Advertisement

ರೈತರ ಆತ್ಮಹತ್ಯೆ ತಡೆಗೆ ಪ್ರಯತ್ನ ನಡೆಯುತ್ತಿಲ್ಲ

12:23 PM Aug 14, 2017 | Team Udayavani |

ಮೈಸೂರು: ದೇಶದಲ್ಲಿ ಹೆಚ್ಚುತ್ತಿರುವ ರೈತರ ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನಗಳು ನಡೆಯುತ್ತಿಲ್ಲ ಎಂದು ಶಾಸಕ ಕೆ.ಎಸ್‌.ಪುಟ್ಟಣ್ಣಯ್ಯ ಅಸಮಾಧಾನ ವ್ಯಕ್ತಪಡಿಸಿದರು.

Advertisement

ನಗರದಲ್ಲಿ ಭಾನುವಾರ ಭಾರತೀಯ ಸಾಂಸ್ಕೃತಿಕ ವಿಕಾಸ ವೇದಿಕೆ ಆಯೋಜಿಸಿದ್ದ ರೈತ ಜಾಗೃತಿ ಸಮಾರಂಭದಲ್ಲಿ ಕೃಷಿ ಬದುಕಿನ ಸವಾಲುಗಳು ವಿಷಯ ಕುರಿತು ಮಾತನಾಡಿ, ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಶಾಸನ ಸಭೆಗಳು, ವಿಶ್ವವಿದ್ಯಾನಿಲಯಗಳು, ಸಾಹಿತ್ಯ ಕ್ಷೇತ್ರ ಸೇರಿದಂತೆ ಎಲ್ಲ ಕ್ಷೇತ್ರದವರಿಗೂ ತಿಳಿದಿದೆ. ಆದರೆ, ಯಾರೊಬ್ಬರೂ ಅನ್ನದಾತನ ಆತ್ಮಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಗಂಭೀರ ಚಿಂತನೆ ಮಾಡುತ್ತಿಲ್ಲ ಎಂದರು.

ಬದುಕಲು ಅನ್ನ ತಿನ್ನುವ ನಾವು ರೈತರನ್ನು ಬದುಕಿಸಲೂ ಚಿಂತಿಸಬೇಕು. ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕು. ಕೇಂದ್ರ ಹಾಗೂ ರಾಜ್ಯಗಳ ಬೊಕ್ಕಸಕ್ಕೆ ಕೃಷಿ ಕ್ಷೇತ್ರದಿಂದ ಹೆಚ್ಚಿನ ಹಣ ಹರಿದು ಬರುತ್ತಿದೆ. ಆದರೆ, ರೈತ ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಮಾತ್ರ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರಿ ನೌಕರಿಯಲ್ಲಿದ್ದವರಿಗೆ ಅವರು ಸೇವೆಯಿಂದ ನಿವೃತ್ತಿಯಾದ ನಂತರವು, ನಿವೃತ್ತಿ ವೇತನ ಸೇರಿದಂತೆ ಉತ್ತಮ ಸವಲತ್ತುಗಳು ದೊರಕುತ್ತವೆ. ಆದರೆ, ರೈತರಿಗೆ ಈ ರೀತಿಯ ಯಾವುದೇ ಸೌಲಭ್ಯಗಳನ್ನೂ ಸರ್ಕಾರಗಳು ನೀಡುತ್ತಿಲ್ಲ. ಹೀಗಾಗಿ ರೈತರ ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟುವ ಹಾಗೂ ರೈತರ ಸಮಸ್ಯೆಗಳ ಪರಿಹಾರವಾಗಬೇಕಾದರೆ ವ್ಯವಸ್ಥೆಯಲ್ಲಿ ಬದಲಾವಣೆಗಳಾಗಬೇಕಿದೆ ಎಂದರು.

ಕಬ್ಬಿನಿಂದ ಸಕ್ಕರೆ, ಸಾವಯವ ಗೊಬ್ಬರ, ಔಷಧಿಗಳು ಸೇರಿದಂತೆ ನೂರಕ್ಕೂ ಹೆಚ್ಚು ಉಪ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಆದರೆ, ಕಬ್ಬಿಗೆ ಮಾತ್ರ ಸರ್ಕಾರ ಉತ್ತಮ ಬೆಲೆ ನಿಗದಿ ಮಾಡಿಲ್ಲ. ಹತ್ತಿಯಿಂದ ಬಟ್ಟೆ ತಯಾರಿಗೆ ಗಾರ್ಮೆಂಟ್ಸ್‌, ಟೈಲರಿಂಗ್‌ ಸೇರಿದಂತೆ ಅನೇಕ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ.

Advertisement

ನಮ್ಮ ಮಾನ ಮುಚ್ಚುವ ಬಟ್ಟೆ ತಯಾರಿಸುವ ಹತ್ತಿ ಬೆಳೆಗೆ ವಿಧಿಸಿರುವ ತೆರಿಗೆಯಿಂದಾಗಿ ಹತ್ತಿ ಬೆಳೆಗಾರರು ಆತ್ಮಹತ್ಯೆ ಹಾದಿ ಹಿಡಿಯುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ದೇಶದಲ್ಲಿ ಆಹಾರ ಪದಾರ್ಥಗಳ ಬೆಲೆ ಏರಿಕೆಯಾದರೂ ರೈತರಿಂದ ಖರೀದಿಸುವ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎಂದರು.

ರೈತರ ಆತ್ಮಹತ್ಯೆ ಸಮಸ್ಯೆ ಮತ್ತು ಪರಿಹಾರಗಳು ವಿಷಯ ಕುರಿತು ಹುಣಸೂರಿನ ಸರ್ಕಾರಿ ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪೊ›.ನಂಜುಂಡಸ್ವಾಮಿ ಮಾತನಾಡಿದರು. ಸಮಾಜ ಸೇವಕ ಕೆ.ಎಸ್‌.ರಘುರಾಂ ಕಾರ್ಯಕ್ರಮ ಉದ್ಘಾಟಿಸಿದರು. ರೈತಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ಸಾವಯವ ಕೃಷಿಕ ನಾಗರಾಜೇಗೌಡ, ಎಸ್‌.ಎಂ.ಜವರೇಗೌಡ ಮತ್ತಿತರರು ಜಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next