Advertisement

ಅಖಂಡ ರಾಷ್ಟ್ರೀಯತಾ ಮನೋಭಾವ ಅಗತ್ಯ

11:07 AM Feb 18, 2019 | |

ಶಿವಮೊಗ್ಗ: ಯುವಜನತೆ ಯಾವುದೇ ಕೆಲಸ ಮಾಡುವುದಕ್ಕೂ ಮುಂಚೆ ಯೋಚಿಸಬೇಕು. ಅಖಂಡ ಭಾರತೀಯತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಏಕೆಂದರೆ ನಾವೆಲ್ಲರೂ ಮೊದಲಿಗೆ ಭಾರತೀಯರು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಭಿನವ್‌ ಖರೆ ಅಭಿಪ್ರಾಯಪಟ್ಟರು.

Advertisement

ಭಾರತೀಯ ವಿಶ್ವವಿದ್ಯಾಲಯಗಳ ಸಂಘ (ಎಐಯು) ಮತ್ತು ಕುವೆಂಪು ವಿಶ್ವವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿರುವ ಮೂರು ದಿನಗಳ ಅಖೀಲ ಭಾರತ ಅಂತರ್‌ ವಿಶ್ವವಿದ್ಯಾಲಯ ಪುರುಷರ ಸೆಪೆಕ್‌ ಟಕ್ರಾ ಪಂದ್ಯಾವಳಿಯನ್ನು ವಿಶ್ವವಿದ್ಯಾಲಯದ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ಬೆಳಗ್ಗೆ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿಗೆ ಜಮ್ಮು- ಕಾಶ್ಮೀರದ ಪುಲ್ವಾಮಾದಲ್ಲಿ ಜರುಗಿದ ಆತ್ಮಹತ್ಯಾ ದಾಳಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಯುವಪೀಳಿಗೆಗೆ ಅದ್ಭುತವಾದ ಸಾಮರ್ಥ್ಯವಿದೆ. ಕಠಿಣವಾದ ಕಾರ್ಯಗಳನ್ನು ಸಾಧಿಸುವ ಶಕ್ತಿಯಿದೆ. ಆದರೆ, ಈ ಸಾಮರ್ಥ್ಯವನ್ನು ಸೂಕ್ತ ರೀತಿಯಲ್ಲಿ ಬಳಸುವ ನಿಟ್ಟಿನಲ್ಲಿ ಅವರಿಗೆ ಮಾರ್ಗದರ್ಶನ ನೀಡುವ ಅಗತ್ಯವಿದೆ ಎಂದು ಹೇಳಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಹುತಾತ್ಮ ಸಿಆರ್‌ಪಿಎಫ್‌ ಯೋಧರ ಗೌರವಾರ್ಥ ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡಲಾಯಿತು. ವಿಜ್ಞಾನ ನಿಕಾಯದ ಡೀನರಾದ ಪ್ರೊ| ವಿ ಕೃಷ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಐಯು ನಿರೀಕ್ಷಕ ಪ್ರೊ| ನಾಗೇಂದ್ರ ಪ್ರಸಾದ್‌ ಶರ್ಮಾ, ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ| ಎಸ್‌. ಎಂ. ಪ್ರಕಾಶ್‌, ಅಂತರಾಷ್ಟ್ರೀಯ ಜ್ಯೂಡೋಪಟು ಕಾಂತರಾಜು ಇದ್ದರು.

 ಇದೇ ಸಂದರ್ಭದಲ್ಲಿ ಖ್ಯಾತ ಅಂತರಾಷ್ಟ್ರೀಯ ಜ್ಯೂಡೋಪಟು ಹಾಗೂ ಕುವೆಂಪು ವಿವಿಯ ಹಳೆಯ ವಿದ್ಯಾರ್ಥಿ ಕಾಂತರಾಜು ಮತ್ತು ಸಹ್ಯಾದ್ರಿ ವಿಜ್ಞಾನ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಲಕ್ಷ್ಮಣಪ್ಪ ಅವರನ್ನು ಸನ್ಮಾನಿಸಲಾಯಿತು. 

Advertisement

ಪಂದ್ಯಾವಳಿ ವಿವರ: ಜ್ಞಾನಸಹ್ಯಾದ್ರಿ ಆವರಣದ ಒಳಾಂಗಣ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಪಂದ್ಯಾವಳಿಯಲ್ಲಿ ದೇಶದ ವಿವಿಧ ವಿಶ್ವವಿದ್ಯಾಲಯಗಳನ್ನು ಪ್ರತಿನಿಧಿ ಸುವ ಒಟ್ಟು 19 ತಂಡಗಳು, 500ಕ್ಕೂ ಹೆಚ್ಚು ಕ್ರೀಡಾಪಟುಗಳು ಮತ್ತು ಸುಮಾರು 100ಕ್ಕೂ ಹೆಚ್ಚು ಕ್ರೀಡಾ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಭಾರತದ ವಿವಿಧ ವಿವಿಗಳಿಂದ ಆಗಮಿಸುತ್ತಿದ್ದ ಕ್ರೀಡಾಪಟುಗಳು “ರೆಗು’ ಹಾಗೂ ಡಬಲ್ಸ್‌ ವಿಭಾಗದಲ್ಲಿ ಸೆಣಸಲಿದ್ದು, ಜಯ ಗಳಿಸುವ ಹುಮ್ಮಸ್ಸಿನಲಿದ್ದರು.

 ಮೊದಲ ದಿನ ‘ರೆಗು’ ವಿಭಾಗದಲ್ಲಿ ಒಟ್ಟು 24 ಪಂದ್ಯಗಳು ನಡೆದಿದ್ದು, ಅತಿಥೇಯ ಕುವೆಂಪು ವಿವಿ ಮೂರು ಪಂದ್ಯಗಳನ್ನು ಜಯಿಸಿ ಪ್ರಶಸ್ತಿ ಸುತ್ತಿನ ಲೀಗ್‌ ಹಂತಕ್ಕೆ ಪ್ರವೇಶ ಪಡೆದಿದೆ. ದಿನದ ಅಂತ್ಯದ ವೇಳೆಗೆ ಚೆನ್ನೈನ ಅಣ್ಣಾ ವಿವಿ, ಪಟಿಯಾಲಾದ ಪಂಜಾಬಿ ವಿವಿ, ಮತ್ತು ಚಂಡೀಗಢದ ಪಂಜಾಬ್‌ ವಿವಿ ಕೂಡ ಮುಂದಿನ ಹಂತಕ್ಕೆ ಪ್ರವೇಶ ಪಡೆದಿವೆ. ಡಬಲ್ಸ್‌ ವಿಭಾಗದ ಪಂದ್ಯಗಳು ನಾಳೆ ಆರಂಭವಾಗಲಿವೆ. 

ಏನಿದು ಸೆಪೆಕ್‌ ಟಕ್ರಾ?
ಮೂಲತಃ ದಕ್ಷಿಣ ಪೂರ್ವ ಏಷ್ಯಾದಲ್ಲಿ ಜನ್ಮ ತಾಳಿದ ಸೆಪೆಕ್‌ ಟಕ್ರಾ ಅಥವಾ “ಕಿಕ್‌ ವಾಲಿಬಾಲ್‌’ ಇಂಡೋನೇಶಿಯಾ, ಮಲೇಶಿಯಾ, ಸಿಂಗಪೂರ್‌ ಮತ್ತು ಥಾಯ್ಲೆಂಡ್‌ನ‌ ಜನಪ್ರಿಯ ಕ್ರೀಡೆಗಳಲ್ಲಿ ಒಂದು. ಮಲೇಶಿಯಾದ ರಟ್ಟನ್‌ ಮರದಿಂದ ತಯಾರಿಸಿದ ಬಾಲ್‌ ಅನ್ನು ಬಳಸುವ ಈ ಕ್ರೀಡೆಯಲ್ಲಿ ಮೂವರು ಆಟಗಾರರನ್ನೊಳಗೊಂಡ “ರೆಗು’ ಮತ್ತು ಇಬ್ಬರು ಆಟಗಾರರ “ಡಬಲ್ಸ್‌’ ವಿಭಾಗಗಳಲ್ಲಿ ಪಂದ್ಯಗಳು ನಡೆಯುತ್ತವೆ. 

ಆಟಗಾರರು ತಮ್ಮ ಕಾಲು, ಮಂಡಿ, ಎದೆ, ಮತ್ತು ತಲೆಯನ್ನು ಮಾತ್ರ ಕಿಕ್‌ ಮಾಡಲು ಬಳಸಬಹುದು. 2018ರಲ್ಲಿ ಇಂಡೋನೇಶಿಯಾದ ಜಕಾರ್ತಾದಲ್ಲಿ ನಡೆದ ಏಷ್ಯಾ ಕ್ರೀಡಾಕೂಟದಲ್ಲಿ ಭಾರತೀಯ ಪುರುಷರ ತಂಡ ‘ರೆಗು’ ವಿಭಾಗದಲ್ಲಿ ಮೊಟ್ಟ ಮೊದಲ ಕಂಚಿನ ಪದಕ ಪಡೆದದ್ದನ್ನು
ಇಲ್ಲಿ ಸ್ಮರಿಸಬಹುದು. 1990ರಲ್ಲಿ ಬೀಜಿಂಗ್‌ನಲ್ಲಿ ಜರುಗಿದ 11ನೇ ಏಷ್ಯಾ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಸೆಪೆಕ್‌ ಟಕ್ರಾ ಕ್ರೀಡೆಯನ್ನು ಸೇರ್ಪಡೆಗೊಳಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next