ಹೊಸದಿಲ್ಲಿ: ಬಿಜೆಪಿ ಸಖ್ಯದಿಂದ ದೂರ ಬಂದ ಬಳಿಕ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕಳೆದ ಕೆಲವು ದಿನಗಳಲ್ಲಿ ಹಲವಾರು ವಿರೋಧ ಪಕ್ಷದ ನಾಯಕರನ್ನು ಭೇಟಿಯಾಗುತ್ತಿದ್ದಂತೆ, ‘ಇದರಿಂದ ಯಾವುದೇ ಲಾಭವಿಲ್ಲ’ ಎಂದು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಜನರ ಮತವನ್ನು ಕೇಳಲು ‘ವಿಶ್ವಾಸಾರ್ಹ ಮುಖ’ ಮತ್ತು ಸಾಮೂಹಿಕ ಚಳುವಳಿಯ ಅಗತ್ಯವಿದೆ. ವಿವಿಧ ರಾಜಕೀಯ ಪಕ್ಷಗಳ ನಾಯಕರನ್ನು ಭೇಟಿ ಮಾಡುವುದರಿಂದ ಹೆಚ್ಚಿನ ವ್ಯತ್ಯಾಸವೇನು ಆಗುವುದಿಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಶಾಂತ್ ಕಿಶೋರ್ ಅವರಿಗೆ ಈ ಹಿಂದೆ ನಿತೀಶ್ ಕುಮಾರ್ ಅವರ ಜನತಾ ದಳ (ಯುನೈಟೆಡ್) ನಲ್ಲಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ನೀಡಲಾಗಿತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಅವರನ್ನು ನಂತರ ಪಕ್ಷದಿಂದ ಹೊರಹಾಕಲಾಗಿದೆ.
ಇಂತಹ ಸಭೆಗಳು ಮತ್ತು ಚರ್ಚೆಗಳು ರಾಜಕೀಯ ಪರಿಸ್ಥಿತಿಯನ್ನು ಬದಲಾಯಿಸುವುದಿಲ್ಲ. ನನಗೆ ಅಂತಹ ಅನುಭವವಿಲ್ಲ. ಅವರು (ನಿತೀಶ್ ಕುಮಾರ್) ನನಗಿಂತ ಹೆಚ್ಚು ಅನುಭವಿ. ಆದರೆ ಕೆಲವು ನಾಯಕರ ವೈಯಕ್ತಿಕ ಅಥವಾ ಸಾಮೂಹಿಕವಾಗಿ ಭೇಟಿ, ಚರ್ಚೆಗಳು ಅಥವಾ ಪತ್ರಿಕಾಗೋಷ್ಠಿಗಳನ್ನು ನಡೆಸುವುದನ್ನು ಪ್ರತಿಪಕ್ಷಗಳ ಏಕತೆ ಅಥವಾ ಒಂದು ರಾಜಕೀಯ ಬೆಳವಣಿಗೆಯಾಗಿ ನಾನು ನೋಡುವುದಿಲ್ಲ ” ಎಂದು ಸುದ್ದಿ ಸಂಸ್ಥೆ ಎಎನ್ ಐ ಗೆ ತಿಳಿಸಿದರು.
ಇದನ್ನೂ ಓದಿ:ಇಂಡೋನೇಷ್ಯಾದಲ್ಲಿ 7.6 ತೀವ್ರತೆಯ ಭೂಕಂಪ, ಹಲವು ಕಟ್ಟಡಗಳಿಗೆ ಹಾನಿ ; ಸುನಾಮಿ ಎಚ್ಚರಿಕೆ
“ನಿತೀಶ್ ಕುಮಾರ್ ಬಿಜೆಪಿಯಲ್ಲಿದ್ದಾಗ, ಅವರೊಂದಿಗೆ ಇದ್ದ ನಾಯಕರನ್ನು ಭೇಟಿಯಾಗಿದ್ದರು. ಈಗ ಅವರು ಬಿಜೆಪಿಯೊಂದಿಗೆ ಇಲ್ಲ, ಆದ್ದರಿಂದ ಅವರು ಬಿಜೆಪಿಯ ವಿರೋಧ ಪಕ್ಷಗಳು ಮತ್ತು ಮುಖಂಡರನ್ನು ಭೇಟಿಯಾಗುತ್ತಿದ್ದಾರೆ. ಇದರಲ್ಲಿ ಬಹಳಷ್ಟು ವ್ಯತ್ಯಾಸವಿದೆ. ನಿಮಗೆ ಜನರ ನಂಬಿಕೆ, ಸ್ಥಳೀಯ ಕಾರ್ಯಕರ್ತರು ಬೇಕು. ಮತ್ತು ಅದನ್ನು ಮಾಡಲು ವಿಶ್ವಾಸಾರ್ಹ ಮುಖ ಮತ್ತು ಒಂದು ಚಳುವಳಿ ಬೇಕು”ಎಂದು ಪ್ರಶಾಂತ್ ಕಿಶೋರ್ ಹೇಳಿದರು.