Advertisement

ಸಚಿವರಿಗೇ ಇಲ್ಲ ಸಕಾಲದ ಸಮರ್ಪಕ ಮಾಹಿತಿ!

03:45 AM Jan 29, 2017 | Harsha Rao |

ಬೆಂಗಳೂರು: ಜನರಿಗೆ ಅಗತ್ಯವಾದ ಸೇವೆಗಳನ್ನು ಕಾಲಮಿತಿಯೊಳಗೆ ಒದಗಿಸಲು ಅನುಕೂಲವಾಗುವಂತೆ ಸರ್ಕಾರ ಜಾರಿಗೊಳಿಸಿರುವ ಸಕಾಲ ಯೋಜನೆಯ ಮಾಸಿಕ ಪ್ರಗತಿ ವಿವರವೇ ಸಕಾಲದ ನಿಯಮ ಉಲ್ಲಂ ಸಿದೆ!

Advertisement

ಸಕಾಲ ಯೋಜನೆ ಮಾಸಿಕ ಪ್ರಗತಿ ವಿವರವನ್ನು ಪ್ರತಿ ತಿಂಗಳು ಕಾನೂನು ಸಚಿವರಿಗೆ ಸಲ್ಲಿಸಬೇಕಾಗಿದೆಯಾದರೂ ಒಂದು ವರ್ಷದಿಂದ ವಿವರ ಸಲ್ಲಿಸಿಲ್ಲ. ಇದನ್ನು ಆಕ್ಷೇಪಿಸಿ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಪತ್ರ ಬರೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಇಲಾಖೆ ಸಚಿವರಿಗೆ ಏಕಕಾಲದಲ್ಲಿ ಒಂದು ವರ್ಷದ ವರದಿ ಸಲ್ಲಿಸುವುದರ ಜತೆಗೆ ತರಾತುರಿಯಲ್ಲಿ
ಯೋಜನೆಯ ಅನುಷ್ಠಾನ ಪರಿಶೀಲನೆ ಕಾರ್ಯವನ್ನೂ ಕೈಗೊಂಡಿದೆ.

ಸಾಮಾನ್ಯ ಜನರಿಗೆ ಅಗತ್ಯವಾದ ನಾಗರಿಕ ಸೇವೆಗಳನ್ನು ಯಾವುದೇ ಮಧ್ಯವರ್ತಿಗಳ ಹಾವಳಿ ಮತ್ತಿತರ ಅಡೆತಡೆಗಳಿಲ್ಲದೆ ಕಾಲಮಿತಿಯೊಳಗೆ ಒದಗಿಸುವ ಮಹತ್ವದ ಉದ್ದೇಶದೊಂದಿಗೆ 2012ರಲ್ಲಿ ಸಕಾಲ ಯೋಜನೆ ಜಾರಿಯಾಯಿತು. ಅದರಂತೆ ಈವರೆಗೆ 63 ಇಲಾಖೆಗಳ 765 ಸೇವೆಗಳನ್ನು ಯೋಜನೆ ವ್ಯಾಪ್ತಿಗೆ ತರಲಾಗಿದೆ.

ಸಕಾಲದಡಿ ಈವರೆಗೆ 12.08 ಕೋಟಿ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ ಇತ್ತೀಚೆಗೆ 32 ಸಾವಿರ ಅರ್ಜಿಗಳು ಬಾಕಿ ಉಳಿದಿವೆ. ಕಾಲಮಿತಿಯೊಳಗೆ ಸೇವೆ ಒದಗಿಸುವ ಕಾರ್ಯ ಕೂಡ ಉತ್ತಮವಾಗಿಯೇ ನಡೆಯುತ್ತಿದೆ.

ಸೇವೆಯಲ್ಲಿ ವ್ಯತ್ಯಯ: ಆದರೆ, ಇತ್ತೀಚಿನ ದಿನಗಳಲ್ಲಿ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ, ಸೇವೆಯಲ್ಲಿ ವ್ಯತ್ಯಯವಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿವೆ. ರಾಜ್ಯದ ಕೆಲವೆಡೆ ಸಕಾಲ ಕೌಂಟರ್‌ಗಳನ್ನು ಮುಚ್ಚಲಾಗಿದೆ. ಕಚೇರಿಗಳಲ್ಲೂ ಸಕಾಲ ವ್ಯಾಪ್ತಿಗೆ ಬರುವ ಸೇವೆಗಳ ವಿವರ ಸರಿಯಾಗಿ ನಮೂದಿಸದಿರುವುದು,
ಕಾಲಮಿತಿಯ ವಿವರವನ್ನು ಪ್ರಕಟಿಸದಿರುವುದು, ಸಕಾಲದಡಿ ಅರ್ಜಿ ಸಲ್ಲಿಸಿದರೆ ಸ್ವೀಕರಿಸದೆ ವಿಳಂಬವಾಗಲಿದೆ ಎಂಬುದಾಗಿ ಹೇಳಿ ಹಣ ಪಡೆದು ದಾಖಲೆ ನೀಡುವುದು ನಿರಂತರವಾಗಿ ನಡೆಯುತ್ತಿದೆ ಎಂದು ಆರೋಪ ಕೇಳಿಬಂದಿತ್ತು.

Advertisement

ಮುಖ್ಯವಾಗಿ ಖಾತಾ, ಕಟ್ಟಡ ನಿರ್ಮಾಣ ನಕ್ಷೆ, ಸ್ವಾಧೀನ ಪತ್ರ ಇತರೆ ಪ್ರಮುಖ ದಾಖಲೆಗಳ ವಿತರಣೆಯಲ್ಲಿ ವ್ಯತ್ಯಯವಾಗುತ್ತಿದ್ದು, ಇದು ಸಕಾಲದ ವರ್ಚಸ್ಸನ್ನೇ ಮಂಕಾಗಿಸಿದೆ ಎಂಬ ಮಾತೂ ಇದೆ.

ಸಚಿವರಿಂದ ಪತ್ರ: ಆ ಹಿನ್ನೆಲೆಯಲ್ಲಿ ಕಾನೂನು ಸಚಿವ ಟಿ.ಬಿ.ಜಯಚಂದ್ರ ಪತ್ರ ಬರೆದು, ಸಕಾಲ ಯೋಜನೆಯ ಜಿಲ್ಲಾವಾರು ಮಾಸಿಕ ವಿವರ ಕಳೆದ ಒಂದು ವರ್ಷದಿಂದ ಸಲ್ಲಿಕೆಯಾಗುತ್ತಿಲ್ಲ. ಹಾಗಾಗಿ ವರ್ಷದಿಂದೀಚೆಗೆ ಬಿಡುಗಡೆಗೊಳಿಸಿದ ಸಕಾಲ ಸೇವೆಗಳ ಪ್ರಗತಿಯ ಮಾಸಿಕ ಪ್ರತಿ ವರದಿಗಳನ್ನು ಹಾಗೂ ಸಕಾಲ ಕಾಯ್ದೆಯಡಿ ಸೇರ್ಪಡೆಯಾದ ವಿವಿಧ ಇಲಾಖೆಗಳ ಸೇವೆಗಳ ವಿವರವನ್ನು ವಾರದೊಳಗೆ ಸಲ್ಲಿಸಬೇಕು. ಒಂದೊಮ್ಮೆ ಮಾಸಿಕ
ವರದಿ ಸಲ್ಲಿಕೆ ಸ್ಥಗಿತಗೊಳಿಸಿದ್ದರೆ ಅದಕ್ಕೆ ಕಾರಣ ನೀಡಿ ಇನ್ನು ಮುಂದೆ ಪ್ರತಿ ತಿಂಗಳ ಪ್ರಗತಿ ವರದಿ ಸಲ್ಲಿಸಬೇಕು ಎಂದು ತಾಕೀತು ಮಾಡಿದ್ದರು.

ತರಾತುರಿಯಲ್ಲಿ ತಪಾಸಣೆ: ಬಳಿಕ ಎಚ್ಚೆತ್ತುಕೊಂಡ ಅಧಿಕಾರಿಗಳು ಸಚಿವರಿಗೆ ವರದಿ ಸಲ್ಲಿಸಿದ್ದಾರೆ. ಅಲ್ಲದೆ, ಬೆಂಗಳೂರಿನಲ್ಲಿ ಸಕಾಲ ಯೋಜನೆ ಜಾರಿಯ ವಸ್ತುಸ್ಥಿತಿ ತಿಳಿಯಲು ದಿಢೀರ್‌ ತಪಾಸಣೆಗಳು ಆರಂಭವಾಗಿವೆ. ಇತ್ತೀಚೆಗೆ ಸಕಾಲ ಮಿಷನ್‌ ಅಧಿಕಾರಿಗಳು ಬಿಬಿಎಂಪಿ, ಬಿಡಿಎ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಪರಿಣಾಮಕಾರಿಯಾಗಿ ಸೇವೆ ಒದಗಿಸದಿರುವ ಬಗ್ಗೆ ಆಕ್ಷೇಪವನ್ನೂ ವ್ಯಕ್ತಪಡಿಸಿದ್ದರು. ಮುಂದಿನ ದಿನಗಳಲ್ಲಿ ಇತರೆ
ಜಿಲ್ಲೆಗಳಲ್ಲೂ ತಪಾಸಣೆ ನಡೆಸಲು ಸಿದ್ಧತೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next