Advertisement

ಹೊರ ಜಿಲ್ಲೆಯ ಕುಚ್ಚಲು ಅಕ್ಕಿಯೂ ಅಲಭ್ಯ!

01:25 AM Feb 27, 2022 | Team Udayavani |

ಉಡುಪಿ: ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸಾರ್ವಜನಿಕ ಪಡಿತರ ವ್ಯವಸ್ಥೆ (ಪಿಡಿಎಸ್‌)ಯಡಿ ಕುಚ್ಚಲು ಅಕ್ಕಿ ವಿತರಣೆಗೆ ಹೊರ ಜಿಲ್ಲೆಗಳಿಂದ ಅಗತ್ಯ ಭತ್ತ ಖರೀದಿಗೂ ಕೇಂದ್ರ ಸರಕಾರ ಅನುಮತಿ ನೀಡಿದೆ. ಆದರೆ ರಾಜ್ಯದ ಯಾವ ಜಿಲ್ಲೆಯಲ್ಲೂ ಸದ್ಯಕ್ಕೆ ಕುಚ್ಚಲು ಅಕ್ಕಿ ಲಭ್ಯವಿಲ್ಲ.

Advertisement

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಎಂಒ4, ಕಜೆ, ಜಯ, ಪಂಚಮುಖ, ಸಹ್ಯಾದ್ರಿ, ಉಮಾ ಮತ್ತು ಜ್ಯೋತಿ ತಳಿಯ ಸ್ಥಳೀಯ ಭತ್ತ ಖರೀದಿಯನ್ನು ಪಿಡಿಎಸ್‌ ಮೂಲಕ ವಿತರಿಸಲು ಅನುಮತಿ ನೀಡಲಾಗಿತ್ತು. ಕೇಂದ್ರ ಸರಕಾರದಿಂದ ಅನುಮತಿ ಸಿಕ್ಕ ವೇಳೆಗಾಗಲೇ ಉಭಯ ಜಿಲ್ಲೆಗಳ ರೈತರು ಬೆಳೆದ ಭತ್ತವನ್ನು ಮಾರಾಟ ಮಾಡಿದ್ದರು. ಈ ಎಲ್ಲ ತಳಿಯ ಭತ್ತವನ್ನು ಹೊರ ಜಿಲ್ಲೆಯಿಂದ ಖರೀದಿಸಲು ಅನುಮತಿ ನೀಡಬೇಕು ಎಂದು ಕೇಂದ್ರಕ್ಕೆ ಮತ್ತೂಂದು ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಕೇಂದ್ರ ಸರಕಾರ ಹೊರ ಜಿಲ್ಲೆಯಿಂದ ಭತ್ತ ಖರೀದಿಗೂ ಅನುಮತಿಸಿದೆ. ಆದರೆ ರಾಜ್ಯದ ಯಾವ ಜಿಲ್ಲೆಯಲ್ಲೂ ಈ ತಳಿಯ ಭತ್ತಗಳು ಸದ್ಯ ಇಲ್ಲ.

ಪ್ರತೀ ತಿಂಗಳು 1.40 ಲಕ್ಷ ಕ್ವಿಂಟಾಲ್‌ ಅಗತ್ಯ
ಉಭಯ ಜಿಲ್ಲೆಗೆ ಪ್ರತೀ ತಿಂಗಳು ಸರಾಸರಿ 1.40 ಲಕ್ಷ ಕ್ವಿಂಟಾಲ್‌ ಭತ್ತದ ಆವಶ್ಯಕತೆಯಿದೆ. ಅಂದರೆ ತಿಂಗಳಿಗೆ ಒಂದು ಲಕ್ಷ ಕ್ವಿಂಟಾಲ್‌ ಅಕ್ಕಿ ಬೇಕಾಗುತ್ತದೆ. ಈ ವರ್ಷ ಸ್ಥಳೀಯ ಅಥವಾ ಹೊರ ಜಿಲ್ಲೆಗಳಿಂದ ಇಷ್ಟೊಂದು ಅಕ್ಕಿ ಸಿಗುವುದಿಲ್ಲ. ಹೀಗಾಗಿ ಆಂಧ್ರಪ್ರದೇಶ ಸಹಿತವಾಗಿ ಹೊರ ರಾಜ್ಯದಿಂದಲೇ ಬರುವ ಕುಚ್ಚಲು ಅಕ್ಕಿಯ ವಿತರಣೆಯೇ ಈ ವರ್ಷದ ಅಂತ್ಯದ ವರೆಗೂ ಮುಂದುವರಿಸುವ ಸಾಧ್ಯತೆಯಿದೆ. ಸ್ಥಳೀಯವಾಗಿ ಭತ್ತ ಬೆಳೆಯುವ ಪ್ರಮಾಣವೂ ಹೆಚ್ಚಾಗಬೇಕು. ಇದಕ್ಕಾಗಿ ಸರಕಾರವೂ ಕೆಲವೊಂದು ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ.

ಕರಾವಳಿ ಅಕ್ಕಿ ಕೇರಳದ ಪಾಲು!
ಕರಾವಳಿ ಸಹಿತವಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೆಳೆಯುವ ಕುಚ್ಚಲು ಅಕ್ಕಿಯ ಭತ್ತಗಳನ್ನು ಪ್ರತೀ ವರ್ಷ ಕೇರಳ ರಾಜ್ಯ ಹೆಚ್ಚಾಗಿ ಖರೀದಿ ಮಾಡುತ್ತದೆ. ಈ ವರ್ಷವೂ ಕೂಡ ಇಲ್ಲಿನ ರೈತರು ಮಾರಾಟ ಮಾಡಿರುವ ಭತ್ತ ಮಿಲ್‌ ಹಾಗೂ ವಿವಿಧ ವ್ಯವಸ್ಥೆಯ ಮೂಲಕ ಕೇರಳಕ್ಕೆ ಹೋಗಿಯಾಗಿದೆ.

ಸ್ಥಳೀಯ ಭತ್ತದ ಕೊರತೆಯಿಂದ ಹೊರ ಜಿಲ್ಲೆಯ ಭತ್ತ ಖರೀದಿಗೆ ಕೇಂದ್ರದಿಂದ ಅನುಮತಿ ಕೋರಿದ್ದೆವು. ಅದಕ್ಕೂ ಕೇಂದ್ರ ಸರಕಾರ ಅನುಮತಿ ನೀಡಿದೆ. ಆದರೆ ಯಾವ ಜಿಲ್ಲೆಯಲ್ಲೂ ಕುಚ್ಚಲು ಅಕ್ಕಿ ಲಭ್ಯವಿಲ್ಲ. ಬಹುತೇಕ ಜಿಲ್ಲೆಗಳ ಕುಚ್ಚಲು ಅಕ್ಕಿ ಕೇರಳಕ್ಕೆ ಹೋಗಿದೆ. ಹೀಗಾಗಿ ಈ ವರ್ಷದ ಅಂತ್ಯದವರೆಗೂ ಹೊರ ರಾಜ್ಯದ ಕುಚ್ಚಲು ಅಕ್ಕಿಯ ವಿತರಣೆಯೇ ಮುಂದುವರಿಯಲಿದೆ.
– ಕೋಟ ಶ್ರೀನಿವಾಸ ಪೂಜಾರಿ,
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next