Advertisement
ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಬಳಿಯ ಬಿದರೆ ಗ್ರಾಮದ ಸತೀಶ್ ಭಟ್ ಎನ್ನುವವರಿಗೆ ಸೇರಿದ ಅಡಿಕೆ ತೋಟದಲ್ಲಿ ಭೂಮಿ ಕುಸಿದು ನಷ್ಟವಾಗಿದೆ. ಸುಮಾರು 20 ಅಡಿ ಆಳಕ್ಕೆ ಭೂಮಿ ಕುಸಿದಿದ್ದು, ಒಂದು ಎಕರೆ ಪ್ರದೇಶದಲ್ಲಿದ್ದ ಅಡಿಕೆ, ಕಾಫಿ ಮತ್ತು ಕಾಳುಮೆಣಸು ನಾಶವಾಗಿದೆ. ತಾಲೂಕಿನ ಬೊಗಸೆ ವಡ್ಡಿ ಎಂಬಲ್ಲಿ ನಾಲ್ಕು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕುಸಿದು ಸಂಚಾರ ಸ್ಥಗಿತಗೊಂಡಿದೆ. ರಸ್ತೆಯ ಒಂದು ಬದಿ ಸಂಪೂರ್ಣ ಕುಸಿದ್ದಿದ್ದು, ಗ್ರಾಮಸ್ಥರು ಪರದಾಡುವಂತಾಗಿದೆ.
ಈ ವರ್ಷ ಮಳೆಗಾಲದ ಆರಂಭದಿಂದಲೂ ಮಲೆನಾಡು ಭಾಗದಲ್ಲಿ ಗುಡ್ಡ ಕುಸಿಯುತ್ತಲೇ ಇದ್ದು, ಪ್ರಮಾಣ ಹೆಚ್ಚಿದೆ. ಅಲ್ಲದೆ, ಜಿಲ್ಲೆಯ ಹಲವೆಡೆ ರಸ್ತೆಗಳು ಬಿರುಕು ಬಿಟ್ಟಿವೆ. ಭಾರೀ ಮಳೆಯಿಂದ ಮೂಡಿಗೆರೆ ತಾಲೂಕು ಚಾರ್ಮಾಡಿ ಘಾಟಿ ರಸ್ತೆಯ ಹಲವೆಡೆ ಗುಡ್ಡ ಕುಸಿದು ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಅದೇ ರೀತಿ ಕಳಸ-ಮಂಗಳೂರು ರಸ್ತೆಯಲ್ಲಿಯೂ ಗುಡ್ಡ ಕುಸಿದಿತ್ತು.
Related Articles
ಭೂಕುಸಿತ ಪ್ರಕರಣಗಳು ಕೊಪ್ಪ ತಾಲೂಕಿನಲ್ಲಿ ಹೆಚ್ಚಾಗಿದ್ದು, ಮುಂದುವರಿದಿದೆ. ತಾಲೂಕಿನ ಹೇರೂರು ಸಮೀಪ ಗುಡ್ಡ ಕುಸಿದಿತ್ತು. ಮೇಗುಂದ ಸಮೀಪದ ಗುಡ್ಡೆತೋಟದ ರಸ್ತೆಯಲ್ಲಿ ಬಿರುಕು ಬಿಟ್ಟಿತ್ತಲ್ಲದೆ ಭೂ ಕುಸಿತವುಂಟಾಗಿತ್ತು. ಶಾನುವಳ್ಳಿ ಗ್ರಾಮದಲ್ಲಿ ಭೂ ಕುಸಿತವುಂಟಾಗಿ ಬಾವಿಯೊಂದು 30 ಅಡಿ ಆಳಕ್ಕೆ ಕುಸಿದು ಸುರಂಗ ಉಂಟಾಗಿತ್ತು. ಹೇರೂರು ಗ್ರಾಮದ ಬಳಿ ಭೂ ಕುಸಿತವುಂಟಾಗಿತ್ತು. ಹಾಲುಗರಡಿ, ಬೈರದೇವರು, ಸಂವಾನೆ ಗ್ರಾಮಗಳಲ್ಲಿ ಗುಡ್ಡ ಕುಸಿದಿತ್ತು. ಬಂಡಿಗಡಿ ಸಮೀಪ ಭೂ ಕುಸಿತದಿಂದ ವಿದ್ಯುತ್ ಪರಿವರ್ತಕ ಹಾಗೂ 4 ವಿದ್ಯುತ್ ಕಂಬಗಳು ನೆಲಕ್ಕುರುಳಿ 4 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಬೂತನಕಾಡು ಬಳಿ ಭೂ ಕುಸಿತವುಂಟಾಗಿ ಕಾಫಿ, ಅಡಕೆ ತೋಟಗಳಿಗೆ ಮಣ್ಣು ನುಗ್ಗಿ ಬೆಳೆಹಾನಿಯಾಗಿತ್ತು.
ಇದಲ್ಲದೆ ನರಸಿಂಹರಾಜಪುರ ತಾಲೂಕಿನ ಮೇಲ್ಪಾಲ್ ಗ್ರಾಮದ ಬಳಿ ಹಲವು ಬಾರಿ ಭೂಕುಸಿತವುಂಟಾಗಿತ್ತು. ಶೃಂಗೇರಿ ತಾಲೂಕಿನಲ್ಲೂ ಸಹ ಹಲವೆಡೆ ಗುಡ್ಡ ಕುಸಿದಿದೆ.
Advertisement
ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ಬೆಟ್ಟ ಶ್ರೇಣಿಯಲ್ಲಿ ಹಲವು ಬಾರಿ ಗುಡ್ಡ ಕುಸಿದು ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.ಕಳೆದ ಹಲವು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಆರಂಭದಿಂದಲೂ ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗಿದೆ. ಗಾಳಿ ಮಳೆಯೊಂದಿಗೆ ಆಗಾಗ ಗುಡ್ಡ ಕುಸಿಯುತ್ತಲೇ ಇದೆ. ಭಾರೀ ಮಳೆಗೆ ಗುಡ್ಡ ಕುಸಿದು ಕೊಡಗು ಕೊಚ್ಚಿಹೋಗಿರುವುದು ಕಣ್ಣೆದುರಿಗಿದ್ದು, ಜಿಲ್ಲೆಯ ಮಲೆನಾಡು ಭಾಗದ ಜನರಲ್ಲಿ ಆತಂಕ ಮೂಡಿಸಿದೆ.