Advertisement

ನಟನಾಗಿ ಮಾಡೋ ಕೆಲಸವೇ ಸಾಕಷ್ಟಿದೆ

11:09 AM Jul 29, 2018 | Team Udayavani |

ಅಷ್ಟೆಲ್ಲಾ ಗೊತ್ತಿರುವವರು, ಎನರ್ಜಿ ಇರುವವರು ನೀವು. ನೀವ್ಯಾಕೆ ನಿಮ್ಮನ್ನ ಬರೀ ನಟನೆಗೆ ಸೀಮಿತಗೊಳಿಸಿಕೊಂಡಿದ್ದೀರಾ? ಹಾಗೊಂದು ಪ್ರಶ್ನೆ ಬಿಟ್ಟರು ನಿರ್ದೇಶಕ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್‌. ಇದಕ್ಕೆ ಉತ್ತರಿಸಬೇಕಾಗಿದ್ದು ಹಿರಿಯ ನಟ ದತ್ತಣ್ಣ. ಮೈಕು ಕೈಗೆತ್ತಿಕೊಂಡ ಅವರು, “ನಟನಾಗಿ ಮಾಡುವುದೇ ಸಾಕಷ್ಟಿದೆ.

Advertisement

ನಾನು ಇದುವರೆಗೂ ಮಾಡಿರೋದು ಅಲ್ಟಿಮೇಟ್‌ ಇಲ್ಲ. ಒಬ್ಬ ನಟನಿಗೆ ಪ್ರತಿ ಚಿತ್ರದಲ್ಲೂ ಒಂದು ಸವಾಲಿರುತ್ತದೆ, ಮಾಡಬೇಕಾದ ಸಾಕಷ್ಟು ಪಾತ್ರಗಳಿವೆ. ಇನ್ನು ನಿರ್ದೇಶನ ಅನ್ನೋದು ಬಹಳ ಕಷ್ಟದ ಕೆಲಸ. ಅದಕ್ಕೆ ಸಾಕಷ್ಟು ತಾಳ್ಮೆ ಬೇಕು. ನಟನೆಯಲ್ಲೇ ಸಾಕಷ್ಟು ಅನ್ವೇಷಣೆ ಮಾಡಬಹುದು. ಅದುಬಿಟ್ಟು ಹೊಸದೇನೋ ಮಾಡೋಕೆ ನನಗಿಷ್ಟವಿಲ್ಲ’ ಎಂದರು ದತ್ತಣ್ಣ.

ಅವರು ಮಾತಾಡಿದ್ದು “ಬೆಳ್ಳಿ ಹೆಜ್ಜೆ’ ಕಾರ್ಯಕ್ರಮದಲ್ಲಿ. ಈ ಬಾರಿ “ಬೆಳ್ಳಿ ಹೆಜ್ಜೆ’ ಇಟ್ಟಿದ್ದೇ ಅವರು. ಗಾಂಧಿ ಭವನದಲ್ಲಿ ನಡೆದ ಈ ಸಮಾರಂಭದಲ್ಲಿ ಚಿತ್ರರಂಗದ ಅವರ ಸಾಕಷ್ಟು ಗೆಳೆಯರು, ಹಿತೃಷಿಗಳು, ಅಭಿಮಾನಿಗಳು ಜಮಾಯಿಸಿ, ದತ್ತಣ್ಣನವರ ಮಾತುಗಳಿಗೆ ಸಾಕ್ಷಿಯಾದರು. ವಾಯುಸೇನೆಯಲ್ಲಿದ್ದ ಅವರು ರಂಗಭೂಮಿಗೆ ಆಕರ್ಷಿತರಾಗಿದ್ದು, ಅಲ್ಲಿಂದ ಚಿತ್ರರಂಗಕ್ಕೆ ಬಂದಿದ್ದು, ನಂತರ ಹಲವು ಪಾತ್ರಗಳನ್ನು ಮಾಡಿದ್ದು ಮುಂತಾದ ಹಲವು ವಿಷಯಗಳ ಕುರಿತು ದತ್ತಣ್ಣ ಮಾತನಾಡಿದರು.

ಒಬ್ಬ ನಟನಾಗಿ ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸುವುದರ ಕುರಿತು ಮಾತನಾಡಿದ ಅವರು, “ನಾನು ಕನ್ನಡವಲ್ಲದೆ ಬೇರೆ ಭಾಷೆಯ ಚಿತ್ರಗಳಲ್ಲೂ ನಟಿಸಿದ್ದೇನೆ. ಆದರೆ, ಭಾಷೆಯ ಸೂಕ್ಷ್ಮತೆ ಗೊತ್ತಿಲ್ಲದಿದ್ದರೆ, ಅಭಿನಯ ಮಾಡುವುದು ಕಷ್ಟ. ಪ್ರಾಂಪ್ಟಿಂಗ್‌ ತೆಗೆದುಕೊಂಡು ಮಾತನಾಡಬಹುದು. ಆದರೆ, ಅಭಿನಯ ಸಪ್ಪೆಯಾಗಿರುತ್ತದೆ. ಭಾಷೆ ಸುಲಭವಿದ್ದಾಗ, ಅಭಿನಯವೂ ಚೆನ್ನಾಗಿರುತ್ತದೆ.

ಇನ್ನು ಇಲ್ಲೇ ಒಳ್ಳೆಯ ಅವಕಾಶಗಳು ಸಿಗುತ್ತಿರುವುದರಿಂದ, ಪರಭಾಷೆಗಳಲ್ಲಿ ನಟಿಸಿದ್ದು ಕಡಿಮೆ’ ಎಂದು ಅವರು ಉತ್ತರಿಸಿದರು. ಈ ಕಾರ್ಯಕ್ರಮದಲ್ಲಿ ಹಿರಿಯ ನಿರ್ದೇಶಕ ಭಗವಾನ್‌, ಟಿ.ಎಸ್‌. ನಾಗಾಭರಣ, ಸಿ.ವಿ. ಶಿವಶಂಕರ್‌, ಟಿ.ಎನ್‌. ಸೀತಾರಾಂ, ಪಿ. ಶೇಷಾದ್ರಿ,  ಪಿ.ಆರ್‌. ರಾಮದಾಸ ನಾಯ್ಡು, ಲಿಂಗದೇವರು ಸೇರಿದಂತೆ ಹಲವರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next