Advertisement
“ಮುಂದಿನ ವರ್ಷದಿಂದ ನೀನು ಬೇಗ ಎದ್ದು, ಸ್ಕೂಲಿಗೆ ಹೋಗ್ಬೇಕು’- ಪ್ರಿ ಸ್ಕೂಲಿಗೆ ಹೋಗುತ್ತಿದ್ದ ಮಗಳು ಬೆಳಗ್ಗೆ ಏಳಲು ಹಠ ಮಾಡಿದಾಗೆಲ್ಲಾ ನಾನು ಅವಳನ್ನು ಹೆದರಿಸಲು ಹೇಳುತ್ತಿದ್ದ ಮಾತುಗಳಿವು. ಅವಳ ಸ್ಕೂಲ್ ಶುರುವಾಗುತ್ತಿದ್ದುದು ಒಂಬತ್ತೂವರೆಗೆ. ಮನೆ ಹತ್ತಿರದ ನರ್ಸರಿಯಾದ್ದರಿಂದ ಎಂಟೂವರೆಗೆ ಎದ್ದರೂ ನಡೆಯುತ್ತಿತ್ತು. ಆದರೆ, ಅವಳು, ಗಂಟೆ ಒಂಬತ್ತಾದರೂ ಹಾಸಿಗೆ ಬಿಟ್ಟೇಳದೆ ನನ್ನ ಬಿಪಿಯನ್ನು ಏರಿಸುತ್ತಿದ್ದಳು. ಆಗೆಲ್ಲಾ ನಾನು, “ನೋಡು, ಮುಂದಿನ ವರ್ಷದಿಂದ ದೂರದ ಸ್ಕೂಲ್‌ಗೆ ಹೋಗ್ಬೇಕು. ಬೇಗ ಎದ್ದು ರೆಡಿಯಾಗದಿದ್ದರೆ ಸ್ಕೂಲ್ ವ್ಯಾನ್ ನಿನ್ನ ಬಿಟ್ಟು ಹೋಗಿರುತ್ತೆ. ಆಮೇಲೆ ನಡೆದುಕೊಂಡೇ ಸ್ಕೂಲ್‌ಗೆ ಹೋಗ್ಬೇಕಾಗುತ್ತೆ ನೋಡ್ತಾ ಇರು’ ಅಂತೆಲ್ಲಾ ಹೆದರಿಸಲು ನೋಡುತ್ತಿದ್ದೆ. ಅವಳು ಹೆದರುತ್ತಿದ್ದಳ್ಳೋ ಇಲ್ಲವೋ, ನನಗಂತೂ ಹೆದರಿಕೆಯಾಗುತ್ತಿತ್ತು.
Related Articles
Advertisement
ಇಂತಿಪ್ಪ ನಾನು ಐದಾರು ತಿಂಗಳಿಂದ, ಹಾಗೋ ಹೀಗೋ ಮಗಳನ್ನು ಸಮಯಕ್ಕೆ ಸರಿಯಾಗಿ ಶಾಲೆಗೆ ಕಳಿಸುವ ಟಾಸ್ಕ್ನಲ್ಲಂತೂ ಯಶಸ್ವಿಯಾಗಿದ್ದೆ. ಬೆಳಗ್ಗಿನ ಸವಿ ನಿದ್ದೆಯನ್ನು ಮಗಳಿಗಾಗಿ ತ್ಯಾಗ ಮಾಡುತ್ತಿರುವ ನಾನೇ “ಜಗತ್ತಿನ ಬೆಸ್ಟ್ ಮದರ್’ ಅಂತೆಲ್ಲಾ ನನ್ನನ್ನು ನಾನೇ ಪ್ರಶಂಸಿಸಿಕೊಳ್ಳುತ್ತಿರುವಾಗಲೇ, ನನ್ನ ಪಾಲಿನ ವಿಲನ್ ಎದುರು ಬಂದು ನಿಂತಿದೆ. ಅದುವೇ ಚಳಿಗಾಲ!
ನನಗೆ ಮೊದಲಿಂದಲೂ ಚಳಿಗಾಲವೆಂದರೆ ಇಷ್ಟ. ಮದುವೆಗೂ ಮುನ್ನ, ಅಂದರೆ, ಶಾಲೆ-ಕಾಲೇಜು- ಉದ್ಯೋಗಕ್ಕೆ ಹೋಗುತ್ತಿದ್ದ ದಿನಗಳಲ್ಲಿ ಅಪ್ಪಿತಪ್ಪಿಯೂ ಚಳಿಗಾಲದಲ್ಲಿ ಬೇಗ ಎದ್ದವಳಲ್ಲ. ಮಹತ್ವದ ಪರೀಕ್ಷೆಗಳಿದ್ದ ದಿನವೂ ಮುಸುಕು ಹೊದ್ದು ಮಲಗಿದ್ದಿದೆ. ಎಬ್ಬಿಸಲು ಬಂದವರಿಗೆ, “ಮಲಗಿ, ಮಲಗಲು ಬಿಡಿ’ ಅಂತ ಹೇಳಿ ಬಾಯಿ ಮುಚ್ಚಿಸಿದ್ದಿದೆ. ಹೊದಿಕೆಯೊಳಗಿಂದ ಚಳಿಯನ್ನು ಅನುಭವಿಸುವುದೇ ಸ್ವರ್ಗಸುಖ ಅಂತೆಲ್ಲಾ ಚಳಿಯನ್ನು ಹೊಗಳಿದ್ದೂ ಇದೆ. ಆದರೆ, ಈಗ ನಾನೇ ಚಳಿಯನ್ನು ಶಪಿಸುವಂತಾಗಿರುವುದು ದುರಂತ.
ಕಳೆದೊಂದು ತಿಂಗಳಿಂದ ನನ್ನ ಪಾಡು ಯಾರಿಗೂ ಬೇಡ. ಮೈ ಕೊರೆಯುವ ಚಳಿಯಿಂದಾಗಿ ಬೆಳಗ್ಗೆ ಏಳಲು ಮನಸ್ಸಾಗುತ್ತಿಲ್ಲ. ಇನ್ನೊಂದೈದು ನಿಮಿಷ ಮಲಗುತ್ತೇನೆ ಅಂತ ಮಲಗಿ ಸ್ಕೂಲ್ ಬಸ್ ಮಿಸ್ಸಾದ, ಬೆಳಗ್ಗೆ ಅವಳಿಗಿಷ್ಟದ ಪೂರಿ ಮಾಡಿಕೊಡಲು ಸಾಧ್ಯವಾಗದ, ಗಡಿಬಿಡಿಯಲ್ಲಿ ಸಾಕ್ಸ್ ಇಲ್ಲದೆ ಶೂ ಮಾತ್ರ ಹಾಕಿಸಿ, ಕಳಿಸಬೇಕಾದ, ಬಾಕ್ಸ್‌ನಲ್ಲಿ ಬ್ರೆಡ್-ಜ್ಯಾಮ್ ತುಂಬಬೇಕಾದ; ಅಷ್ಟೇ ಯಾಕೆ, ಇವತ್ತೂಂದಿನ ರಜೆ ಹಾಕು ಪರವಾಗಿಲ್ಲ ಅಂತ ಮಗಳನ್ನು ತಟ್ಟಿ ಮಲಗಿಸಿದ, ಒಂದಿನ ಅವಳೇ ಬೇಗ ಎದ್ದು, ಅಮ್ಮಾ, ಸ್ಕೂಲಿದೆ ನಂಗೆ ಏಳಮ್ಮಾ ಅಂದ ಘಟನೆಯೂ ನಡೆದಿದೆ!
ಇನ್ನೂ ಒಂದೆರಡು ಬಾರಿ ಹೀಗಾದರೆ, “ನಿಮ್ಮಮ್ಮನನ್ನೇ ಕರ್ಕೊಂಡು ಬಾ, ಅವರಿಗೇ ಪನಿಶ್‌ಮೆಂಟ್ ಕೊಡ್ತೀನಿ’ ಅಂತ ಮಗಳ, ಟೀಚರ್ ಹೇಳಿಯಾರು. ಅಷ್ಟಾಗಿದ್ದರೆ ಪರವಾಗಿಲ್ಲ, “ಒಂದು ಮಗುವಿನ ಅಮ್ಮನಾಗಿದ್ದೀಯ. ಆದ್ರೂ ಬೆಳಗ್ಗೆ ಲೇಟಾಗಿ ಏಳ್ತೀಯಲ್ಲೇ. ಇನ್ನೂ ನಿಂಗೆ ಜವಾಬ್ದಾರಿ ಬಂದಿಲ್ವಾ?’ ಅಂತ ಅಮ್ಮನೂ ಫೋನಿನಲ್ಲಿ ಬೈದಿದ್ದಾರೆ. ಇನ್ನು ಈ ಚಳಿಗಾಲ ಮುಗಿಯುವುದರೊಳಗೆ ನನಗೆ ಏನೇನು ಕಾದಿದೆಯೋ, ಆ ದೇವರೇ ಬಲ್ಲ.
-ಪಾಲ್ಗುಣಿ