ಸಿಂಧನೂರು: ಕೆಲ ತಿಂಗಳಲ್ಲೇ ಚುನಾವಣೆ ಎದುರಾಗುತ್ತಿದೆ. ಒಂದೇ ದಿನ ಎರಡು ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಸಿಂಧನೂರಿನಲ್ಲಿ ನೋಡಿ ನೋಡಿ ಸಾಕಾಗಿದೆ. ಮೊದಲು ಕಾಂಗ್ರೆಸ್‌ನೊಳಗಿನ ಗೊಂದಲಕ್ಕೆ ಇತಿಶ್ರೀ ಹಾಡಿ ಎಂಬ ಕೂಗು ಶನಿವಾರ ಕಾಂಗ್ರೆಸ್ ಆಯೋಜಿಸಿದ್ದ ಬಹಿರಂಗ ಕಾರ್ಯಕ್ರಮದಲ್ಲಿ ಮಾರ್ದನಿಸಿತು.
ನಗರದ ಅನ್ನದಾನೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಭಾರತ ಜೋಡೋ ಯಾತ್ರೆ ಪೂರ್ವಭಾವಿ ಸಭೆ ಮುಕ್ತಾಯ ಹಂತದಲ್ಲಿ ಮಾಜಿ ಶಾಸಕರ ಬೆಂಬಲಿಗರು, ವಿಜಯಸಿಂಗ್ ಅವರಿಗೆ ತಮ್ಮ ಅಹವಾಲು ಸಲ್ಲಿಸಲು ಮುಂದಾದರು. ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಅವರ ಬೆಂಬಲಿಗರು ಬಹಿರಂಗವಾಗಿಯೇ ಆಕ್ರೋಶ, ಬೇಗುದಿ ಹೊರ ಹಾಕಿದರು.
ವೇದಿಕೆ ಏರಿದ ಬೆಂಬಲಿಗರು: ಭಾಷಣ ಮುಗಿಯುತ್ತಿದ್ದಂತೆ ವೇದಿಕೆ ಮುಂಭಾಗಕ್ಕೆ ಬಂದ ಮುಖಂಡರು, ಸಿಂಧನೂರಿನಲ್ಲಿ ತಾಲೂಕು ಕಾಂಗ್ರೆಸ್ ಸಮಿತಿ ಹೆಸರಿನಲ್ಲಿ ಮತ್ತೂಂದು ಕಾರ್ಯಕ್ರಮ ಆಯೋಜಿಸಿದ್ದಾರೆ. ಇದಕ್ಕೆ ಅವಕಾಶ ಇದೆಯೇ? ಚುನಾವಣೆ ಹತ್ತಿರ ಬರುತ್ತಿರುವ ಹೊತ್ತಿನಲ್ಲಿ ಈ ರೀತಿಯ ಬೆಳವಣಿಗೆ ಸರಿಯಲ್ಲ. ಮೊದಲು ಗೊಂದಲ ಸರಿಪಡಿಸಬೇಕು ಎಂದು ಒತ್ತಾಯಿಸಿದರು. ಸುತ್ತುವರಿದ ಕಾರ್ಯಕರ್ತರಿಗೆ ಸಮಾಧಾನ ಹೇಳಿದ ವಿಜಯಸಿಂಗ್ ಅವರು ಇದನ್ನು ಹೈಕಮಾಂಡ್ ಗಮನಕ್ಕೆ ತರುವುದಾಗಿ ಹೇಳಿದರು.
ಹೈಕಮಾಂಡ್ ಮೇಲೆ ವಿಶ್ವಾಸ: ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಅವರು ಕಾರ್ಯಕರ್ತರು, ಮುಖಂಡರ ಮನವೊಲಿಸಲು ಯತ್ನಿಸಿದರು. ಹೈಕಮಾಂಡ್‌ಗೆ ಎಲ್ಲ ಗೊತ್ತಾಗಿದೆ. ಈ ಸಂದರ್ಭದಲ್ಲಿ ಏನು ಮಾತನಾಡಬೇಡಿ. ಏನೂ ಆಗಲ್ಲ ಎಂದರು.
ಈ ನಡುವೆ ಲಿಂಗರಾಜ್ ಸಾಹುಕಾರ್ ಹಂಚಿನಾಳ ಮಾತನಾಡಿ, ಯಾರೂ ಕಂಗೆಡಬೇಕಿಲ್ಲ. ಈಗಾಗಲೇ ಹೈಕಮಾಂಡ್‌ನವರು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಅವರಿಗೆ ಸ್ಪಷ್ಟ ಸಂದೇಶ ಕೊಟ್ಟಿದ್ದಾರೆಂದು ಕಾರ್ಯಕರ್ತರ ಆಕ್ರೋಶ ತಿಳಿಗೊಳಿಸಲು ಯತ್ನಿಸಿದರು. ಆದರೂ ಕೆಲ ಕಾಲ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಅವರ ಬೆಂಬಲಿಗರು, ಮುಖಂಡರು ಸಮಾಧಾನಗೊಳ್ಳಲಿಲ್ಲ. ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಅವರೇ ಮಧ್ಯ ಪ್ರವೇಶಿಸಿ, ಯಾರೂ ಗೊಂದಲಕ್ಕೊಳಗಾಗಬೇಡಿ. ಈಗಾಗಲೇ ತಾಲೂಕಿನಲ್ಲಿ ಒಳ್ಳೆಯ ವಾತಾವರಣ ಇದೆ. ಮೂವರು, ನಾಲ್ಕು ಜನ ನಿಂತಾಗಲೇ ಗೊಂದಲವಾಗಿಲ್ಲ. ಈಗ ಯಾಕೆ? ನೀವೆಲ್ಲ ಸಮಾಧಾನ ಮಾಡಿಕೊಳ್ಳಬೇಕೆಂದು ಕಾರ್ಯಕರ್ತರ ಮನವೊಲಿಸಿದರು.