ಕುಷ್ಟಗಿ: ಪಟ್ಟಣದ ಹೊರವಲಯದ ಸಂತ ಶಿಶುನಾಳ ಶರೀಫ್ ನಗರದ ಬಳಿ ಗದಗ-ವಾಡಿ ವಿದ್ಯುತ್ ಲೈನ್ ರೈಲು ಮಾರ್ಗದ ಉದ್ದೇಶಿತ ರೈಲು ನಿಲ್ದಾಣ ನಿರ್ಮಾಣಕ್ಕಾಗಿ ಈಗಾಗಲೇ ಭೂಮಿ ಸ್ವಾಧೀನಗೊಂಡಿದೆ. ಇದರ ವ್ಯಾಪ್ತಿಯಲ್ಲಿ ಮನೆ ಕಳೆದುಕೊಳ್ಳುವವರಿಗೆ ಪರಿಹಾರವೂ ಸಿಕ್ಕಿದೆ. ಆದರೆ ತೆರವುಗೊಳ್ಳಲಿರುವ ಸರ್ಕಾರಿ ಶಾಲಾ ಕಟ್ಟಡ ಹಾಗೂ ಅಂಗನವಾಡಿ ಕೇಂದ್ರಕ್ಕೆ ಇದುವರೆಗೂ ಯಾವುದೇ ಪರ್ಯಾಯ ಕ್ರಮವಾಗಿಲ್ಲ.
ಈ ಭಾಗದ ಮಹತ್ವಾಕಾಂಕ್ಷಿ ನೈರುತ್ಯ ವಲಯದ ರೈಲ್ವೆ ಯೋಜನೆ 257 ಕಿ.ಮೀ. ಇದ್ದು, 2,841 ಕೋಟಿ ರೂ. ವೆಚ್ಚದ ಯೋಜನೆಯಾಗಿದೆ. ಪಟ್ಟಣದಲ್ಲಿ 2.02 ಕೋಟಿ ರೂ. ಅಂದಾಜು ವೆಚ್ಚದಲ್ಲಿ ರೈಲು ನಿಲ್ದಾಣ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಕುಷ್ಟಗಿ ವ್ಯಾಪ್ತಿಯ ಸಂತ ಶಿಶುನಾಳ ಶರೀಫ್ ನಗರ ಹಾಗೂ ಮಾರುತಿ ನಗರದ ನಡುವಿನೆ 1.04 ಕಿ.ಮೀ. ಉದ್ದ ಹಾಗೂ 35-80 ಮೀಟರ್ ಅಗಲ ರೈಲ್ವೆ ನಿಲ್ದಾಣ ನಿರ್ಮಿಸಲು ಜಾಗೆ ಗುರುತಿಸಲಾಗಿದೆ.
ಈ ಜಾಗೆಯಲ್ಲಿ 35 ಮನೆಗಳು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ನಿರ್ಮಾಣ ಹಂತದ ಅಂಗನವಾಡಿ ಕಟ್ಟಡ ಇದೆ. ಈಗಾಗಲೇ ಮನೆ ಕಳೆದುಕೊಂಡವರಿಗೆ ತಲಾ 3 ಲಕ್ಷ ರೂ. ಪರಿಹಾರ ಸಿಕ್ಕಿದೆ. ಶಾಲೆ ಹಾಗೂ ಅಂಗನವಾಡಿ ಕೇಂದ್ರಕ್ಕೆ ಇಲ್ಲಿವರೆಗೂ ರೈಲ್ವೇ ಇಲಾಖೆ, ತಾಲೂಕಾಡಳಿತದಿಂದ ಯಾವೂದೇ ಮುನ್ಸೂಚನೆ ಬಂದಿಲ್ಲ.
ರೈಲ್ವೆ ಇಲಾಖೆಯವರು ಕೆಲವು ಮನೆಗಳು, ಶಾಲೆ, ಅಂಗನವಾಡಿ ಕೇಂದ್ರ ಇಲಾಖೆ ಪರಿಮಿತಿಯಲ್ಲಿವೆ ಎನ್ನುತ್ತಿದ್ದಾರೆ. ಇಲ್ಲಿ ರೈಲು ನಿಲ್ದಾಣವಾದರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಮಾರುತಿ ನಗರ ಇಲ್ಲವೇ ಕೃಷ್ಣಗಿರಿ ಸರ್ಕಾರಿ ಶಾಲೆಯಲ್ಲಿ ವಿಲೀನಗೊಳಿಸಬೇಕೆ? ಎನ್ನುವ ಬಗ್ಗೆ ಚರ್ಚೆ ನಡೆದಿದೆ. ಆದರೆ ಸಂತ ಶಿಶುನಾಳ ಶರೀಫ್ ನಗರದ ನಿವಾಸಿಗಳಿಂದ ನಮ್ಮ ಬಡಾವಣೆಗೆ ಹೊಂದಿಕೊಂಡಿರುವ ಜಮೀನು ಖರೀ ದಿಸಿ ಶಾಲೆ, ಅಂಗನವಾಡಿ ನಿರ್ಮಿಸುವ ಬೇಡಿಕೆ ವ್ಯಕ್ತವಾಗಿದೆ.
ರೈಲು ನಿಲ್ದಾಣದಿಂದ ಶಾಲೆ ಸ್ಥಳಾಂತರ ಬಗ್ಗೆ ಮಾಹಿತಿ ಇಲ್ಲ. ಕೂಡಲೇ ಮಾಹಿತಿ ತರಿಸಿಕೊಂಡು, ಪರಿಶೀಲಿಸಿ ಹೊಸ ಶಾಲೆ ನಿರ್ಮಾಣಕ್ಕಾಗಿ ಮೇಲಾಧಿಕಾರಿಗಳಲ್ಲಿ ಪ್ರಸ್ತಾಪಿಸುವೆ. –
ಸುರೇಂದ್ರ ಕಾಂಬ್ಳೆ, ಕ್ಷೇತ್ರ ಶಿಕ್ಷಣಾಧಿಕಾರಿ
ಅಲೆಮಾರಿ ಬುಡಕಟ್ಟು ಸಮುದಾಯದ ಜನರ ಹೋರಾಟದ ಹಿನ್ನೆಲೆಯಲ್ಲಿ ಈ ಜಾಗೆ ಬಂದಿದೆ. ರೈಲು ಮಾರ್ಗ, ನಿಲ್ದಾಣಕ್ಕಾಗಿ ಇಲಾಖೆಯ ಸೂಚನೆಯಂತೆ 35 ಮನೆಗಳನ್ನು ಬಿಟ್ಟುಕೊಟ್ಟಿದ್ದೇವೆ. ಶಾಲೆ, ಅಂಗನವಾಡಿ ಕೇಂದ್ರಕ್ಕೆ ಹೊಸ ಜಾಗೆ ಖರೀದಿ ಸುವ ಬಗ್ಗೆ ಇಲ್ಲಿವರೆಗೂ ಚಕಾರವೆತ್ತಿಲ್ಲ. 70 ಮಕ್ಕಳಿರುವ ಶಾಲೆಗಾಗಿ ಬಡಾವಣೆಗೆ ಹೊಂದಿಕೊಂಡಿರುವ ಜಮೀನು ಖರೀದಿಧಿಸಿ, ಅಲ್ಲಿಯೇ ಶಾಲೆ, ಅಂಗನವಾಡಿ ನಿರ್ಮಿಸಲು ಕ್ರಮ ಕೈಗೊಳ್ಳಬೇಕು. –
ಮಹಿಬೂಬಸಾಬ್ ಮದಾರಿ, ಶಾಲೆ ಎಸ್‌ಡಿಎಂಸಿ ಅಧ್ಯಕ್ಷ