Advertisement

ಬೆಕ್ಕು, ನಾಯಿಗಳ ಜತೆಯೂ ಇರಲಿ ಸಾಮಾಜಿಕ ಅಂತರ

02:24 AM May 02, 2020 | Sriram |

ಉಡುಪಿ: ರಾಜ್ಯದಲ್ಲಿ ಈ ವರೆಗೆ ಪ್ರಾಣಿಗಳಲ್ಲಿ ಕೋವಿಡ್‌-19 ಲಕ್ಷಣದ ಸೋಂಕು ಕಂಡುಬಂದಿಲ್ಲ. ಆದರೂ ಉಡುಪಿ ಜಿಲ್ಲೆಯಲ್ಲಿ ಪಶುಸಂಗೋಪನೆ ಇಲಾಖೆ ಪ್ರಾಣಿಗಳಲ್ಲಿ ಸೋಂಕು ಹರಡದಂತೆ ಎಚ್ಚರವಹಿಸಿದೆ.

Advertisement

ಎಲ್ಲ ರೀತಿಯ 86 ಸೋಂಕು ತಡೆಗೆ ಕೈಗೊಳ್ಳಬೇಕಾದ ಮುಂಜಾಗ್ರತೆಗಳ ಬಗ್ಗೆ ಇಲಾಖೆ ಅಗತ್ಯ ಸೂಚನೆಗಳನ್ನು ನೀಡಿದೆ. ಸಾರ್ವಜನಿಕರು ಆದಷ್ಟೂ ನಾಯಿ, ಬೆಕ್ಕು ಗಳನ್ನು ಹತ್ತಿರಕ್ಕೆ ಸೇರಿಸಿಕೊಳ್ಳಬಾರದು. ಅವುಗಳಿಂದ ದೂರವಿರಬೇಕು. ಪಶು ಇಲಾಖೆಯ ಕೇಂದ್ರಗಳ ವೈದ್ಯರು, ಸಿಬಂದಿ ಈ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಪ್ರಾಣಿಗಳಿಗೂ ಕ್ವಾರಂಟೈನ್‌!
ಪ್ರಾಣಿಗಳಲ್ಲಿ ಉಸಿರಾಟ ಸಮಸ್ಯೆ, ಮಂಕಾಗಿರು ವುದು, ಲವಲವಿಕೆಯಿಂದ ಇಲ್ಲದಿರುವುದು ಮತ್ತಿತರ ಲಕ್ಷಣಗಳು ಕಂಡಲ್ಲಿ ಪ್ರಾಣಿಯನ್ನು ಕೂಡಲೇ ಸಮೀಪದ ಸರಕಾರಿ ಪಶು ವೈದ್ಯರ ಸಲಹೆ ಪಡೆದು ಕ್ವಾರಂಟೈನ್‌ಗೆ ಸೇರಿಸಲು ಕ್ರಮ ವಹಿಸಲಾಗುತ್ತಿದೆ. ಪ್ರಾಣಿಗಳನ್ನು ಆರೈಕೆ ಮಾಡುವ ವ್ಯಕ್ತಿಗಳು ಕೋವಿಡ್‌-19 ವೈರಸ್‌ ಸೋಂಕಿನಿಂದ ಮುಕ್ತವಾಗಿದ್ದರೆ ಮಾತ್ರ ಪ್ರಾಣಿಗಳ ಪಾಲನೆ ಮಾಡುವಂತೆ ತಿಳಿಸಲಾಗಿದೆ.

ಕೋಳಿ ಗಂಟಲು ದ್ರವ ಮಾದರಿ ಸಂಗ್ರಹ
ಕೋಳಿ ಸಹಿತ ನಿರ್ದಿಷ್ಟ ಕೆಲವು ಪ್ರಾಣಿ ಮತ್ತು ಪಕ್ಷಿಗಳ ಗಂಟಲು ಮತ್ತು ಗುದ ಭಾಗದ ದ್ರವಗಳ ಮಾದರಿಗಳನ್ನು ಪಶು ಇಲಾಖೆ ಸಂಗ್ರಹಿಸುತ್ತಿದೆ. ನಾಲ್ಕು ವಿಧದ ಮಾದರಿಗಳನ್ನುಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿಕೊಡಲಾಗುತ್ತಿದೆ. ಮಂಗಳೂರಿನ ಪ್ರಯೋಗ ಕೇಂದ್ರದಲ್ಲಿ ಮಾದರಿಯನ್ನು ಪರೀಕ್ಷೆ ಒಳಪಡಿಸಲಾಗುತ್ತದೆ.ಹೆಚ್ಚಿನ ಪರೀಕ್ಷೆಯ ಆವಶ್ಯಕತೆ ಇದ್ದಲ್ಲಿ ಬೆಂಗಳೂರಿನ ಹೆಬ್ಟಾಳದ ಪಶು ಆರೋಗ್ಯ ಜೈವಿಕ ಸಂಸ್ಥೆಗೆ ಮಾದರಿಗಳನ್ನು ಕಳುಹಿಸಲಾಗುತ್ತದೆ. ಆದರೆ ಈವರೆಗೆ ಪಾಸಿಟಿವ್‌ ಪ್ರಕರಣಗಳು ಕಂಡು ಬಂದಿಲ್ಲ.

ಪರಿಶೀಲನೆ ನಡೆಯುತ್ತಿದೆ
ಪ್ರಾಣಿಗಳಲ್ಲಿ ರೋಗದ ಲಕ್ಷಣಗಳು ಕಂಡು ಬಂದರೆ ಅವುಗಳನ್ನು ಕ್ವಾರಂಟೈನ್‌ನಲ್ಲಿ ಇಡಲಾಗುತ್ತದೆ. ಸದ್ಯ ಜಿಲ್ಲೆಯಲ್ಲಿ ಅಂತಹ ಯಾವುದೇ ಸನ್ನಿವೇಶ ನಿರ್ಮಾಣವಾಗಿಲ್ಲ. ಪಶುವೈದ್ಯರ ತಂಡ ಕೋಳಿ ಫಾರ್ಮ್, ಹಂದಿ ಸಾಕಣೆ ಕೇಂದ್ರ, ಮಾಂಸದಂಗಡಿ, ಪಶು ಆಹಾರ ಮಾರಾಟ ಅಂಗಡಿಗಳಿಗೆ ತೆರಳಿ ಗುಣಮಟ್ಟ, ಶುಚಿತ್ವ, ಹೀಗೆ ವಿವಿಧ ರೀತಿಯ ಪರಿಶೀಲನೆ ನಡೆಸುತ್ತಿದೆ.
-ಡಾ| ಹರೀಶ್‌ ತಮಣ್ಕರ್‌, ಉಪನಿರ್ದೇಶಕರು,
ಪಶುಸಂಗೋಪನಾ ಇಲಾಖೆ, ಉಡುಪಿ

Advertisement
Advertisement

Udayavani is now on Telegram. Click here to join our channel and stay updated with the latest news.

Next