ಕೊಪ್ಪಳ: ದೇಶದೆಲ್ಲೆಡೆ ಚೌತಿಯ ದಿನದಂದು ವಿಘ್ನ ವಿನಾಶಕನಿಗೆ ವಿಶೇಷ ಪೂಜೆ ನೆರವೇರುತ್ತದೆ. ಆದರೆ ತಾಲೂಕಿನ ಭಾಗ್ಯನಗರದ ಹಲವು ಕುಟುಂಬಗಳು ಚೌತಿಯ ಮರುದಿನ ಶುಕ್ರವಾರ ವಿನಾಯಕನ ವಾಹನ ಇಲಿರಾಯನಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಿಯಿಂದ ಬೇಡಿಕೊಳ್ಳುವ ಸಂಪ್ರದಾಯವು ಈ ಹಿಂದಿನಿಂದಲೂ ನಡೆದು ಬಂದಿದೆ.
ಹೌದು, ಭಾಗ್ಯನಗರದ ನೂರಾರು ಕುಟುಂಬಗಳು ಗಣಪತಿಯ ವಾಹನಕ್ಕೆ ವಿಶೇಷ ಪೂಜೆ ಸಲ್ಲಿಸಿ ನಮ್ರತೆಯಿಂದ ಬೇಡಿಕೊಳ್ಳುತ್ತವೆ. ಪಟ್ಟಣದಲ್ಲಿ ಹಲವು ಕೈ ಮಗ್ಗಗಳು ಸೇರಿದಂತೆ ಯಂತ್ರಚಾಲಿತ ಮಗ್ಗಗಳು ಇವೆ. ಇಲ್ಲಿನ ಹಲವು ವೈವಿದ್ಯಮ ಬಟ್ಟೆಗಳು ದೇಶ ವಿವಿಧ ರಾಜ್ಯಗಳು ಸೇರಿದಂತೆ ವಿದೇಶಗಳಿಗೂ ರಫ್ತಾಗುತ್ತವೆ.
ಕೈ ಮಗ್ಗಗಳ ಕುಟುಂಬದವರು ಚೌತಿ ದಿನದಂದು ಗಣೇಶನಿಗೆ ಪೂಜೆ ಸಲ್ಲಿಸುತ್ತಾರೆ. ನಂತರ ಪಂಚಮಿಯಂದು ಇಲಿಗೆ ಪೂಜೆ ಸಲ್ಲಿಸುತ್ತಾರೆ. ಇಲಿಗಳು ಯಾವುದೇ ದಾರ ಸೇರಿದಂತೆ ಮಗ್ಗಗಳಲ್ಲಿ ಹಾನಿಯನ್ನುಂಟು ಮಾಡದಿರಲಿ. ಇಲಿಗಳಿಂದ ನಮ್ಮ ವೃತ್ತಿಗೆ ಯಾವುದೇ ಅಡೆ ತಡೆ ಬಾರದಿರಲಿ. ಕೈ ಮಗ್ಗಗಳ ದುಡಿಮೆಯು ಚೆನ್ನಾಗಿ ನಡೆಯಲಿ. ಇಲಿಗಳು ದಾರ ಕಡಿದರೆ, ಬಟ್ಟೆಗಳನ್ನು ಕಡಿದರೆ, ನಮ್ಮ ವ್ಯಾಪಾರದಲ್ಲಿ ನಷ್ಟವಾಗಲಿದೆ. ಹಾಗಾಗಿ ಇಲಿಗಳು ಯಾವುದೇ ಹಾನಿ ಮಾಡದಿರಲಿ ಎನ್ನುವ ಉದ್ದೇಶದಿಂದ ಹಲವು ಕುಟುಂಬಗಳು ಇಲಿಗೆ ಪೂಜೆ ಸಲ್ಲಿಸುತ್ತಾ ಬಂದಿವೆ.
ಗಣಪತಿಗೆ ನೈವೇದ್ಯ ಮಾಡಿದಂತೆ ಇಲಿರಾಯನಿಗೂ ಸಹಿತ ಹೋಳಿಗೆ, ಕಡುಬು ಸೇರಿದಂತೆ ಸಿಹಿ ಪದಾರ್ಥಗಳನ್ನು ನೈವೇದ್ಯ ಮಾಡಿ ವಿಶೇಷ ಪೂಜೆ ಸಲ್ಲಿಸಿ ಕುಟುಂಬ ಸಮೇತ ಭಕ್ತಿಯಿಂದ ಬೇಡಿಕೊಳ್ಳುತ್ತಾರೆ. ನಮ್ಮ ಕುಟುಂಬವನ್ನು ಸಾಕುವ ಮಗ್ಗಳಿಗೆ ಯಾವುದೇ ತೊಂದರೆ ನೀಡದಿರು. ವರ್ಷ ಪೂರ್ತಿ ಕೈಮಗ್ಗಗಳ ಕೆಲಸ-ಕಾರ್ಯ ಸಾಂಘವಾಗಿ ನೆರವೇರಲಿ ಎಂದು ಇಲಿಗೆ ಬೇಡಿಕೊಳ್ಳುತ್ತಾರೆ.
ಅದರಂತೆ ಶುಕ್ರವಾರವೂ ಭಾಗ್ಯನಗರದಲ್ಲಿ ಮೂಶಿಕ ವಾಹನನಿಗೆ ವಿಶೇಷ ಪೂಜೆ ಸಲ್ಲಿಸಿದ್ದು ಕಂಡು ಬಂದಿತು. ಈ ಆಚರಣೆ ಪೂರ್ವಜರ ಕಾಲದಿಂದಲೂ ನಡೆದುಕೊಂಡು ಬಂದಿದೆ. ಅವರ ಕುಟುಂಬವು ಈಗಲೂ ಇಲಿಗೆ ಪೂಜೆ ಸಲ್ಲಿಸುವ ಸಂಪ್ರದಾಯ ಮುಂದುವರಿದಿದೆ.
ನಮ್ಮ ಪೂರ್ವಜರ ಸಂಪ್ರದಾಯದಂತೆ ಪ್ರತಿ ವರ್ಷ ಚೌತಿಯ ದಿನದಂದು ಗಣೇಶನಿಗೆ ಪೂಜೆ ಸಲ್ಲಿಸುತ್ತೇವೆ. ಪಂಚಮಿಯ ದಿನದಂದು ಇಲಿಗಳನ್ನು ಸಿದ್ಧಡಿಸಿ ಪೂಜೆ ಸಲ್ಲಿಸುತ್ತೇವೆ. ನಮ್ಮ ಮಗ್ಗಗಳಿಗೆ ಇಲಿಗಳು ಯಾವುದೇ ತೊಂದರೆ ಕೊಡದಿರಲಿ ಎಂದು ಬೇಡಿಕೊಳ್ಳುತ್ತೇವೆ. ಗಣೇಶನಿಗೆ ಅರ್ಪಿಸಿದಂತೆ ಇಲಿರಾಯನಿಗೂ ನೈವೇದ್ಯ ಅರ್ಪಿಸಿ ಪೂಜೆ ಸಲ್ಲಿಸುತ್ತೇವೆ.
ನಾಗೂಸಾ ಬಿ. ಮೇಘರಾಜ, ಭಾಗ್ಯನಗರ ನಿವಾಸಿ