Advertisement
ರಿನೀವಲ್ ಆಗಿಲ್ಲವೆನ್ನುತ್ತಾರೆಬಾಬು ಅವರ ತಂದೆಯ ಕಾಲದಿಂದ ಅಂತ್ಯೋದಯ ಪಡಿತರ ಚೀಟಿ ಸೌಲಭ್ಯವಿತ್ತು. ಪ್ರತಿ ತಿಂಗಳು ಸಾಮಾಗ್ರಿ ದೊರೆಯುತಿತ್ತು. ಆದರೆ ಕಳೆದ 4 ವರ್ಷದಿಂದ ಪಡಿತರ ಸಾಮಾಗ್ರಿ ಸಿಗುತ್ತಿಲ್ಲ. ಕಾರಣ ಕೇಳಿದರೆ ಪಡಿತರ ಚೀಟಿ ರಿನೀವಲ್ ಆಗಿಲ್ಲ ಎನ್ನುವ ಉತ್ತರ ದೊರೆತಿದೆ. ಮನೆ ಯಜಮಾನ ಮನ್ಸ ಮೃತಪಟ್ಟ ಬಳಿಕ ಅವರ ಪುತ್ರ ಬಾಬು ಪಡಿತರ ಚೀಟಿಗಾಗಿ ಅಲೆದಾಟ ಆರಂಭಿಸಿದ್ದಾರೆ. ರಿನೀವಲ್ ಈಗ ಆಗುತ್ತಿಲ್ಲ ಎನ್ನುವ ಉತ್ತರ ಕೆಲವೆಡೆ ದೊರೆತರೆ, ಇನ್ನು ಕೆಲ ಕಚೇರಿಗಳಲ್ಲಿ ಆಧಾರ್ ಲಿಂಕ್ ಆಗಿಲ್ಲ ಎನ್ನುವ ಉತ್ತರ ಸಿಕ್ಕಿದೆ. ಸರಿ ಮಾಡಿಸಿಕೊಡಿ ಎಂದರೆ, ಈಗ ಆಗುವುದಿಲ್ಲ ಎಂದು ಹೇಳುತ್ತಾರೆ. ಪಡಿತರ ಚೀಟಿ ಇಲ್ಲದೆ ಸರಕಾರದ ಯಾವುದೇ ಸೌಲಭ್ಯಕ್ಕೂ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ಕುಟುಂಬದ ಅಳಲು.
ಅಕ್ರಮ ಪಡಿತರ ಚೀಟಿಗೆ ಕಡಿವಾಣ ಹಾಕುವ ಉದ್ದೇಶದಿಂದ 2015ರ ಹಿಂದಿನ ಪಡಿತರ ಚೀಟಿ ರಿನೀವಲ್ ಮಾಡಬೇಕು ಎಂದು ಅಂದಿನ ಸರಕಾರ ಆದೇಶ ಮಾಡಿತ್ತು. ಆಯಾ ಗ್ರಾ.ಪಂ.ಗಳಲ್ಲಿ ವಿಶೇಷ ಕಂಪ್ಯೂಟರ್ ವ್ಯವಸ್ಥೆ ಕಲ್ಪಿಸಿ, ನೋಂದಣಿಗೆ ಅವಕಾಶ ಮಾಡಿಕೊಡಲಾಗಿತ್ತು. ಟೋಕನ್ ಆಧಾರಿತವಾಗಿ ಪ್ರತಿದಿನ ಪಡಿತರ ಚೀಟಿಯಲ್ಲಿ ನಮೂದು ಆಗಿರುವ ಕುಟುಂಬದ ನಿವಾಸಿಗಳು ಜತೆಯಾಗಿ ತೆರಳಿ ಆನ್‌ಲೈನ್ ಮೂಲಕ ಮಾಹಿತಿ, ಭಾವಚಿತ್ರ ಅಪ್‌ಡೇಟ್ ಮಾಡಬೇಕಿತ್ತು. ಆದರೆ ಅನೇಕ ಕಡೆಗಳಲ್ಲಿ ನೆಟ್‌ವರ್ಕ್ ಸಮಸ್ಯೆ, ಮಾಹಿತಿಯಲ್ಲಿನ ಲೋಪ, ಎಲ್ಲ ಸದಸ್ಯರು ಜತೆಯಾಗಿ ಬಾರದಿರುವ ಕಾರಣ ರಿನೀವಲ್ ಪ್ರಕ್ರಿಯೆ ಯಶಸ್ಸು ಕಂಡಿರಲಿಲ್ಲ. ಕೂಲಿ ಕೆಲಸ ಮಾಡಿ ಜೀವನ ಸಾಗಿಸುವ ಕುಟುಂಬಗಳು ಪಂಚಾಯತ್ ಮುಂದೆ ಕಾದು ಕುಳಿತುಕೊಳ್ಳಲು ಆಗದೆ ರಿನೀವಲ್ ಸಾಧ್ಯವಾಗಿಲ್ಲ. ನೂರಾರು ಕುಟುಂಬದ ಕಥೆ
ಇದು ಬಾಬು ಅವರ ಒಂದು ಕುಟುಂಬದ ಕಥೆಯಲ್ಲ. ಹಳೆ ಪಡಿತರ ಚೀಟಿ ಮರು ನೋಂದಾವಣೆ (ರಿನೀವಲ್) ಆಗಬೇಕು ಎನ್ನುವ ಸರಕಾರದ ಆದೇಶ ಬಂದು, ಅದರ ಮಾಹಿತಿ ಸಿಗದೆ ಪಡಿತರ ಸೌಲಭ್ಯ ಕಳೆದುಕೊಂಡ ನೂರಾರು ಕುಟುಂಬಗಳ ದಯನೀಯ ಕಥೆ ಇಲ್ಲಿದೆ. ಸರಕಾರಿ ಕಚೇರಿಗೆ ಅಲೆದಾಡಲು ಹಣವಿಲ್ಲದೆ, ಒತ್ತಡ ಹಾಕಲು ಧ್ವನಿ ಸಾಲದೆ ಸೌಲಭ್ಯದಿಂದ ಅರ್ಹ ಕುಟುಂಬಗಳು ವಂಚಿತವಾಗಿದೆ.
Related Articles
ಪಡಿತರ ಕಾರ್ಡ್ ತೆಗೆದುಕೊಂಡು ಹೋದಾಗ ಸಾಮಾಗ್ರಿ ಸಿಗಲಿಲ್ಲ. ಕೇಳಿದರೆ ರಿನೀವಲ್ ಆಗಿಲ್ಲ ಎನ್ನುವ ಉತ್ತರ ಬಂತು. ಗ್ರಾ.ಪಂ., ತಾಲೂಕು ಕಚೇರಿಗೆ ಸುತ್ತಾಡಿದ್ದೇನೆ. ಪ್ರಯೋಜನವಾಗಿಲ್ಲ. ನಾಲ್ಕು ವರ್ಷದಿಂದ ಉಚಿತ ಅಕ್ಕಿ, ಇನ್ನಿತ್ತರ ಸಾಮಾಗ್ರಿ ಸಿಕ್ಕಿಲ್ಲ. ಏನು ಮಾಡುವುದೆಂದು ತೋಚುತ್ತಿಲ್ಲ.
– ಬಾಬು, ಕುಂಡಡ್ಕ
Advertisement
ಕಿರಣ್ ಪ್ರಸಾದ್ ಕುಂಡಡ್ಕ