ಬೆಂಗಳೂರು: ಖೋಟಾನೋಟು ಚಲಾವಣೆ ಆರೋಪ ಪ್ರಕರಣದಲ್ಲಿ ಬಂಧಿತರಾಗಿರುವ ಪಶ್ಚಿಮ ಬಂಗಾಳ ಮೂಲದ ದಲೀಮ್ ಮಿಯಾ ಹಾಗೂ ಚಿಕ್ಕೋಡಿಯ ಅಶೋಕ್ ಕುಂಬಾರ್‌ಗೆ ಜಾಮೀನು ನೀಡಲು ಎನ್‌ಐಎ ವಿಶೇಷ ನ್ಯಾಯಾಲಯ ನಿರಾಕರಿಸಿದೆ.
ಆರೋಪಿಗಳ ಜಾಮೀನು ಅರ್ಜಿಗಳನ್ನು ವಜಾಗೊಳಿಸಿರುವ ಎನ್‌ಐಎ ವಿಶೇಷ ನ್ಯಾಯಾಲಯ, ಆರೋಪಿಗಳಿಬ್ಬರೂ ದೇಶದ ಆರ್ಥಿಕ ವ್ಯವಸ್ಥೆಗೆ ಮಾರಕವಾಗಿರುವ ಖೋಟಾನೋಟು ಚಲಾವಣೆ ಆರೋಪವನ್ನು ಎದುರಿಸುತ್ತಿದ್ದಾರೆ. ಅಲ್ಲದೆ, ಪ್ರಕರಣದ ತನಿಖೆ ಪೂರ್ಣಗೊಂಡಿಲ್ಲ, ತಮ್ಮ ಬಂಧನ ಸಂವಿಧಾನದ ಕಲಂ 21ರ ಉಲ್ಲಂಘನೆ ಎಂಬ ಆರೋಪಿಗಳ ವಾದ ಒಪ್ಪಲು ಸಾಧ್ಯವಿಲ್ಲ. ಗಂಭೀರ ಆರೋಪ ಎದುರಿಸುತ್ತಿರುವ ಆರೋಪಿಗಳಿಬ್ಬರಿಗೂ ಕಲಂ 21 ಆಶ್ರಯವಾಗಬಾರದು ಎಂದು ಆದೇಶದಲ್ಲಿ ತಿಳಿಸಿದೆ.
ಎನ್‌ಐಎ ಪರವಾಗಿ ವಿಶೇಷ ಅಭಿಯೋಜಕರಾಗಿ ವಾದಿಸಿದ ಪಿ. ಪ್ರಸನ್ನಕುಮಾರ್, ಆರೋಪಿಗಳಿಬ್ಬರೂ ಖೋಟಾನೋಟು ಚಲಾವಣೆಯಲ್ಲಿ ನಿರಂತರವಾಗಿ ಭಾಗಿಯಾಗಿದ್ದಾರೆ. ಅಲ್ಲದೆ, ಎಫ್ಐಆರ್ ದಾಖಲಿಸದೇ ಬಂಧಿಸಲಾಗಿದೆ ಎಂಬ ಆರೋಪಿಗಳ ವಾದವನ್ನು ಪರಿಗಣಿಸಲು ಸಾಧ್ಯವಿಲ್ಲ. ಗಂಭೀರ ಅಪರಾಧ ಕೃತ್ಯಕ್ಕೆ ಸಂಬಂಧಿಸಿದಂತೆ ಕೇಸ್ ಡೈರಿಯನ್ನೂ ಎಫ್ಐಆರ್ ಆಗಿ ಪರಿಗಣಿಸಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ಹೇಳುತ್ತದೆ. ಆರೋಪಿಗಳು ಅಕ್ರಮದಲ್ಲಿ ಭಾಗಿಯಾದ ಕುರಿತ ಸಂಪೂರ್ಣ ಕೇಸ್ ಡೈರಿ ಎನ್‌ಐಎ ಬಳಿಯಿದೆ. ಜತೆಗೆ, ಆರೋಪಿಗಳ ಬಳಿ ಜಪ್ತಿ ಮಾಡಿಕೊಂಡಿರುವ ಡೈರಿ, ಹಣ ವ್ಯವಹಾರದ ಕುರಿತ ರಸೀದಿ ಪತ್ರಗಳು ಆರೋಪಿಗಳಿಬ್ಬರು ದಂಧೆಯಲ್ಲಿ ಭಾಗಿಯಾಗಿರುವುದಕ್ಕೆ ಪ್ರಬಲ ಸಾಕ್ಷ್ಯಗಳಾಗಿವೆ. ದೇಶದ ಅರ್ಥವ್ಯವಸ್ಥೆಗೆ ಧಕ್ಕೆ ತರುವ ಈ ಪ್ರಕರಣದ ತನಿಖೆ ನಡೆಯುತ್ತಿದ್ದು, ಇನ್ನೂ ಹಲವು ಆರೋಪಿಗಳ ಬಂಧನವಾಗಬೇಕಿದೆ. ಹೀಗಾಗಿ, ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ವಾದಿಸಿದ್ದರು. ಈ ವಾದವನ್ನು ನ್ಯಾಯಾಲಯ ಮಾನ್ಯ ಮಾಡಿದೆ.
ಪ್ರಕರಣ ಏನು? :
ಖೋಟಾನೋಟು ಚಲಾವಣೆ ಸಂಬಂಧ ಮಾರ್ಚ್ 12ರಂದು ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ದಲೀಮ್ ಮಿಯಾನನ್ನು ವಶಕ್ಕೆ ಪಡೆದಿದ್ದ ಮುಂಬೈ ಎನ್‌ಐಎ ಅಧಿಕಾರಿಗಳು, ಆತ ನೀಡಿದ ಮಾಹಿತಿ ಮೇರೆಗೆ ಚಿಕ್ಕೋಡಿಯ ಅಶೋಕ್ ಕುಂಬಾರ್ ನಿವಾಸದ ಮೇಲೆ ಶೋಧ ನಡೆಸಿದ್ದರು. ಈ ವೇಳೆ, 2000 ಮುಖಬೆಲೆಯ 82 ಸಾವಿರ ರೂ.ಖೋಟಾ ನೋಟುಗಳು ಪತ್ತೆಯಾಗಿದ್ದವು. ಅದೇ ರೀತಿ ರಾಯಭಾಗದ ರಾಜೇಂದ್ರ ಪಾಟೀಲ್‌ರನ್ನು ಬಂಧಿಸಿದ್ದರು. ಸದ್ಯ ಮೂವರು ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.