Advertisement

ಲೋಕಸಭಾ ಚುನಾವಣೆಗೆ ಮೈತ್ರಿ ಇಲ್ಲ

11:57 AM Feb 24, 2019 | Team Udayavani |

ಚಿತ್ರದುರ್ಗ: ಲೋಕಸಭಾ ಚುನಾವಣೆಯಲ್ಲಿ ಬಿಎಸ್‌ಪಿ ಪಕ್ಷ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಬಿಎಸ್‌ಪಿ ರಾಜ್ಯ ಉಪಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಹೇಳಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಬಿಎಸ್‌ಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಪಕ್ಷದ ವರಿಷ್ಠರ ತೀರ್ಮಾನದಂತೆ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಎಂದರು.

ರಾಜ್ಯ ಸಮ್ಮಿಶ್ರ ಸರ್ಕಾರ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ಅಧಿಕಾರದ ವ್ಯಾಮೋಹಕ್ಕೆ ಒಳಗಾಗುತ್ತಿದೆ. ರಾಜ್ಯದ ಜನತೆ ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಆದ್ದರಿಂದ ಈ ಬಾರಿ ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲೂ ಬಿಎಸ್‌ಪಿ ಸ್ಪರ್ಧಿಸಲಿದೆ. ಅದರಲ್ಲಿ ಕನಿಷ್ಠ ಎರಡು ಕ್ಷೇತ್ರಗಳಲ್ಲಾದರೂ ಗೆಲುವ ಸಾಧಿಸಿ ಬಿಎಸ್‌ಪಿ ಅಧಿನಾಯಕಿ ಮಾಯಾವತಿ ಕೈಬಲಪಡಿಸಲಾಗುವುದು ಎಂದರು.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೇತರ ರಾಜಕೀಯ ಪಕ್ಷಗಳು ಒಗ್ಗೂಡುವುದು ಅನಿವಾರ್ಯ. ಉತ್ತರಪ್ರದೇಶದಲ್ಲಿ ಎಸ್‌ಪಿ ಹಾಗೂ ಬಿಎಸ್‌ಪಿ ಎಲ್ಲಾ 80 ಕ್ಷೇತ್ರಗಳಲ್ಲಿ ಸ್ಪ ರ್ಧಿಸಲಿದ್ದು 60 ಕ್ಷೇತ್ರಗಳಿಗಿಂತ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದೇವೆ. ಇದರ ಜೊತೆಗೆ ಛತ್ತೀಸ್‌ಗಢ, ಹರಿಯಾಣದಲ್ಲಿ ಬಿಜೆಪಿಯೇತರ ರಾಜಕೀಯ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ಬಿಹಾರದಲ್ಲಿ ಆರ್‌ಜೆಡಿಯೊಂದಿಗೆ ಹೊಂದಾಣಿಕೆ ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದರು.

ಸ್ವಾತಂತ್ರ್ಯಾ ನಂತರ ಆಳ್ವಿಕೆ ನಡೆಸಿದ ಕಾಂಗ್ರೆಸ್‌ ಪಕ್ಷ ಅಪಾಯಕಾರಿದರೆ, ಬಿಜೆಪಿ ಅದ್ಕಕಿಂತಲೂ ಹೆಚ್ಚು ಅಪಾಯಕಾರಿ ಪಕ್ಷವಾಗಿದೆ. ಚುನಾವಣಾ ಪೂರ್ವದಲ್ಲಿ ನರೇಂದ್ರ ಮೋದಿ ಸುಳ್ಳು ಭರವಸೆ ನೀಡಿ ಅಧಿಕಾರ ಹಿಡಿದರು. ಅಧಿಕಾರಕ್ಕೆ ಬಂದ 100 ದಿನಗಳ ಒಳಗಾಗಿ ಪ್ರತಿಯೊಬ್ಬರ ಬ್ಯಾಂಕ್‌ ಖಾತೆಗೆ 15 ಲಕ್ಷ ರೂ. ಜಮಾ ಮಾಡುವುದಾಗಿ ಭರವಸೆ ನೀಡಿದರು. ಐದು ವರ್ಷ ಆಡಳಿತ ನಡೆಸಿದರೂ ನಯಾಪೈಸೆ ಹಾಕದೆ ದೇಶದ ಜನರನ್ನು ವಂಚಿಸಿದ್ದಾರೆ ಎಂದು ಆರೋಪಿಸಿದರು.

Advertisement

ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸಿ ನಿರುದ್ಯೋಗ ಸಮಸ್ಯೆ ಹೋಗಲಾಡಿಸಲಾಗುವುದು ಎನ್ನುವುದು ಕೂಡ ಪೊಳ್ಳು ಆಶ್ವಾಸನೆಯಾಯಿತು. ಅಧಿಕಾರದ ಚುಕ್ಕಾಣಿ ಹಿಡಿದು ಯಾವುದೇ ಕೆಲಸ ಮಾಡದ ಮೋದಿ ಕಾರ್ಮಿಕ, ದಲಿತ, ರೈತ ವಿರೋನೀತಿ ಅನುಸರಿಸುತ್ತಿದ್ದಾರೆ. ಕೇಂದ್ರದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್‌ ಪಕ್ಷ ಉದ್ಯಮಿಗಳಿಗೆ ಬ್ಯಾಂಕಿನ ಮೂಲಕ ಸಾಲ ನೀಡಿತ್ತು. ಇದೀಗ ಅವೆಲ್ಲವೂ ದಿವಾಳಿ ಅಂಚಿಗೆ ತಲುಪಿದ್ದರಿಂದ ಬಿಜೆಪಿಯವರು ಯಾವುದೇ ಹಣ ವಸೂಲಿ ಮಾಡದೆ ರಕ್ಷಣೆಗೆ ಮುಂದಾಗಿದ್ದಾರೆ.

2016ರ ನವೆಂಬರ್‌ 8 ರಂದು 500, 1000 ರೂ. ಮುಖಬೆಲೆಯ ನೋಟು ಅಮಾನ್ಯಿಕರಣ ಮಾಡಿದ್ದರಿಂದ ಜನಸಾಮಾನ್ಯರು ಪರದಾಡಿದರೆ ಹೊರತು ಶ್ರೀಮಂತರು ಯಾವುದೇ ಸಮಸ್ಯೆ ಎದುರಿಸಲಿಲ್ಲ ಎಂದು ವಾಗ್ಧಾಳಿ ನಡೆಸಿದರು. 

ಕೇಂದ್ರ ಸರ್ಕಾರದಲ್ಲಿ ಕಳೆದ 70 ವರ್ಷಗಳಿಂದ ಆಡಳಿತ ನಡೆಸಿದ ಎಲ್ಲ ರಾಜಕೀಯ ಪಕ್ಷಗಳು ದಲಿತ ವಿರೋಧಿ ನೀತಿ ಅನುಸರಿಸಿವೆ. ಪರಿಶಿಷ್ಟ ಜಾತಿ ಮತ್ತು ವರ್ಗದ ಜನಪ್ರತಿನಿ ಧಿಗಳಲ್ಲಿ ಇಚ್ಛಾಶಕ್ತಿಯಿಲ್ಲ. ರಾಜ್ಯದಲ್ಲಿ ಎಸ್ಸಿ-ಎಸ್ಟಿ ಒಟ್ಟು 51 ಶಾಸಕರು, 6 ಸಚಿವರು, 7 ಜನ ಸಂಸದರು ಇದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಕೆಲಸ ಆಗಿಲ್ಲ. ಅಲ್ಲದೆ ದೇಶದ ಲೋಕಸಭೆಯಲ್ಲಿ ಎಸ್ಸಿ-ಎಸ್ಟಿಯ 135 ಸಂಸದರಿದ್ದು ಮನಸ್ಸು ಮಾಡಿದರೆ ದೇಶದ ಚಿತ್ರಣವನ್ನೆ ಬದಲಿಸಬಹುದಾಗಿತ್ತು. ಆದರೂ ಆ ಕೆಲಸ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಪ್ರಕಾಶ್‌, ಜಿಲ್ಲಾ ಉಪಾಧ್ಯಕ್ಷ ಮಹಂತೇಶ್‌ ಕೂನಬೇವು, ಪ್ರಧಾನ ಕಾರ್ಯದರ್ಶಿ ಎಸ್‌. ವೆಂಕಟೇಶ್‌, ಮುಖಂಡರಾದ ದೊಡ್ಡೆಟ್ಟಪ್ಪ, ಡಿ.ಟಿ. ರಾಜಗಿರಿ, ರುದ್ರಮುನಿ, ಗಿರೀಶ್‌, ಕೆ.ಟಿ. ಶಿವಕುಮಾರ್‌, ರುದ್ರಮುನಿ, ಶಿವಮೂರ್ತಿ, ಹೊನ್ನೂರಸ್ವಾಮಿ ಇದ್ದರು 

Advertisement

Udayavani is now on Telegram. Click here to join our channel and stay updated with the latest news.

Next