಯುತ್ತದೆಯಾದರೂ, ಗಂಡು ಮಕ್ಕಳ ಮದುವೆ ನಡೆಯುವಂತಿಲ್ಲ. ಇದು ಈ ಊರಿನಲ್ಲಿ ಹಲವು ವರ್ಷಗಳಿಂದ ನಡೆದುಕೊಂಡು ಬಂದ ಸಂಪ್ರದಾಯ. ಅಷ್ಟೇ ಅಲ್ಲಾ ಇಲ್ಲಿನ ಯಾವ ಮನೆಗಳಿಗೂ ಸುಣ್ಣ-ಬಣ್ಣ ಹಚ್ಚುವಂತಿಲ್ಲ. ಹೊಸ ಕಸಬರಿಗೆಯನ್ನು ಮನೆಗೆ ತರುವಂತಿಲ್ಲ.

ಆಹಾ..ಕಡುಬು: ಇನ್ನುಳಿದಂತೆ ಇಲ್ಲಿನ ಓಕುಳಿ ಬಹಳ ಆಕರ್ಷನೀಯವಾದದ್ದು. ‘ಹರಿಸೇವೆ’ ಎಂದು ನಡೆಯುವ ಆಚರಣೆಯ ಊಟಕ್ಕೆಂದು ಊರಿನ ಬಹುತೇಕ ಮಹಿಳೆಯರು, ಪುರುಷರು ಕೂಡಿ ಬರೋಬ್ಬರಿ ಎಂಟØತ್ತು ಕ್ವಿಂಟಲ್ ಬೇಳೆ ಹಿಟ್ಟಿನ ಕಡುಬುಗಳನ್ನು ತಯಾರಿಸುತ್ತಾರೆ. ಓಕುಳಿ ಚಾಲನೆಯಾದ ಮರುದಿನ ಬೆಳಗಿನ ಜಾವ ಆರಂಭವಾದ ಕಡಬು ತಯಾರಿಕೆ ಸಂಜೆವರೆಗೂ ನಡೆಯುತ್ತದೆ.

ಈಗ ಪ್ರತಿ ವರ್ಷ: ತುಳಸಿಗೇರಿಯಲ್ಲಿ ಹಿಂದೆಲ್ಲ ಪ್ರತಿ ಮೂರು ವರ್ಷಕ್ಕೊಮ್ಮೆ ಓಕುಳಿಯನ್ನು ಆಚರಿಸಲಾಗುತ್ತಿತ್ತು. ಹನುಮ ಭಕ್ತರೊಬ್ಬರು ಓಕುಳಿಯ ಖರ್ಚನ್ನು ತಾವೇ ಭರಿಸುವುದಾಗಿ ಬೇಡಿಕೊಂಡಿದ್ದರು. ಅದೊಂದು ವರ್ಷ ಅವರ ಖರ್ಚಿನಲ್ಲೇ ಆರಂಭವಾದ ಓಕುಳಿ, ಮುಂದೆ ಪ್ರತಿ ವರ್ಷ ಭಕ್ತರು ತಾವು ಭರಿಸುವುದಾಗಿ ಬೇಡಿಕೊಳ್ಳುತ್ತಾರೆ. ಕಳೆದ ಏಳು ವರ್ಷಗಳಿಂದ ಓಕುಳಿಯ ಸಂಪೂರ್ಣ ಖರ್ಚನ್ನು ತಾವೇ ಭರಿಸಲು ಬೇಡಿಕೊಳ್ಳುತ್ತಿರುವುದರಿಂದ ಪ್ರತಿವರ್ಷ ಓಕುಳಿ ಆಚರಿಸಲಾಗುತ್ತದೆ. ಊರ ದೈವದಿಂದ ಹಣ ಪಡೆಯದೇ ಎಲ್ಲವನ್ನೂ ಅವರೇ ಭರಿಸುತ್ತಾರೆ. ಊರವರು ನಿಂತು ಎಲ್ಲ ಕೆಲಸವನ್ನು ನಿಭಾಯಿಸುತ್ತಾರೆ. ಗ್ರಾಮಸ್ಥರ ದೈವಭಕ್ತಿ ಮಾದರಿಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next