Advertisement

ಹೊರಗೊಂದು ಯುದ್ಧ ನಡೆದಿದೆ ಒಳಗೊಂದು ಕದನ ಬೇಕೇ?

01:10 PM Apr 22, 2020 | mahesh |

“ಮನೆಯಲ್ಲಿ ಸುರಕ್ಷಿತವಾಗಿರಿ’ ಎಂಬ ಘೋಷಣೆ ವಿಶ್ವದೆಲ್ಲೆಡೆ ಸದ್ದು ಮಾಡುತ್ತಿದ್ದರೆ, ಮನೆಯೊಳಗೆ ಇರುವ ಕೌಸಲ್ಯಾಗೆ ಮಾನಸಿಕ ಅಭದ್ರತೆ, ಕಾಡತೊಡಗಿದೆ. ಹಾಗಾಗಿ ಅವರು
ಸ್ಕೈಪ್‌ ಮೂಲಕ ಕೌನ್ಸೆಲಿಂಗ್‌ಗಾಗಿ ನನ್ನನ್ನು ಸಂಪರ್ಕಿಸಿದರು. ಕೌಸಲ್ಯಾ ಈಗ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಅವರ ಮಗಳಿಗೆ ಆರು ವರ್ಷ. ಆ ಪುಟ್ಟ ಪೋರಿ, ಮನೆಯಲ್ಲಿ ಎಲ್ಲರ ಕಣ್ಮಣಿ. ಆಫಿಸ್‌ ಕೆಲಸ ಮಾಡುತ್ತಿದ್ದ ತಾಯಿಯನ್ನು ಒಮ್ಮೆ ಆಟಕ್ಕೆ ಕರೆದಿದ್ದಾಳೆ. ಕೆಲಸದಲ್ಲಿ ಬ್ಯುಸಿಯಾಗಿದ್ದ ಕೌಸಲ್ಯಾ, ಆಮೇಲೆ ಆಡೋಣ ಅಂದಾಗ, ಸುಮ್ಮನೆ ರೂಮಿನಿಂದ ಹೊರಗೆ ಹೋದ ಮಗಳು, ಅಜ್ಜಿಯ ಬಳಿ, ಅಂದರೆ ಕೌಸಲ್ಯಾರ ಅತ್ತೆಯ ಬಳಿ, ಅಮ್ಮ ಹೊಡೆದಳೆಂದು ದೂರು ನೀಡಿದ್ದಾಳೆ. ಆಗ ಅತ್ತೆ, ಕೌಸಲ್ಯಾಳನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಕೌಸಲ್ಯಾ ಎಷ್ಟು ಹೇಳಿದರೂ ಅತ್ತೆ ಕೇಳುತ್ತಿಲ್ಲ. “ಮಕ್ಕಳು ಎಂದಾದರೂ ಸುಳ್ಳು ಹೇಳುತ್ತವೆಯೆ?’ ಎಂಬುದು ಅವರ ವಾದ. ಮಾತಿಗೆ ಮಾತು ಬೆಳೆದು ಅತ್ತೆ, “ನಿಂಗೂ ನಂಗೂ ಸಂಬಂಧವೇ ಇಲ್ಲ’ ಎಂದು ಸೊಸೆಗೆ ಒಡ್ಡೊಡ್ಡಾಗಿ ಉತ್ತರ ನೀಡಿದಾಗ, ಕೌಸಲ್ಯಾಗೆ ಇನ್ನಿಲ್ಲದ ದುಃಖವಾಗಿದೆ.

Advertisement

ಕೌಸಲ್ಯಾ ಮನೆ ಬಿಟ್ಟು ಪಿ.ಜಿ.ಯಲ್ಲಿ ವಾಸ್ತವ್ಯ ಹೂಡಲು ನಿರ್ಧರಿಸಿ, ನನ್ನ ಬಳಿ ಕೌನ್ಸೆಲಿಂಗ್‌ಗಾಗಿ ಕಾಲ್‌ ಮಾಡಿದರು. ಈ ಮುಂಚೆಯೂ ಕೌಸಲ್ಯಾ ನನ್ನ ಬಳಿ ಬಂದಿದ್ದರು. ಆಕೆ ಗಂಡನ ಜೊತೆ
ಅನ್ಯೋನ್ಯವಾಗಿರುವುದನ್ನು ಅವರ ಅತ್ತೆ ಸಹಿಸಲಾರರು. ಸುಮ್ಮಸುಮ್ಮನೆ ಕಾರಣ ತೆಗೆದು ಮುಸುಮುಸು ಅಳುವುದಕ್ಕೆ ಶುರು ಮಾಡಿದರೆ, ಕೌಸಲ್ಯಾರ ಗಂಡ ಅಮ್ಮನನ್ನು ರಮಿಸಬೇಕಿತ್ತು.
ಲಾಕ್‌ಡೌನ್‌ ಆದಾಗಿನಿಂದ, ಅತ್ತೆ ಏನಾದರೊಂದು ವಿಷಯಕ್ಕೆ ಜಗಳ ಮಾಡುವುದು, ಕೌಸಲ್ಯಾ ಜೊತೆ ಮಾತು ಬಿಡುವುದು, ಒರಟಾಗಿ ಉತ್ತರಿಸುವುದು ಇದ್ದೇ ಇತ್ತು. “ಅಮ್ಮ ವಿಧವೆ, ನೀನೇ ಹೊಂದಿಕೊಂಡು ಹೋಗಬೇಕು’ ಅಂತ ಪತಿ ತಾಕೀತು ಮಾಡಿದಮೇಲಂತೂ ಕೌಸಲ್ಯಾರಿಗೆ ದಿಕ್ಕು ತೋಚದಾಗಿತ್ತು.

ಈ ಜೈವಿಕ ಯುದ್ಧದ ಸಂದರ್ಭದಲ್ಲಿ, ಮನೆಯೊಳಗೆ ಆಂತರಿಕ ಕಲಹಗಳು ಬೇಡ. ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು, ಸಾರ್ವಜನಿಕ ಆರೋಗ್ಯ ಕಾಪಾಡಲು ಪ್ರತಿಯೊಬ್ಬ ವ್ಯಕ್ತಿಯೂ
ಪಣತೊಡಬೇಕು. ವಿಪತ್ತಿನ ಈ ಸಮಯದಲ್ಲಿ ತ್ಯಾಗ ಮತ್ತು ತಾಳ್ಮೆಯ ಮನೋಶಕ್ತಿಯನ್ನು ಬೆಳೆಸಿಕೊಳ್ಳಬೇಕು. ನಂಬಿಕೆ, ವಿಶ್ವಾಸ ಮತ್ತು ಆಶಾವಾದ ನಮ್ಮೊಳಗೆ ಪುಟಿಯುತ್ತಿರಬೇಕು.
ಇಲ್ಲದಿದ್ದರೆ, ಬೇಕಿಲ್ಲದ ಕಾರಣಕ್ಕೆ ಜಗಳವಾಗಿ, ಮನಸ್ಸಿಗೆ ಒತ್ತಡ ಉಂಟಾಗುತ್ತದೆ.

ಪ್ರತಿಯೊಬ್ಬ ಮಹಿಳೆಯೂ ಯೋಧನ ರೀತಿ ಮನೆಯನ್ನು ಕಾಯುತ್ತಾಳೆ. ಮನೆಯಲ್ಲಿ ಕುಳಿತು ಆಫಿಸಿನ ಕೆಲಸ ಮಾಡುವಾಗ, ಮನೆಗೆಲಸವನ್ನೂ ಪೂರೈಸಿಯೇ ಆಕೆ ಕೆಲಸಕ್ಕೆ ಕೂರುವುದು. ಆಗ ಅತ್ತೆ, ಶಹಭಾಶ್‌ ಎಂದರೆ ಆಕೆಗೂ ಖುಷಿಯಾಗುತ್ತದೆ. ಹುಮ್ಮಸ್ಸು ಇಮ್ಮಡಿಯಾಗುತ್ತದೆ. “ಸದ್ಯಕ್ಕೆ ಪಿ.ಜಿ. ಯೋಚನೆ ಬಿಟ್ಟು, ಮನೆಯಲ್ಲೇ ಪಿ.ಜಿ. ತರಹ ದಿನ ಕಳೆಯುತ್ತೇನೆ’ ಎಂದರು ಕೌಸಲ್ಯಾ. ಅವರ ಪತಿಯೊಡನೆ ಸಮಾಲೋಚನೆ ಮಾಡಿ, ಸೌಮ್ಯ ಸ್ವಭಾವದ ಕೌಸಲ್ಯಾಗೆ ಮಾನಸಿಕ ಸ್ಥೈರ್ಯ ಕೊಡಿ ಎಂದು ಸಲಹೆ ನೀಡಿದ್ದೇನೆ. ಏಕಾಂತದಲ್ಲಿ ತಪಸ್ವಿಯಾಗಿ. ಮನೋಸ್ಥೈರ್ಯ ಬೆಳೆಸಿಕೊಳ್ಳಿ. ಏಕಾಂತ ಜಾಣನಿಗೆ ಸ್ವರ್ಗವಾದರೆ, ಮೂರ್ಖನಿಗೆ ಶಿಕ್ಷೆಯಾಗುತ್ತದೆ. ಆಯ್ಕೆ ನಿಮ್ಮದು.

ಡಾ. ಶುಭಾ ಮಧುಸೂದನ್‌ ಚಿಕಿತ್ಸಾ ಮನೋವಿಜ್ಞಾನಿ

Advertisement
Advertisement

Udayavani is now on Telegram. Click here to join our channel and stay updated with the latest news.

Next