Advertisement

ಸಿಎಂ ಆಗಿ 5 ವರ್ಷ ಪೂರೈಸಿದ ತೃಪ್ತಿಯಿದೆ

12:51 PM Oct 07, 2018 | |

ಬೆಂಗಳೂರು: ಐದು ವರ್ಷಗಳ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಉತ್ತಮ ಕೆಲಸ ಮಾಡಿದ ಆತ್ಮತೃಪ್ತಿ ನನಗಿದೆ ಎಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ನಗರದ ದೇವರಾಜ ಅರಸು ಭವನದಲ್ಲಿ ಕರ್ನಾಟಕ ಅಹಲ್ಯಾಬಾಯಿ ಹೋಳ್ಕರ್‌ ಸಂಘ ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ “ಮಹಿಳಾ ಜಾಗೃತಿ ಸಮಾವೇಶ’ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇವರಾಜ ಅರಸು ಅವರ ಬಳಿಕ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಪೂರೈಸಿದ್ದೇನೆ.

ಯಾರು ಏನೇ ಹೇಳಿಕೊಳ್ಳಲಿ, ನನಗೆ ತೃಪ್ತಿ ತರುವಂತಹ ಕೆಲಸಗಳನ್ನು ಮಾಡಿದ್ದೇನೆ ಎಂದು ತಿಳಿಸಿದರು. ನಾನು ಐದು ವರ್ಷ ಯಶಸ್ವಿಯಾಗಿ ಅಧಿಕಾರ ಪೂರೈಸಿದ್ದಕ್ಕೆ ಮತ್ತೆ ಮುಖ್ಯಮಂತ್ರಿ ಆಗಿಬಿಡುತ್ತೇನೆಂದು ಕೆಲವರು ಹೊಟ್ಟೆಕಿಚ್ಚು ಪಟ್ಟುಕೊಂಡರು. ಅಸೂಯೆ, ಹೊಟ್ಟೆಕಿಚ್ಚಿಗೆ ಮದ್ದಿದೆಯೇ ಎಂದು ಪ್ರಶ್ನಿಸಿದರು.

ಮನುವಾದದಿಂದಾಗಿ ಮಹಿಳೆಯರು ಹಾಗೂ ಶೂದ್ರರು ನೂರಾರು ವರ್ಷಗಳ ಕಾಲ ಅಕ್ಷರ ಕಲಿಕೆಯಿಂದಾಗಿ ದೂರ ಉಳಿಯುವಂತಾಗಿತ್ತು. ಹೀಗಾಗಿ ಮಹಿಳೆಯರು ನೂರಕ್ಕೆ ನೂರರಷ್ಟು ವಿದ್ಯಾವಂತರಾಗಬೇಕಿದ್ದು, ಹೆಣ್ಣು ಮಕ್ಕಳಿಗೆ ಶಿಕ್ಷಣ ಸಿಕ್ಕಾಗಷ್ಟೇ ಅವರು ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು. 

ಮಹಿಳೆಯರು ಹಾಗೂ ಪುರುಷರಿಗೆ ಇಂದಿಗೂ ರಾಜಕೀಯ ಪ್ರಜ್ಞೆ ಬಂದಿಲ್ಲ. ಯಾರೇ ಆಗಲಿ ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಅಂಟಿಕೊಳ್ಳಬಾರದು. ಬದಲಿಗೆ ಒಂದು ಸಿದ್ಧಾಂತಕ್ಕೆ ನಂಬಿ ಅದರ ಹಾದಿಯಲ್ಲಿ ಸಾಗಬೇಕು. ಎಲ್ಲ ರಾಜಕೀಯ ಪಕ್ಷಗಳು ಇಂದು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತೇವೆ. ಆದರೆ, ನಿಜವಾಗಿರುವ ಸಾಮಾಜಿಕ ನ್ಯಾಯ, ಸಮಾನತೆಯ ಪರವಾದ ಬದ್ಧತೆ ಹೊಂದಿರುವವರು ಯಾರು ಎಂಬುದನ್ನು ಜನ ತಿಳಿಯಬೇಕಿದೆ ಎಂದು ತಿಳಿಸಿದರು.

Advertisement

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮುದಾಯದ ಸಾಧಕರನ್ನು ಸನ್ಮಾನಿಸಲಾಯಿತು. ಈ ವೇಳೆ ಸಚಿವರಾದ ಬಂಡೆಪ್ಪ ಕಾಶೆಂಪುರ, ಆರ್‌.ಶಂಕರ್‌, ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ.ರೇವಣ್ಣ, ಹೊಸದುರ್ಗದ ಕಾಗಿನೆಲೆ ಮಹಾಸಂಸ್ಥಾನ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ, ಅಹಲ್ಯಾಬಾಯಿ ಹೋಳ್ಕರ್‌ ಸಂಘದ ಅಧ್ಯಕ್ಷೆ ಪದ್ಮಾ ಸೋಮಶೇಖರ್‌, ಸಂಸ್ಥಾಪಕ ಅಧ್ಯಕ್ಷೆ ಯಲ್ಲಮ್ಮ, ಪ್ರದೇಶ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಂ.ರಾಮಚಂದ್ರಪ್ಪ, ಅಕ್ಕಮಹಾದೇವಿ ಮಹಿಳಾ ವಿದ್ಯಾಲಯದ ಕುಲಸಚಿವೆ ಡಾ.ಸುನಂದಮ್ಮ ಸೇರಿದಂತೆ ಪ್ರಮುಖರು ಹಾಜರಿದ್ದರು. 

ಮಹಿಳೆಯರು ಓಟು ಹಾಕಿದ್ದಾರಾ?: ಮಹಿಳೆಯರ ಸಮಗ್ರ ಅಭಿವೃದ್ಧಿಗಾಗಿ ಹಲವು ಯೋಜನೆ ಜಾರಿಗೆ ತಂದಿದ್ದು, ಕನಕಪುರ ಹಾಗೂ ಕಲಬುರ್ಗಿಯಲ್ಲಿ ಮಹಿಳೆಯರಿಗೆಂದೇ ಪ್ರತ್ಯೇಕ ಕೈಗಾರಿಕಾ ಪ್ರದೇಶಗಳನ್ನು ನಿರ್ಮಿಸಲಾಗಿದೆ. ಜತೆಗೆ ಕೆಐಎಡಿಬಿ ವತಿಯಿಂದ ಕೈಗಾರಿಕಾ ನಿವೇಶನ ಹಂಚಿಕೆ ವೇಳೆ ಹಿಂದುಳಿದ ವರ್ಗದ ಮಹಿಳೆಯರಿಗೆ ಶೇ.25 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಶೇ.50ರಷ್ಟು ಸಬ್ಸಿಡಿ ನೀಡಲಾಗುತ್ತಿದೆ.

ಅಬಕಾರಿ, ತೆರಿಗೆಯಲ್ಲಿ ವಿನಾಯ್ತಿ ನೀಡಲಾಗಿದೆ. ಇಷ್ಟೆಲ್ಲಾ ಯೋಜನೆಗಳನ್ನು ಕೊಟ್ಟರೂ ಹೆಣ್ಣು ಮಕ್ಕಳು ಓಟು ಹಾಕಿದ್ದಾರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಅದಕ್ಕೆ ಸಭೆಯಲ್ಲಿದ್ದ ಮಹಿಳೆಯರು “ನಾವು ಓಟು ಹಾಕಿದ್ದೀವಿ’ ಎಂದು ಕೂಗಿದರು. ಅದಕ್ಕೆ ಸಿದ್ದರಾಮಯ್ಯ, ನೀವಲ್ಲಮ್ಮ… ಉಳಿದವರು ಎಂದು ಹೇಳಿ ನಕ್ಕರು. 

ಉಚಿತ ಶಿಕ್ಷಣ ಹಾಗೂ ಪಾಸ್‌ ದೊರೆಯುತ್ತದೆ: ಹೆಣ್ಣು ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ ಪದವಿವರೆಗೆ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಉಚಿತ ಶಿಕ್ಷಣ ಹಾಗೂ ಅವರ ಅನುಕೂಲಕ್ಕಾಗಿ ಉಚಿತ ಬಸ್‌ ಪಾಸ್‌ ಯೋಜನೆ ಘೋಷಿಸಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದಾಗ, ಸಭಿಕರು ಇನ್ನೂ ಜಾರಿಯಾಗಿಲ್ಲ ಎಂದು ಕೂಗಿದರು.

ಅದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ ಮುಂದುವರಿಸುವುದಾಗಿ ಹೇಳಿದ್ದು, ಈ ಬಗ್ಗೆ ಸಮನ್ವಯ ಸಮಿತಿಯಲ್ಲಿಯೂ ಚರ್ಚಿಸಿದ್ದು ಎರಡು ಜಾರಿಯಾಗಲಿವೆ ಎಂದು ಭರವಸೆ ನೀಡಿದರು.

ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದ ಅಭಿಮಾನಿಗಳು: ಸಿದ್ದರಾಮಯ್ಯ ಅವರು ಕಾರ್ಯಕ್ರಮಕ್ಕೆ ಆಗಮಿಸಿದಾಗ ಅವರತ್ತ ಧಾವಿಸಿದ ಮಹಿಳೆಯರು ನಾ ಮುಂದು, ತಾ ಮುಂದೆ ಎಂದು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅವರನ್ನು ಸುತ್ತುವರಿದರು. ಆದರೆ, ಸಿದ್ದರಾಮಯ್ಯ ಅವರು ನಗುಮುಖದಿಂದಲೇ ಅಭಿಮಾನಿಗಳೊಂದಿಗೆ ಸೆಲ್ಫಿಗೆ ಫೋಸ್‌ ಕೊಟ್ಟರು. ಇದೇ ವೇಳೆ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಬೇಕು, ಪ್ರಧಾನಮಂತ್ರಿ ಆಗಬೇಕೆಂಬ ಘೋಷಣೆಗಳು ಕೇಳಿಬಂದವು. 

ರಮೀಳಾ ಅವರಿಗೆ ಶ್ರದ್ಧಾಂಜಲಿ: ಗುರುವಾರ ತಡರಾತ್ರಿ ಹೃದಯಾಘಾತದಿಂದ ಮೃತಪಟ್ಟ ಬಿಬಿಎಂಪಿ ಉಪಮೇಯರ್‌ ರಮೀಳಾ ಉಮಾಶಂಕರ್‌ ಅವರಿಗೆ ಕಾರ್ಯಕ್ರಮದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next