Advertisement

ಆಡಳಿತಾತ್ಮಕ ವರದಿ ಮಂಡನೆ ಇಲ್ಲ

12:11 PM Aug 12, 2018 | |

ಬೆಂಗಳೂರು: 2006ರಿಂದಲೂ ನೆನೆಗುದಿಗೆ ಬಿದ್ದಿರುವ, ಬಿಬಿಎಂಪಿಯ ಆಡಳಿತ ವೈಖರಿ ತಿಳಿಸುವ ಆಡಳಿತಾತ್ಮಕ ವರದಿ ಮಂಡನೆಗೆ ಈ ಬಾರಿ ಉಪಮೇಯರ್‌ ಮುಂದಾದರೂ, ಲೆಕ್ಕಪತ್ರ ಸ್ಥಾಯಿ ಸಮಿತಿಯಿಂದ ಅಗತ್ಯ ಸಹಕಾರ ದೊರೆಯದ ಹಿನ್ನೆಲೆಯಲ್ಲಿ ವರದಿ ಮಂಡನೆಯಾಗುತ್ತಿಲ್ಲ.

Advertisement

ಇತ್ತೀಚೆಗೆ ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ಮೇಯರ್‌ ಸಂಪತ್‌ರಾಜ್‌ ಒತ್ತಾಯದ ಮೇರೆಗೆ ಉಪಮೇಯರ್‌ ಪದ್ಮಾವತಿ ನರಸಿಂಹಮೂರ್ತಿ ಅವರು ಆಗಸ್ಟ್‌ ತಿಂಗಳ ಸಭೆಯಲ್ಲಿ ಆಡಳಿತಾತ್ಮಕ ವರದಿ ಮಂಡಿಸುವುದಾಗಿ ಘೋಷಿಸಿದ್ದರು. ಅದರಂತೆ ಲೆಕ್ಕಪತ್ರ ಸ್ಥಾಯಿ ಸಮಿತಿಗೆ ವರದಿ ನೀಡುವಂತೆ ಎರಡು ಬಾರಿ ಪತ್ರ ಬರೆದರೂ, ಪ್ರತಿಕ್ರಿಯೆ ಬಂದಿಲ್ಲ. ಜತೆಗೆ ಈ ಕುರಿತು ಲೆಕ್ಕಪತ್ರ ಸ್ಥಾಯಿ ಸಮಿತಿ ಸಭೆ ಕೂಡ ನಡೆಸದ ಹಿನ್ನೆಲೆಯಲ್ಲಿ ವರದಿ ಮಂಡನೆ ಮಾಡುತ್ತಿಲ್ಲ ಎಂದು ಉಪಮೇಯರ್‌ ತಿಳಿಸಿದ್ದಾರೆ.

ನಗರದ ಅಭಿವೃದ್ಧಿಗಾಗಿ ಕೈಗೊಳ್ಳಲಾದ ಆಡಳಿತಾತ್ಮಕ ಕ್ರಮಗಳು, ಬಿಬಿಎಂಪಿಗೆ ಸಂಬಂಧಿಸಿದ ನ್ಯಾಯಾಲಯದ ಪ್ರಕರಣಗಳ ಕುರಿತು ಮಾಹಿತಿ ಸೇರಿದಂತೆ ಇನ್ನಿತರ ಅಂಶಗಳನ್ನೊಂಡಂತೆ 2006-07ರಿಂದ 2012-13ನೇ ಸಾಲಿನವರೆಗಿನ ಆಡಳಿತಾತ್ಮಕ ವರದಿಯನ್ನು ಹೇಮಲತಾ ಗೋಪಾಲಯ್ಯ ಉಪಮೇಯರ್‌ ಆಗಿದ್ದ ಸಂದರ್ಭದಲ್ಲಿ ಮಂಡಿಸಿದ್ದರು. ಆದರೆ, ವರದಿಯಲ್ಲಿ ಲೋಪಗಳಿದ್ದ ಕಾರಣ ವರದಿ ಹಿಂಪಡೆದು, ಮರು ಮಂಡಿಸುವುದಾಗಿ ಹೇಳಿದ್ದರು. ಆದರೆ, ಈವರೆಗೆ ಯಾರು ವರದಿ ಮಂಡಿಸಿಲ್ಲ.

ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಆಡಳಿತಾತ್ಮಕ ವರದಿಯನ್ನು ಈ ಬಾರಿ ಮಂಡಿಸುವಂತೆ ಕೌನ್ಸಿಲ್‌ ಸಭೆಯಲ್ಲಿ ಮೇಯರ್‌ ಸಂಪತ್‌ರಾಜ್‌ ಸೂಚನೆ ನೀಡಿದ್ದರು. ಆದರೆ, ಲೆಕ್ಕಪತ್ರ ಸ್ಥಾಯಿ ಸಮಿತಿಯಿಂದ ವರದಿಯ ಕುರಿತು ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ ವರದಿ ಮಂಡಿಸುತ್ತಿಲ್ಲ ಎಂದು ಉಪ ಮೇಯರ್‌ ಪದ್ಮಾವತಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next