ಬೆಂಗಳೂರು: ಬಡವರ ಪರವಾದ ಗ್ಯಾರಂಟಿಗಳ ಜಾರಿಗೆ ಆದ್ಯತೆ ನೀಡುವುದರ ಜತೆಗೆ ಖಜಾನೆಯ ಸೋರಿಕೆ ಮತ್ತು ದುಂದುವೆಚ್ಚಕ್ಕೆ ಸರ್ಕಾರ ಕಡಿವಾಣ ಹಾಕುವ ಅವಶ್ಯಕತೆ ಇದೆ ಎಂದು ಬಿಜೆಪಿಯ ಎಚ್.ವಿಶ್ವನಾಥ್ ತಿಳಿಸಿದರು.
ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ನಿವೃತ್ತ ಅಧಿಕಾರಿಗಳೇ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಲ್ಲಿ ಒಬ್ಬೊಬ್ಬರ ಮಾಸಿಕ ವೇತನವೂ ಲಕ್ಷಾಂತರ ರೂಪಾಯಿ ಆಗಿದೆ ಎಂದು ಆರೋಪಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿವೃತ್ತ ಅಧಿಕಾರಿ ಕೆಂಪೇಗೌಡ ಎಂಬುವರಿಗೆ 80 ಸಾವಿರ ಪಿಂಚಣಿ ಇದೆ. ಜತೆಗೆ ನಿವೃತ್ತಿ ನಂತರ ಕೆಲಸ ಮಾಡುತ್ತಿರುವ ಅವರಿಗೆ 80 ಸಾವಿರ ಸಂಬಳ ಮತ್ತು ಕಾರು ಮತ್ತಿತರ ವೆಚ್ಚ 45 ಸಾವಿರ ರೂಪಾಯಿ ಇದೆ. ಇಂತಹ ಸಾವಿರಾರು ಉದಾಹರಣೆಗಳಿವೆ ಎಂದು ಆರೋಪಿಸಿದರು. ಅದೇ ರೀತಿ, ಹೊರಗುತ್ತಿಗೆ ಕೂಡ ಇನ್ನೊಂದು ದೊಡ್ಡ ಹಗರಣವಾಗಿದ್ದು, ಇದರಲ್ಲಿ ಐಎಎಸ್- ಐಪಿಎಸ್ ಅಧಿಕಾರಿಗಳ ಪ್ರಭಾವ ಕೆಲಸ ಮಾಡುತ್ತಿದೆ. ಲಕ್ಷಾಂತರ ಜನ ಈ ಹೊರಗುತ್ತಿಗೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವುಗಳ ಏಜೆಂಟರು ಐಎಎಸ್- ಐಪಿಎಸ್ ಅಧಿಕಾರಿಗಳ ಸಂಬಂಧಿಕರು ಆಗಿದ್ದಾರೆ ಎಂದು ಆರೋಪಿಸಿದರು.
ಜೆಡಿಎಸ್‌ನ ಕೆ.ಎ. ತಿಪ್ಪೇಸ್ವಾಮಿ ಮಾತನಾಡಿ, ಕರಾವಳಿಯಲ್ಲಿ ನೆರೆ ಇದ್ದರೆ, ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಲ್ಲಿ ಬರ ಇದೆ. ಜಲಾಶಯಗಳು ಬರಿದಾಗಿವೆ. ಈ ಭೀಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಬಜೆಟ್ ನಲ್ಲಿ ಯಾವುದೇ ಪ್ರಸ್ತಾಪ ಇಲ್ಲ ಎಂದು ದೂರಿದರು.
300 ಶಾಸಕರ ತಲಾದಾಯ 60.45 ಕೋಟಿ
ರಾಜ್ಯದ ಜನರ ತಲಾದಾಯ ವಾರ್ಷಿಕ 2.4 ಲಕ್ಷ ಇದ್ದರೆ, 300 ಜನ ಶಾಸಕರ ತಲಾದಾಯ 60.45 ಕೋಟಿ ಇದೆ! ಸ್ವತಃ ಎಚ…. ವಿಶ್ವನಾಥ್ ಈ ಅಂಕಿ-ಅಂಶ ಬಿಚ್ಚಿಟ್ಟರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ಶಶೀಲ್ ನಮೋಶಿ ಮತ್ತು ಜೆಡಿಎಸ್ ನ ಬೋಜೇಗೌಡ, ಎಲ್ಲ ಶಾಸಕರ ಸರಾಸರಿ ವಾರ್ಷಿಕ ಆದಾಯ 60.45 ಕೋಟಿ ಇಲ್ಲ ಎಂದು ನಿರಾಕರಿಸಿದರು.