Advertisement

ಅಗಸ್ಟಾದಲ್ಲಿ ಕುಟುಂಬ ಭಾಗಿಯಾಗಿದ್ದಕ್ಕೆ ದಾಖಲೆ ಇದೆ

11:49 AM Apr 08, 2019 | Team Udayavani |

ಹೊಸದಿಲ್ಲಿ: ಬಹುಕೋಟಿ ಹಗರಣದ ವಿವಿಐಪಿ ಕಾಪ್ಟರ್‌ ಹಗರಣದ ಕುರಿತು ಜಾರಿ ನಿರ್ದೇಶನಾಲಯ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಿದ ಬೆನ್ನಲ್ಲೇ ಅದನ್ನು ರಾಜಕೀಯ ಅಸ್ತ್ರವಾಗಿಸಿಕೊಂಡ ಪ್ರಧಾನಿ ಮೋದಿ, ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು. “ಮೊದಲ ಕುಟುಂಬ’ ಭಾಗಿಯಾಗಿರುವುದಕ್ಕೆ ಸಾಕ್ಷ್ಯವಿದೆ ಎಂದು ಹೇಳಿರುವ ಅವರು, ಆರೋಪ ಪಟ್ಟಿಯಲ್ಲಿ ಎ.ಪಿ. ಮತ್ತು ಫಾಮ್‌ (ಫ್ಯಾಮಿಲಿ- ಕುಟುಂಬ) ಎಂಬುದರ ಉಲ್ಲೇಖವಿದೆ ಎಂದು ಹೇಳಿದ್ದಾರೆ.

Advertisement

ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಂಧಿತನಾಗಿರುವ ಮಧ್ಯವರ್ತಿ (ಕ್ರಿಶ್ಚಿಯನ್‌ ಮೈಕೆಲ್‌) ವಿಚಾರಣೆ ವೇಳೆ ಎರಡು ಹೆಸರುಗಳನ್ನು ಪ್ರಸ್ತಾವ ಮಾಡಿದ್ದಾನೆ. ಎ.ಪಿ. ಎಂದರೆ ಅಹ್ಮದ್‌ ಪಟೇಲ್‌, ಫಾಮ್‌ ಎಂದರೆ ಫ್ಯಾಮಿಲಿ. ನೀವು ಅಹ್ಮದ್‌ ಪಟೇಲ್‌ ಹೆಸರು ಕೇಳಿ ದ್ದೀರಾ? ಅವರು ಯಾವ ಕುಟುಂಬಕ್ಕೆ ಹೆಚ್ಚು ಹತ್ತಿರ ವಾದವರು?’ ಎಂದು ಸಾರ್ವಜನಿಕರನ್ನು ಉದ್ದೇಶಿಸಿ ಪ್ರಧಾನಿ ಪ್ರಶ್ನೆ ಮಾಡಿದರು. ಅದಕ್ಕೆ ಸಾರ್ವಜನಿಕರು ಉತ್ತರಿಸಿದಾಗ “ನಿಮಗೆ ಗೊತ್ತಿದೆ’ ಎಂದರು. ಈ ಮೂಲಕ ಚುನಾವಣೆಯಲ್ಲಿ ಅಗಸ್ಟಾ ಹಗರಣ ವಿಚಾರವೂ ಪ್ರಸ್ತಾವವಾಗಿದೆ.

ಕಾಂಗ್ರೆಸ್‌ ಮತ್ತು ಭಷ್ಟಾಚಾರಕ್ಕೆ ಬಿಟ್ಟಿರಲಾರದ ನಂಟು ಎಂದು ಹೇಳಿದ ಪ್ರಧಾನಿ ಮೋದಿ, ಕಾಂಗ್ರೆಸ್‌ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಭ್ರಷ್ಟಾಚಾರ ನಿಯಂತ್ರಣವಿಲ್ಲದೆ ನಡೆಯುತ್ತಿದೆ ಎಂದು ಟೀಕಿಸಿದರು. ಅಭಿವೃದ್ದಿ ವೆಂಟಿಲೇಟರ್‌ಗೆ ತೆರಳುತ್ತದೆ ಎಂದು ಲೇವಡಿ ಮಾಡಿದರು.

ಜೇಟ್ಲಿ ವಾಗ್ಧಾಳಿ
ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪೂರಕ ಆರೋಪಪಟ್ಟಿಯಲ್ಲಿನ ಅಂಶಗಳಿಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮೌನವಾಗಿರುವುದೇಕೆ ಎಂದು ಪ್ರಶ್ನಿಸಿದ್ದಾರೆ. “ಆರ್‌ಜಿ, ಎಪಿ ಫಾಮ್‌’ ಎಂದು ದಾಖಲೆಗಳಲ್ಲಿ ಉಲ್ಲೇಖವಾಗಿರುವ ಅಂಶಗಳ ಬಗ್ಗೆ ಅವರು ಸ್ಪಷ್ಟನೆ ನೀಡಲಿ ಎಂದು ಆಗ್ರಹಿಸಿದರು.

1986ರಿಂದಲೂ ಪರಿಚವಿತ್ತು
ವಿವಿಐಪಿ ಕಾಪ್ಟರ್‌ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ.)ನಾಲ್ಕನೇ ಪೂರಕ ಆರೋಪ ಪಟ್ಟಿ ಸಲ್ಲಿಸಿದೆ. ಅದರಲ್ಲಿ ಕ್ರಿಶ್ಚಿಯನ್‌ ಮೈಕೆಲ್‌ಗೆ 1986ರಿಂದಲೇ “ಶ್ರೀಮತಿ ಗಾಂಧಿ’ ಪರಿಚಯವಿದೆ ಎಂದು ಉಲ್ಲೇಖೀಸಲಾಗಿದೆ. ಮೈಕೆಲ್‌ ಬಳಿ ಕೆಲಸ ಮಾಡುತ್ತಿದ್ದ ಜೆ.ಬಿ.ಸುಬ್ರಹ್ಮಣ್ಯನ್‌ ಎಂಬಾತನ ಬಳಿಯಿಂದ ಹಾರ್ಡ್‌ಡಿಸ್ಕ್ನಿಂದ ಈ ಮಾಹಿತಿಯನ್ನು ಇ.ಡಿ. ವಶಪಡಿಸಿಕೊಂಡಿದೆ.

Advertisement

ಯಾರ ಹೆಸರನ್ನೂ ಹೇಳಿಲ್ಲ
ಡೀಲ್‌ಗೆ ಸಂಬಂಧಿಸಿದಂತೆ ಯಾರ ಹೆಸರನ್ನೂ ಹೇಳಿಲ್ಲ. ಮಾಧ್ಯಮಗಳಿಗೆ ಸೋರಿಕೆಯಾಗಿರುವ ಅಂಶಗಳನ್ನು ನೀಡಲಾಗಿದೆ ಎಂದು ಬಂಧಿತ ಮಧ್ಯವರ್ತಿ ಕ್ರಿಶ್ಚಿಯನ್‌ ಮೈಕೆಲ್‌ ದಿಲ್ಲಿಯ ಕೋರ್ಟ್‌ಗೆ ಹೇಳಿಕೆ ನೀಡಿದ್ದಾನೆ. ರಾಜಕೀಯ ಕಾರಣಗಳಿಗಾಗಿ ಕೇಂದ್ರ ಸರಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡುತ್ತಿದೆ ಎಂದು ತನ್ನ ವಕೀಲ ಎ.ಕೆ.ಜೋಸೆಫ್ ಮೂಲಕ ಹೇಳಿಕೆ ಸಲ್ಲಿಸಿದ್ದಾನೆ. ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಅಂಶದ ವಿರುದ್ಧ ನೋಟಿಸ್‌ ನೀಡುತ್ತಿರುವುದಾಗಿಯೂ ಆತ ಹೇಳಿಕೊಂಡಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next