Advertisement

ದಕ್ಷಿಣ ಕನ್ನಡಕ್ಕೆ ಸದ್ಯವೇ ಇನ್ನೊಂದು ಮಕ್ಕಳ ದತ್ತು ಕೇಂದ್ರ

12:53 AM Aug 02, 2022 | Team Udayavani |

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರದಿಂದಲೇ ನೇರವಾಗಿ ನಿರ್ವ ಹಿಸಲ್ಪಡುವ ಮೊದಲ ಮಕ್ಕಳ ದತ್ತು ಕೇಂದ್ರವು ಶೀಘ್ರ ಆರಂಭಗೊಳ್ಳಲಿದೆ. ಇದರೊಂದಿಗೆ ಜಿಲ್ಲೆಯ ಒಟ್ಟು ಮಕ್ಕಳ ದತ್ತು ಕೇಂದ್ರಗಳ ಸಂಖ್ಯೆ ಎರಡಕ್ಕೆ ಏರಲಿದೆ.

Advertisement

ಜಿಲ್ಲೆಯ ಏಕೈಕ ದತ್ತು ಕೇಂದ್ರ 12 ವರ್ಷಗಳಿಂದ ಪುತ್ತೂರಿ ನಲ್ಲಿ ಸರಕಾರೇತರ ಸಂಸ್ಥೆಯ ಮೂಲಕ ನಿರ್ವಹಿಸಲ್ಪಡುತ್ತಿದೆ. ಆದರೆ ಇಲ್ಲಿ ಒತ್ತಡ ಹೆಚ್ಚಿರುವುದರಿಂದ ಮತ್ತೂಂದು ಕೇಂದ್ರ ಬೇಕೆಂಬ ಬೇಡಿಕೆ ಇತ್ತು. ಈಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿ ಯಿಂದಲೇ ಮಂಗಳೂರು ನಗರ ಅಥವಾ ಹೊರ ವಲಯ ದಲ್ಲಿ ಇನ್ನೊಂದು ಕೇಂದ್ರ ಆರಂಭವಾಗಲಿದೆ.

ಗರಿಷ್ಠ 10 ಮಕ್ಕಳ ಸಾಮರ್ಥ್ಯ
ದತ್ತು ಕೇಂದ್ರದಲ್ಲಿ 6 ವರ್ಷದ ವರೆಗಿನ ಗರಿಷ್ಠ 10 ಮಕ್ಕಳನ್ನು ಇರಿಸಿಕೊಂಡು ಆರೈಕೆ ಮಾಡ ಬಹುದು. ಆದರೆ ಪುತ್ತೂರಿನ “ಶ್ರೀ ರಾಮಕೃಷ್ಣ ಸೇವಾ ಸಮಾಜದ ವಾತ್ಸಲ್ಯ ಧಾಮ ಮಕ್ಕಳ ದತ್ತು ಕೇಂದ್ರ’ದಲ್ಲಿ 10ಕ್ಕಿಂತ ಅಧಿಕ ಮಕ್ಕಳಿರಬೇಕಾದ ಅನಿವಾರ್ಯ ಏರ್ಪಡು ತ್ತಿತ್ತು. ಕೆಲವೊಮ್ಮೆ 25 ಮಕ್ಕಳನ್ನು ಕೂಡ ಪಾಲನೆ ಮಾಡಲಾಗುತ್ತಿತ್ತು. ಪ್ರಸ್ತುತ ಇಲ್ಲಿ 16 ಮಕ್ಕಳಿದ್ದಾರೆ. ಮತ್ತೂಂದು ದತ್ತು ಕೇಂದ್ರ ಆರಂಭವಾದರೆ ಈ ಒತ್ತಡ ಕಡಿಮೆ ಯಾಗಲಿದೆ. ನೂತನ ದತ್ತು ಕೇಂದ್ರವೂ ಗರಿಷ್ಠ 10 ಮಕ್ಕಳ ಸಾಮರ್ಥ ಹೊಂದಿರಲಿದೆ.

ಕಾವೂರಿನಲ್ಲಿ ಸ್ಥಾಪನೆ?
ಪ್ರಸ್ತುತ ಬಾಲಕರ ಬಾಲಮಂದಿರ, ಬಾಲ ನ್ಯಾಯ ಮಂಡಳಿ ಬೋಂದೆಲ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅದೇ ಪರಿಸರ ದಲ್ಲಿ ದತ್ತು ಕೇಂದ್ರ ಆರಂಭಿಸಿದರೆ ಅನುಕೂಲ. ಈ ಹಿನ್ನೆಲೆಯಲ್ಲಿ ಕಾವೂರು ಭಾಗದಲ್ಲಿಯೇ ದತ್ತು ಕೇಂದ್ರ ಆರಂಭಿಸಲು ಇಲಾಖೆಯ ಅಧಿಕಾರಿಗಳು ನಿರ್ಧರಿಸಿದ್ದಾರೆ. ಕೇಂದ್ರವು ಮಕ್ಕಳ ಪಾಲನೆಗಾಗಿ ವೈದ್ಯರು, ದಾದಿಯರ ಸಹಿತ ಎಲ್ಲ ಅಗತ್ಯ ವ್ಯವಸ್ಥೆಗಳನ್ನು ಹೊಂದಿರಲಿದೆ. ಆರಂಭದಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸಲಿದೆ.

ಮಕ್ಕಳ ದತ್ತು: ಬೇಡಿಕೆ ಹೆಚ್ಚಳ
ಪ್ರಸ್ತುತ ಮಕ್ಕಳ ದತ್ತು ಕೇಂದ್ರ ಮತ್ತು ಜಿಲ್ಲಾ ಮಕ್ಕಳ ರಕ್ಷಣ ಘಟಕದಲ್ಲಿ ತಿಂಗಳಿಗೆ ಒಟ್ಟು ಸರಾಸರಿ ಸುಮಾರು 20 ಮಂದಿ ದಂಪತಿ ಮಕ್ಕಳಿಗಾಗಿ ಬೇಡಿಕೆ ಮಂಡಿಸಿ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಮಕ್ಕಳ ನೋಂದಣಿಯು ಜಿಲ್ಲಾ ದತ್ತು ಕೇಂದ್ರಗಳಲ್ಲಿ ನಡೆದರೂ ದತ್ತು ನೀಡುವ ಪ್ರಕ್ರಿಯೆಗಳು ರಾಷ್ಟ್ರಮಟ್ಟದ ಪೋರ್ಟಲ್‌ ಮೂಲಕವೇ ನಡೆಯುತ್ತವೆ. ಪ್ರಸ್ತುತ ಮಕ್ಕಳನ್ನು ದತ್ತು ಪಡೆಯಲು ಕನಿಷ್ಠ 3ರಿಂದ 7 ವರ್ಷಗಳ ವರೆಗೆ ಕಾಯಬೇಕಿದೆ. ಜಿಲ್ಲೆಯಲ್ಲಿ ಸದ್ಯ 300 ಮಂದಿ ದಂಪತಿ ನೋಂದಣಿ ಮಾಡಿಕೊಂಡು ದತ್ತು ಮಕ್ಕಳಿಗಾಗಿ ಕಾಯುತ್ತಿದ್ದಾರೆ. ಹೊಸ ಕೇಂದ್ರ ಆರಂಭಗೊಂಡರೆ ನೋಂದಣಿ ಪ್ರಕ್ರಿಯೆಗೂ ಅನುಕೂಲವಾಗಲಿದೆ.

Advertisement

ಉಡುಪಿಯಲ್ಲಿ ಒಂದು ಕೇಂದ್ರ
ಉಡುಪಿಯ ಸಂತೆಕಟ್ಟೆಯಲ್ಲಿ 2008ರಲ್ಲಿ ಆರಂಭಗೊಂಡ “ಶ್ರೀಕೃಷ್ಣಾನುಗ್ರಹ’ ಹೆಸರಿನ ಒಂದು ಮಕ್ಕಳ ದತ್ತು ಕೇಂದ್ರವಿದೆ. ಕೇಂದ್ರ ದಲ್ಲಿ 50 ಮಕ್ಕಳ ಪಾಲನೆಗೆ ಅವಕಾಶವಿದೆ. 92 ಮಂದಿ ಈಗಾಗಲೇ ಪೋರ್ಟಲ್‌ ಮೂಲಕ ನೋಂದಣಿ ಮಾಡಿ ಮಕ್ಕಳನ್ನು ದತ್ತು ಪಡೆದಿ ದ್ದಾರೆ. 300 ಮಂದಿ ನೋಂದಣಿ ಮಾಡಿ ಕೊಂಡು ಕಾಯುತ್ತಿದ್ದಾರೆ. ಈ ಹಿಂದೆ ಕುಂದಾಪುರದಲ್ಲಿ “ಸ್ಫೂರ್ತಿಧಾಮ’ ಹೆಸರಿನಲ್ಲಿ ಮಕ್ಕಳ ದತ್ತು ಕೇಂದ್ರವಿದ್ದು, ಅದನ್ನು ಕಾರಣಾಂತರ ಗಳಿಂದ ಸ್ಥಗಿತಗೊಳಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.

ಇಲಾಖೆಯ ವತಿಯಿಂದಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಕ್ಕಳ ದತ್ತು ಕೇಂದ್ರ ಆರಂಭಿಸಲು ಸರಕಾರ ಮಂಜೂರಾತಿ ನೀಡಿದೆ. ಕೇಂದ್ರವನ್ನು ಶೀಘ್ರ ಆರಂಭಿಸಲಾಗುವುದು. ಇದರಿಂದ ಈಗ ಇರುವ ಕೇಂದ್ರದ ಮೇಲಿನ ಒತ್ತಡ ಕಡಿಮೆಯಾಗಲಿದೆ.
-ಯಮುನಾ,
ಪ್ರಭಾರ ಜಿಲ್ಲಾ ಮಕ್ಕಳ ರಕ್ಷಣ ಅಧಿಕಾರಿ, ದ.ಕ. ಜಿಲ್ಲೆ

 -ಸಂತೋಷ್‌ ಬೆಳ್ಳಿಬೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next