Advertisement
ತಮಗಾಗುತ್ತಿರುವ ಅನ್ಯಾಯದ ಬಗ್ಗೆ ಗಾರ್ಮೆಂಟ್ಸ್ ಮಹಿಳೆಯರು ಬೀದಿಗಿಳಿದು ಹೋರಾಟ ಮಾಡಿದ್ದಾರೆ. ಆದರೆ, ಸರ್ಕಾರ ಎಚ್ಚೆತ್ತುಕೊಂಡಿಲ್ಲ. ರಾಜ್ಯದಲ್ಲಿ 1,30,429 ಪುರುಷ ಕಾರ್ಮಿಕರು ಹಾಗೂ 4,05,174 ಮಹಿಳಾ ಕಾರ್ಮಿಕರು ಸೇರಿ ಒಟ್ಟು 5,35,603 ಮಂದಿ ರಾಜ್ಯದಲ್ಲಿರುವ ವಿವಿಧ ಗಾರ್ಮೆಂಟ್ಸ್‌ಗಳಲ್ಲಿ ದುಡಿಯುತ್ತಿದ್ದಾರೆ.
Related Articles
Advertisement
ಪತ್ರಿಕೆಗಳಲ್ಲಿ ಬಂದಂತಹ ವರದಿಗಳನ್ನಾಧಾರಿಸಿ, ಗಾರ್ಮೆಂಟ್ಸ್ ಮಹಿಳೆಯರ ಪರವಾಗಿ ಕೆಲಸ ಮಾಡುತ್ತಿರುವ ಸಂಘಟನೆಗಳಿಂದ ದೂರು ಸಂಗ್ರಹಿಸಿ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಬಹುದು. ಮಾನವ ಹಕ್ಕುಗಳ ಉಲ್ಲಂಘನೆ, ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಮೂಲಭೂತ ಸೌಕರ್ಯದ ಕೊರತೆ ಸೇರಿದಂತೆ ವಿವಿಧ ಸಮಸ್ಯೆಗಳನ್ನಾಧಾರಿಸಿ ಸರ್ಕಾರಕ್ಕೆ ಸಂಬಂಧಿಸಿದ ಅಂಗ ಸಂಸ್ಥೆಗಳು ದೂರು ದಾಖಲಿಸಿಕೊಂಡು ಕ್ರಮ ವಹಿಸಬೇಕು.
ಆದರೆ ಆದಾಗುತ್ತಿಲ್ಲ. ಸರ್ಕಾರಕ್ಕೆ ಎಲ್ಲವೂ ತಿಳಿದಿದ್ದು ಮೌನವಾಗಿದೆ. ಗಾರ್ಮೆಂಟ್ಸ್‌ನೊಳಗೆ ಲೈಂಗಿಕ ದೌರ್ಜನ್ಯ ತಡೆಗಟ್ಟುವ ಆಂತರಿಕ ಸಮತಿಗಳು ಮಹಿಳೆಯರನ್ನು ಇಂತಹ ವಿಚಾರದಲ್ಲಿ ಶಿಕ್ಷಿತರಾನ್ನಾಗಿ ಮಾಡುತ್ತಿಲ್ಲ. ಫ್ಯಾಕ್ಟರಿಯೊಳಗೆ ನಾಮಕಾವಸ್ಥೆಗೆ ಮಾತ್ರವೇ ಲೈಂಗಿಕ ದೌರ್ಜನ್ಯ ತಡೆಗಟ್ಟುವ ಆಂತರಿಕ ಸಮಿತಿಗಳಿವೆ. ಈ ಸಮಿತಿಗಳು ಮಹಿಳೆಯರ ಪರವಾದ ಹಕ್ಕುಗಳ ಬಗ್ಗೆ ಕಿಂಚಿತ್ತು ಯೋಚಿಸುವುದಿಲ್ಲ.
ಫ್ಯಾಕ್ಟರಿ ಪರವಾದ ಸಮಿತಿಗಳಾಗಿವೆ. ಅವು ಬದಲಾಗಬೇಕು ಎಂದು ಗಾರ್ಮೆಂಟ್ಸ್ ಸಂಘಟನೆಗಳು ತಿಳಿಸಿವೆ. ಗಾರ್ಮೆಂಟ್ಸ್‌ನಲ್ಲಿ ದುಡಿಯುತ್ತಿರುವ ಮಹಿಳೆಯರ ಹಕ್ಕುಗಳ ರಕ್ಷಣೆ, ಉದ್ಯೋಗ ಭದ್ರತೆ ಸೇರಿದಂತೆ ಅವರ ಹಿತರಕ್ಷಣೆ ಕಾಪಾಡುವುದು ಸರ್ಕಾರ, ಕೈಗಾರಿಕಾ ವಲಯ ಹಾಗೂ ಸಮಾಜದ ಜವಾಬ್ದಾರಿಯಾಗಿದೆ ಎಂದು ಗಾರ್ಮೆಂಟ್ಸ್ ಮಹಿಳೆಯರ ಹಿತಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳು ಅಭಿಪ್ರಾಯಪಟ್ಟಿವೆ.
ಸಮಿತಿ ರಚಿಸಲು ಕ್ರಮ: ಗಾರ್ಮೆಂಟ್ಸ್ ಮಹಿಳೆಯರು ಅನುಭವಿಸುತ್ತಿರುವ ಮಹಿಳೆಯರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕಳೆದ ಎರಡು ತಿಂಗಳ ಹಿಂದೆ ಸಮಿತಿ ರಚಿಸಬೇಕೆಂದು ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು. ಗಾರ್ಮೆಂಟ್ಸ್ ಮಾಲೀಕರು, ಕಾರ್ಮಿಕರ ಇಲಾಖೆಯ ಆಯುಕ್ತರು, ಗಾರ್ಮೆಂಟ್ಸ್ ಕಾರ್ಮಿಕರ ಪರವಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಘಟನೆಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳನ್ನೊಳಗೊಂಡ ಸಮಿತಿ ರಚಿಸಲು ಸರ್ಕಾರ ಕ್ರಮ ಕೈಗೊಂಡಿದೆ.
ಇದರಲ್ಲಿ ಮಹಿಳೆಯರು ಅನುಭವಿಸುತ್ತಿರುವ ದೌರ್ಜನ್ಯದ ಕುರಿತು ಕ್ರಮ ತೆಗೆದುಕೊಳ್ಳುವವರು ಇರಬೇಕು. ಹೀಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಥವಾ ಮಹಿಳಾ ಆಯೋಗದ ಅಧಿಕಾರಿಯೊಬ್ಬರನ್ನು ಈ ಸಮಿತಿಯಲ್ಲಿ ಸೇರಿಸಿಕೊಳ್ಳಬೇಕು ಎಂದು ಗಾರ್ಮೆಂಟ್ಸ್ ಕಾರ್ಮಿಕರ ಪರವಾದ ಸಂಘಟನೆಗಳು ಒತ್ತಾಯಿಸಿವೆ.
ದೌರ್ಜನ್ಯದ ಅರಿವೇ ಇರಲಿಲ್ಲ: ಇತ್ತೀಚಿಗೆ ಗಾರ್ಮೆಂಟ್ಸ್ ನೌಕರರಿಗೆ ಮೈಸೂರಿನಲ್ಲಿ ನಡೆದ ಕಾರ್ಯಾಗಾರದಲ್ಲಿ ಲೈಂಗಿಕ ದೌರ್ಜನ್ಯದ ಬಗ್ಗೆ ಮಾಹಿತಿ ನೀಡಲಾಯಿತು. ಈ ಕಾರ್ಯಾಗಾರಕ್ಕೆ ಬಂದಂತಹ ಮಹಿಳೆಯರಿಗೆ ಪುರುಷ ನಡೆಸುವ ಲೈಂಗಿಕ ದೌರ್ಜನ್ಯದ ಬಗ್ಗೆ ಅರಿವೇ ಇರಲಿಲ್ಲ ಎಂಬುದು ದುರದೃಷ್ಟಕರ ಸಂಗತಿ.
ಫ್ಯಾಕ್ಟರಿಗಳಲ್ಲಿರುವ ಆಂತರಿಕ ಲೈಂಗಿಕ ದೌರ್ಜನ್ಯ ತಡೆಗಟ್ಟುವ ಸಮಿತಿಗಳು ಈ ಬಗ್ಗೆ ಸರಿಯಾಗಿ ಗಾರ್ಮೆಂಟ್ಸ್ ಮಹಿಳೆಯರಿಗೆ ತರಬೇತಿ ನೀಡಿಲ್ಲದಿರುವು ಖೇದನಿಯ. ಹೀಗಾಗಿ ಬಹುತೇಕ ಯುವತಿಯರಿಗೆ ತಮ್ಮ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ಅರಿವೇ ಇರುವುದಿಲ್ಲ ಎಂದು ಕಾರ್ಮಿಕ ಸಂಘಟನೆಯ ಸದಸ್ಯರೊಬ್ಬರು ತಿಳಿಸಿದ್ದಾರೆ.
ಗಾರ್ಮೆಂಟ್ಸ್‌ಗಳಲ್ಲಿ ದುಡಿಯುವ ಮಹಿಳೆಯರನ್ನು ಏಕವಚನದಲ್ಲಿ ಕರೆಯುವುದು, ಅವರನ್ನು ಕೀಳಾಗಿ ಕಾಣುವ ದೃಷ್ಟಿಕೋನ ಬದಲಾಗಬೇಕು. ಗಾರ್ಮೆಂಟ್ಸ್ ಮಹಿಳೆಯರ ಹಿತ ಕಾಪಾಡುವುದು ಕೇವಲ ಸರ್ಕಾರ ಮತ್ತು ಕೈಗಾರಿಕ ವಲಯದಷ್ಟೇ ಅಲ್ಲ. ಸಮಾಜದ ಜವಾಬ್ದಾರಿ ಕೂಡ.-ಯಶೋಧಾ, ಮುನ್ನಡೆ ಸ್ವಯಂಸೇವಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ. ಸರ್ಕಾರ ಸ್ವಯಂಪ್ರೇರಿತಾ ದೂರು ದಾಖಲಿಸಿಕೊಂಡು ಮಹಿಳೆಯರ ರಕ್ಷಣೆಗೆ ಮುಂದಾಗಬೇಕು. ಸರ್ಕಾರ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಲು ಮುಂದಾದರೆ ಅಗತ್ಯವಾದ ಮಾಹಿತಿಗಳನ್ನು ಸಂಘಟನೆಗಳು ನೀಡಲಿವೆ.
-ರುಕ್ಮಿಣಿ ವಿ.ಪಿ, ಗಾರ್ಮೆಂಟ್ಸ್ ಲೇಬರ್ ಯೂನಿಯನ್‌ನ ಅಧ್ಯಕ್ಷೆ.