Advertisement

ಒಂದೇ ಎಲೆಯುಳ್ಳ ಪುಟ್ಟ ಮೂಲಿಕಾ ಸಸ್ಯ…ಒಂದೆಲಗ ರುಚಿ ಹಲವು

10:51 AM Dec 01, 2020 | |

ಮಲೆನಾಡು ಮತ್ತು ಕರಾವಳಿಯ ಅಡಕೆ ತೋಟಗಳಲ್ಲಿ, ಗದ್ದೆಯ ಬದುವಿನಲ್ಲಿ, ಅಂಗಳದಲ್ಲಿ… ಹೀಗೆ ನೀರಿನ ಲಭ್ಯತೆ ಇರುವಲ್ಲಿ ಹುಲುಸಾಗಿ ಬೆಳೆಯುವ, ಉರುಟಾದ ಒಂದೇ ಎಲೆಯುಳ್ಳ ಪುಟ್ಟ ಮೂಲಿಕಾ ಸಸ್ಯ ಒಂದೆಲಗ’. ಇದಕ್ಕೆ ಬ್ರಾಹ್ಮಿ, ಉರಗೆ ಎಂಬ ಹೆಸರುಗಳೂ ಇವೆ.

Advertisement

ಒಂದೆಲಗದ ಅಡುಗೆಗಳು ಬಾಯಿಗೆ ರುಚಿ, ಶರೀರಕ್ಕೆ ತಂಪು ಹಾಗೂ ಬೇಸಗೆಯಲ್ಲಿ ಆರೋಗ್ಯಕ್ಕೆ ಹಿತಕಾರಿ. ಕೆಲವೊಮ್ಮೆ ಸೊಪ್ಪು ಮಾರುವವರ ಬಳಿ ಒಂದೆಲಗ ಸಿಗುತ್ತದೆ. ಮನೆಯಲ್ಲಿಯೇ ಕುಂಡಗಳಲ್ಲೂ ಒಂದೆಲಗ ಬೆಳೆಸಬಹುದು. ಒಂದೆಲಗದಿಂದ ತಯಾರಿಸಬಹುದಾದ ಕೆಲವು ತಿನಿಸುಗಳ ರೆಸಿಪಿ ಇಲ್ಲಿದೆ.

1.ಒಂದೆಲಗದ ಚಟ್ನಿ
ಬೇಕಾಗುವ ಸಾಮಗ್ರಿ: ತೊಳೆದು ಶುಚಿಗೊಳಿಸಿದ ಒಂದೆಲಗದ ಸೊಪ್ಪು- ಒಂದು ಹಿಡಿ, ತೆಂಗಿನತುರಿ- ಅರ್ಧ ಕಪ್‌, ಹಸಿಮೆಣಸು-2, ಕಾಳುಮೆಣಸಿನ ಪುಡಿ- ಅರ್ಧ ಚಮಚ, ಜೀರಿಗೆ- ಅರ್ಧ ಚಮಚ, ಕಡಲೇಬೇಳೆ-ಒಂದು ಚಮಚ, ಹುಣಸೇಹಣ್ಣು-ಸಣ್ಣ ಗೋಲಿಯಷ್ಟು, ರುಚಿಗೆ ತಕ್ಕಷ್ಟು ಉಪ್ಪು, ಒಗ್ಗರಣೆಗೆ: ಸ್ವಲ್ಪ ಎಣ್ಣೆ, ಸಾಸಿವೆ, ಒಣಮೆಣಸು, ಕರಿಬೇವಿನ ಸೊಪ್ಪು.

ತಯಾರಿಸುವ ವಿಧಾನ: ಮಸಾಲೆ ವಸ್ತುಗಳನ್ನು ಬಾಣಲೆಗೆ ಹಾಕಿ ಸುವಾಸನೆ ಬರುವಷ್ಟು ಹುರಿಯಿರಿ. ಸಾಮಾನ್ಯವಾಗಿ ಒಂದೆಲಗವನ್ನು ಹಸಿಯಾಗಿ ಬಳಸುವುದು ರೂಢಿ. ಬೇಕೆನಿಸಿದರೆ, ಬಾಣಲೆಗೆ ಹಾಕಿ ಸ್ವಲ್ಪ ಬಾಡಿಸಿಕೊಳ್ಳಬಹುದು. ಹುರಿದ ಮಸಾಲೆಗೆ ತುರಿದ ತೆಂಗಿನಕಾಯಿ, ಹಸಿಮೆಣಸು, ಒಂದೆಲಗದ ಸೊಪ್ಪು, ಹುಣಸೆಹಣ್ಣು ಮತ್ತು ಉಪ್ಪು ಸೇರಿಸಿ, ಬೇಕಾದರೆ ಸ್ವಲ್ಪ ನೀರನ್ನು ಸೇರಿಸಿ ಗಟ್ಟಿಯಾಗಿ ರುಬ್ಬಿ. ಕರಿಬೇವು, ಸಾಸಿವೆ ಹಾಕಿ ಒಗ್ಗರಣೆ ಕೊಟ್ಟರೆ ಹಸಿರು ಬಣ್ಣದ ಒಂದೆಲಗದ ಚಟ್ನಿ ಸಿದ್ಧ.

2.ಒಂದೆಲಗದ ತಂಬುಳಿ 
ಬೇಕಾಗುವ ಸಾಮಗ್ರಿ:
ಒಂದೆಲಗದ ಚಟ್ನಿ- ಅರ್ಧ ಕಪ್‌, ಮೊಸರು/ಮಜ್ಜಿಗೆ-2 ಕಪ್‌, ರುಚಿಗೆ ತಕ್ಕಷ್ಟು ಉಪ್ಪು

Advertisement

ಒಗ್ಗರಣೆಗೆ: ಸ್ವಲ್ಪ ಎಣ್ಣೆ, ಸಾಸಿವೆ, ಒಣಮೆಣಸು, ಕರಿಬೇವಿನ ಸೊಪ್ಪು

ತಯಾರಿಸುವ ವಿಧಾನ: ಮೊದಲು ಒಂದೆಲಗದ ಚಟ್ನಿ ತಯಾರಿಸಿ. ಅರ್ಧ ಕಪ್‌ನಷ್ಟು ಚಟ್ನಿಗೆ 2 ಕಪ್‌ ಮೊಸರು ಅಥವಾ ಮಜ್ಜಿಗೆ ಬೆರೆಸಿ ಕದಡಿ. ಬೇಕಿದ್ದರೆ ಹೆಚ್ಚುವರಿ ನೀರು ಮತ್ತು ಉಪ್ಪು ಸೇರಿಸಿ ತಂಬುಳಿಯ ಹದಕ್ಕೆ ಬೆರೆಸಿ.  ಈ ಮಿಶ್ರಣಕ್ಕೆ ಸಾಸಿವೆ, ಕರಿಬೇವು ಸೇರಿಸಿದ ಒಗ್ಗರಣೆ ಕೊಟ್ಟರೆ ಒಂದೆಲಗದ ತಂಬುಳಿ ತಯಾರಾಗುತ್ತದೆ. ಇದಕ್ಕೆ ಬೇಕೆನಿಸಿದರೆ ಬೆಳ್ಳುಳ್ಳಿಯ ಒಗ್ಗರಣೆಯನ್ನೂ ಕೊಡಬಹುದು.

3. ಒಂದೆಲಗದ ತಿಳಿಸಾರು
ಬೇಕಾಗುವ ಸಾಮಗ್ರಿಗಳು:
ಒಂದೆಲಗದ ಚಟ್ನಿ-ಅರ್ಧ ಕಪ್‌ , ಟೊಮ್ಯಾಟೋ-2,ಸಾರಿನ ಪುಡಿ-ಒಂದು ಚಮಚ, ಬೆಂದ ತೊಗರಿಬೇಳೆ-ಕಾಲು ಕಪ್‌, ರುಚಿಗೆ ತಕ್ಕಷ್ಟು ಉಪ್ಪು, ಬೇಕಿದ್ದರೆ ಚಿಟಿಕೆ ಬೆಲ್ಲ, ಹೆಚ್ಚಿದ ಕೊತ್ತಂಬರಿ ಸೊಪ್ಪು ಸ್ವಲ್ಪ, ಒಗ್ಗರಣೆಗೆ: ಸ್ವಲ್ಪ ಎಣ್ಣೆ, ಸಾಸಿವೆ, ಕರಿಬೇವು, ಆಯ್ಕೆಗೆ ತಕ್ಕಂತೆ ಇಂಗು ಅಥವಾ ಬೆಳ್ಳುಳ್ಳಿ.

ತಯಾರಿಸುವ ವಿಧಾನ: ಒಂದೆಲಗದ ಚಟ್ನಿ, ಹೆಚ್ಚಿದ ಟೊಮ್ಯಾಟೊ, ಬೆಂದ ತೊಗರಿಬೇಳೆ, ಸಾರಿನ ಪುಡಿ ಎಲ್ಲವನ್ನೂ ಸೇರಿಸಿ, ಬೇಕಾದಷ್ಟು ನೀರು ಸೇರಿಸಿ ಚೆನ್ನಾಗಿ ಕುದಿಸಿ. ರುಚಿಗೆ ತಕ್ಕಷ್ಟು ಉಪ್ಪು, ಬೇಕೆನಿಸಿದರೆ ಚಿಟಿಕೆ ಬೆಲ್ಲ ಸೇರಿಸಿ ಪುನ: ಕುದಿಸಿ. ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ. ಆಯ್ಕೆಗೆ ತಕ್ಕಂತೆ ಸಾಸಿವೆ, ಕರಿಬೇವು, ಇಂಗು ಅಥವಾ  ಬೆಳ್ಳುಳ್ಳಿ ಸೇರಿಸಿದ ಒಗ್ಗರಣೆ ಕೊಟ್ಟರೆ  ಒಂದೆಲಗದ ತಿಳಿಸಾರು ತಯಾರಾಗುತ್ತದೆ.

4. ಒಂದೆಲಗದ ಚಿತ್ರಾನ್ನ
ಬೇಕಾಗುವ ಸಾಮಗ್ರಿ:
ಒಂದಲಗದ ಚಟ್ನಿ-ಅರ್ಧ ಕಪ್‌,  ಉದುರಾದ ಅನ್ನ- 2 ಕಪ್‌,  ರುಚಿಗೆ ತಕ್ಕಷ್ಟು ಉಪ್ಪು, ಲಿಂಬೆಹಣ್ಣು-1, ಹೆಚ್ಚಿದ  ಕೊತ್ತಂಬರಿ ಸೊಪ್ಪು ಸ್ವಲ್ಪ, ಒಗ್ಗರಣೆಗೆ: ಸ್ವಲ್ಪ ಎಣ್ಣೆ, ಸಾಸಿವೆ, ಕರಿಬೇವು, ಕಡಲೇಕಾಯಿ, ಉದ್ದಿನಬೇಳೆ, ಕಡಲೇಬೇಳೆ.

ತಯಾರಿಸುವ ವಿಧಾನ: ಒಂದೆಲಗದ ಚಟ್ನಿ ಮತ್ತು ಅನ್ನವನ್ನು ತಯಾರಿಸಿಟ್ಟುಕೊಳ್ಳಿ. ಬಾಣಲಿಯಲ್ಲಿ ಎಣ್ಣೆ, ಸಾಸಿವೆ, ಉಪ್ಪಿನಬೇಳೆ, ಕಡಲೇಬೇಳೆ, ಕಡಲೇಕಾಯಿ, ಕರಿಬೇವು ಹಾಕಿ ಒಗ್ಗರಣೆ ಮಾಡಿ, ಅದಕ್ಕೆ ಅನ್ನ ಮತ್ತು ಒಂದೆಲಗದ ಚಟ್ನಿ ಬೆರೆಸಿ. ಚಟ್ನಿಯಲ್ಲಿ  ಉಪ್ಪು, ಹುಳಿ  ಇರುವುದರಿಂದ ಅಗತ್ಯವಿದ್ದರೆ ಮಾತ್ರ ಹೆಚ್ಚುವರಿ ಉಪ್ಪು,  ನಿಂಬೆಹಣ್ಣಿನ ರಸ ಸೇರಿಸಿ ಪುನ: ಬೆರೆಸಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಹಸಿರು ಬಣ್ಣದ  ಒಂದೆಲಗದ ಚಿತ್ರಾನ್ನ ಸಿದ್ಧ.

Advertisement

Udayavani is now on Telegram. Click here to join our channel and stay updated with the latest news.

Next