Advertisement

ಜಾನುವಾರು ಮೇವಿನ ಕೊರತೆ ಸಂಭವ

01:18 AM Mar 26, 2019 | Team Udayavani |

ಕುಂದಾಪುರ: ಈ ವರ್ಷ ಮುಂಗಾರು ಮತ್ತು ಹಿಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ಹೀಗಾಗಿ ಕರಾವಳಿ ಜಿಲ್ಲೆಗಳಲ್ಲಿ ಜಾನುವಾರು ಮೇವಿನ ಕೊರತೆ ಸಾಧ್ಯತೆ ದಟ್ಟವಾಗಿದೆ. ಉಡುಪಿಯಲ್ಲಿ ಅಂದಾಜು 83 ಸಾವಿರ ಮತ್ತು ದ.ಕ. ಜಿಲ್ಲೆಯಲ್ಲಿ ಅಂದಾಜು 2 ಲಕ್ಷಕ್ಕೂ ಮಿಕ್ಕಿ ಜಾನುವಾರುಗಳಿವೆ.

Advertisement

ಈಗ ಅಗತ್ಯದಷ್ಟು ಮೇವು ಇದೆಯಾದರೂ 15 ದಿನಗಳಲ್ಲಿ ಮಳೆ ಬಾರದಿದ್ದರೆ ಮೇವಿನ ಸಮಸ್ಯೆ ಉಂಟಾಗಬಹುದು ಎನ್ನುವ ಆತಂಕ ಹೈನುಗಾರರದ್ದು.

ಕೊರತೆಗೆ ಕಾರಣ
ಈಗಾಗಲೇ ನದಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಕೆಲವೆಡೆ ಬಾವಿ, ಕೆರೆಗಳಲ್ಲಿಯೂ ನೀರು ಇಂಗುತ್ತಿದೆ. ಕೃಷಿಗೂ ಬೇಕಾದಷ್ಟು ನೀರು ಸಿಗುತ್ತಿಲ್ಲ.
ತೋಟಕ್ಕೆ ನೀರಿಲ್ಲದೆ ಹುಲ್ಲು ಬೆಳೆಯು ತ್ತಿಲ್ಲ. ಇನ್ನು ಕೆಲವೆಡೆ ಅಗತ್ಯವಿರುವ ಸಮಯದಲ್ಲಿ ಸರಿಯಾಗಿ ಮಳೆ ಬಾರದೆ ಬೇಡಿಕೆಯಷ್ಟು ಬೈಹುಲ್ಲು ಸಂಗ್ರಹ ಆಗಿಲ್ಲ. ಇದು ಮೇವಿನ ಕೊರತೆಗೆ ಕೊಡುಗೆ ನೀಡಲಿದೆ.

ಹಾಲು ಸಂಗ್ರಹ ಕುಸಿತ
ಬೇಸಗೆಯಲ್ಲಿ ಮೇವಿನ ಕೊರತೆ ಉಂಟಾಗಿ ಹಾಲು ಸಂಗ್ರಹ ಪ್ರಮಾಣ ಇಳಿಮುಖ ಸಹಜ. ಉಡುಪಿ ಜಿಲ್ಲೆಯಲ್ಲಿ ಜೂನ್‌ನಿಂದ ನವೆಂಬರ್‌ ವರೆಗೆ ಪ್ರತಿ ತಿಂಗಳಿಗೆ 60ರಿಂದ 65 ಲಕ್ಷ ಲೀ. ಹಾಲು ಸಂಗ್ರಹವಾಗಿದ್ದರೆ, ಜನವರಿಯಲ್ಲಿ 58 ಲಕ್ಷ ಲೀ. ಮತ್ತು ಫೆಬ್ರವರಿಯಲ್ಲಿ 55 ಲಕ್ಷ ಲೀ.ಗಳಷ್ಟೇ ಸಂಗ್ರಹ ಆಗಿದೆ. ಇದೇ ಅವಧಿಯಲ್ಲಿ ದಿನಕ್ಕೆ 2 ಲಕ್ಷ ಲೀ. ಸಂಗ್ರಹವಾಗುತ್ತಿದ್ದದ್ದು ಈಗ 1.8 ಲಕ್ಷ ಲೀ. ಮತ್ತು ಅದಕ್ಕಿಂತಲೂ ಕಡಿಮೆ. ದ.ಕ.ದ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಅಲ್ಲಿಯೂ ಸಮೃದ್ಧ ಸೀಸನ್‌ನಲ್ಲಿ ದಿನಕ್ಕೆ 4 ಲಕ್ಷ ಲೀ. ಹಾಲು ಸಂಗ್ರಹವಾಗುತ್ತಿದ್ದರೆ ಈಗ ಕಡಿಮೆಯಿದೆ.

ಹೊರಜಿಲ್ಲೆಗಳಲ್ಲೂ ದುಬಾರಿ
ನಮಗೆ ಈಗ ಸಮಸ್ಯೆಯಿಲ್ಲ. ಆದರೆ ಹೊಳೆಯಲ್ಲಿ ನೀರು ಕಡಿಮೆಯಾದರೆ ಹುಲ್ಲಿನ ಕೊರತೆ ಕಾಡಲಿದೆ. ಕರಾವಳಿಗೆ ಹೆಚ್ಚಾಗಿ ಚಿಕ್ಕಮಗಳೂರು, ಮೂಡಿಗೆರೆ ಕಡೆಯಿಂದ ಬೈಹುಲ್ಲು ಪೂರೈಕೆಯಾ ಗುತ್ತದೆ. ಆದರೆ ಈ ಬಾರಿ ಅಲ್ಲಿಯೂ ಮಳೆ ಕೊರತೆಯಿಂದ ಬೈಹುಲ್ಲು ಸಾಕಷ್ಟಿಲ್ಲ. ಹೀಗಾಗಿ ಇರುವ ಸ್ವಲ್ಪ ಬೈಹುಲ್ಲು ತರಿಸುವುದು ದುಬಾರಿಯಾಗುತ್ತಿದೆ ಎನ್ನುವುದು ಹೈನುಗಾರರಾದ ಶಿರೂರು ಮೂರುಕೈ ಸಮೀಪದ ಪ್ರವೀಣ್‌ ಮುದ್ದುಮನೆ ಅವರ ಅಭಿಪ್ರಾಯ.

Advertisement

ಎಷ್ಟು ಮೇವು ಬೇಕು?
ಉಡುಪಿ ಜಿಲ್ಲೆಯಲ್ಲಿ 2012ರ ಗಣತಿ ಪ್ರಕಾರ 32 ಸಾವಿರ ಹೈನುಗಾರರಿದ್ದು, ಅಂದಾಜು 83 ಸಾವಿರ ಜಾನುವಾರುಗಳಿವೆ. ದಿನಕ್ಕೆ 957 ಟನ್‌ ಮೇವು ಬೇಕಾಗುತ್ತದೆ. ದ.ಕ.ದಲ್ಲಿ 2012ರ ಗಣತಿ ಪ್ರಕಾರ 2,57,415 ಜಾನುವಾರುಗಳಿವೆ. ದಿನಕ್ಕೆ ಅಂದಾಜು 9,009 ಟನ್‌ ಮೇವು ಅಗತ್ಯ. ಒಟ್ಟು 75,542 ಟನ್‌ ಮೇವು ಸಂಗ್ರಹವಿದೆ. ಉಭಯ ಜಿಲ್ಲೆಗಳಲ್ಲಿ ಸದ್ಯಕ್ಕೆ ಮೇವಿನ ಕೊರತೆ ಇಲ್ಲ. ಆದರೆ ಈಗ ಮಳೆ- ನೀರು ಇಲ್ಲವಾದ್ದರಿಂದ ಹಸುರು ಹುಲ್ಲು ಬೆಳೆಸಲು ಕಷ್ಟ. ಹೀಗಾಗಿ ಇನ್ನು 15 ದಿನಗಳಲ್ಲಿ ಮೇವಿನ ಕೊರತೆ ಉಂಟಾಗುವ ಸಾಧ್ಯತೆಯಿದೆ.

ಅಗತ್ಯಬಿದ್ದರೆ ಪೂರೈಕೆ
ಜಿಲ್ಲೆಯಲ್ಲಿ ಅಗತ್ಯಬಿದ್ದರೆ ಬೇರೆ ಕಡೆಗಳಿಂದ ತರಿಸಿ, ಪೂರೈಕೆ ಮಾಡಲಾಗುವುದು. ಬರ ಪೀಡಿತ ಜಿಲ್ಲೆಯಾಗಿ ಘೋಷಿಸಿರುವುದರಿಂದ ಪ್ರತಿ ತಾಲೂಕಿನಿಂದ ಕೃಷಿ, ತೋಟಗಾರಿಕೆ ಇಲಾಖೆ ಹಾಗೂ ರೈತರಿಂದ ಮಾಹಿತಿ ಪಡೆಯಲಾಗುವುದು. ಹಸಿರು ಮೇವು ಕೊರತೆಯಾದರೆ, ಎಷ್ಟು ಕೊರತೆ ಎನ್ನುವ ಕುರಿತು ಸರ್ವೇ ನಡೆಸಿ, ಅದರಂತೆ ಟೆಂಡರ್‌ ಮೂಲಕ ಬೇರೆಡೆಯಿಂದ ಹುಲ್ಲು ತರಿಸಲಾಗುವುದು. ಆದರೆ ನಮ್ಮಲ್ಲಿ ಈಗ ಅಷ್ಟೇನೂ ಸಮಸ್ಯೆಯಾಗುವ ಸಂಭವ ಇಲ್ಲ.
– ಡಾ| ಎಸ್‌. ಮೋಹನ್‌, ಉಪ ನಿರ್ದೇಶಕರು,
ಪಶು ವೈದ್ಯಕೀಯ ಇಲಾಖೆ, ದ.ಕ.

  • ಪ್ರಶಾಂತ್‌ ಪಾದೆ
Advertisement

Udayavani is now on Telegram. Click here to join our channel and stay updated with the latest news.

Next