Advertisement

“ಮತ್ತೆ ಕಲ್ಯಾಣ’ದಲ್ಲಿ ನಿಶ್ಚಿತ ಗುರಿಯಿದೆ

09:29 PM Aug 06, 2019 | Lakshmi GovindaRaj |

ಮೈಸೂರು: ಸಕಲ ಜೀವಾತ್ಮರಿಗೆ ಒಳಿತು ಬಯಸುವ ಹಾಗೂ ಜಾತಿ, ಧರ್ಮ, ಲಿಂಗ ಭೇದವಿಲ್ಲದ ಸಮ ಸಮಾಜ ನಿರ್ಮಾಣದ ಶರಣರ ಕನಸನ್ನು ಯುವ ಜನತೆಗೆ ಬಿತ್ತುವುದೇ ಮತ್ತೆ ಕಲ್ಯಾಣದ ಆಶಯವಾಗಿದೆ ಎಂದು ಡಾ. ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಸಹಮತ ವೇದಿಕೆ ಮೂಲಕ ಆಗಸ್ಟ್‌ 1ರಿಂದ 30ರವರೆಗೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮತ್ತೆ ಕಲ್ಯಾಣ ಅಭಿಯಾನ ನಡೆಸುತ್ತಿರುವ ಶ್ರೀಗಳು ಮಂಗಳವಾರ ಮೈಸೂರಿನಲ್ಲಿ ಅಭಿಯಾನ ನಡೆಸಿ, ಕಲಾಮಂದಿರದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

Advertisement

ಸಾಮರಸ್ಯ ಭೋಜನ: ಎಲ್ಲಾ ಜಾತಿ-ಧರ್ಮಗಳ ಜನರೊಂದಿಗೆ ಸಾಮರಸ್ಯ ನಡಿಗೆ ನಡೆಸಿ, ಸಾರ್ವಜನಿಕ ಸಮಾವೇಶ, ಸಾಮರಸ್ಯ ಭೋಜನದ ಮೂಲಕ ಮೈಸೂರು ಅಭಿಯಾನ ಪೂರ್ಣಗೊಳಿಸಿದರು.

ಮೌಡ್ಯ ಮುಕ್ತ ಸಮಾಜ: ವಿದ್ಯಾರ್ಥಿಗಳೊಂದಿಗೆ ಸಂವಾದಕ್ಕೂ ಮುನ್ನ ಮಾತನಾಡಿದ ಅವರು, ಮೌಡ್ಯಗಳಿಂದ ಜನರನ್ನು ಮುಕ್ತಗೊಳಿಸುವುದು, ವಿಚಾರ ಹೆಚ್ಚಿಸುವುದು ಮತ್ತು ಆಚಾರ ಕ್ರಾಂತಿ ಆಳವಡಿಸಿಕೊಳ್ಳುವಂತೆ ಮತ್ತೆ ಅಭಿಯಾನದ ಮೂಲಕ ಯುವಕರಿಗೆ ತಿಳಿ ಹೇಳಿದ್ದೇವೆ. ಬಡತನ, ಭ್ರಷ್ಟಾಚಾರ, ಲಿಂಗ ತಾರತಮ್ಯ ಇದೆ. ಹೋಗಲಾಡಿಸೋದು ಯಾರು? ವಿರೋಧ ಮಾಡುವುದು ಸುಲಭ. ಕಟ್ಟುವ ಪ್ರಕ್ರಿಯೆ ಬಹಳ ಕಷ್ಟ. ಬೆಂಕಿ ಹಚ್ಚುವ ಮಂದಿ ಬಹಳ ಇದ್ದಾರೆ. ಬೆಳಕು ಕೊಡುವವರು ಎಷ್ಟು ಮಂದಿ ಇದ್ದಾರೆ? ಅದಕ್ಕೆ ಅಕ್ಕಮಹಾದೇವಿ ಹೇಳಿದ್ದು “ಲೋಕದಲ್ಲಿ ಹುಟ್ಟಿದ ಬಳಿಕ ಸ್ತುತಿ ನಿಂದೆ ಬರುವುದೇ, ಸಮಾಧಾನಿಯಾಗಿರಬೇಕು ಎಂದು. ಮತ್ತೆ ಕಲ್ಯಾಣ ಅಭಿಯಾನದಲ್ಲಿ ನಮಗೇ ನಿಶ್ಚಿತ ಗುರಿಯಿದೆ ಎಂದು ಹೇಳಿದರು.

ಮೀಸಲಾತಿ: ಸಮಾಜದಲ್ಲಿ ಎಲ್ಲಿಯವರೆಗೆ ಜಾತಿ ಇರುತ್ತೋ ಅಲ್ಲಿವರೆಗೆ ಮೀಸಲಾತಿ ಇರಬೇಕು ಎಂಬುದು ನಮ್ಮ ಸ್ಪಷ್ಟ ಅಭಿಪ್ರಾಯ. ಆದರೆ, ಮಾಧ್ಯಮದಲ್ಲಿ ನಾವು ಹೇಳಿದ ಮಾತುಗಳನ್ನು ಯಥಾವತ್ತಾಗಿ ಪ್ರಕಟಿಸದ ಹಿನ್ನೆಲೆಯಲ್ಲಿ ಅನೇಕ ರೀತಿಯ ಅನುಮಾನಗಳಿಗೆ ಕಾರಣವಾಗಿದೆ. ಕೆಲವರು ಪ್ರತಿಭಟಿಸುವ, ಕಪ್ಪು ಬಾವುಟ ಪ್ರದರ್ಶಿಸುವ ಬಗ್ಗೆ ಹೇಳಿದ್ದಾರೆ. ಪ್ರತಿಭಟನೆ ಬದಲು ಈ ವಿಚಾರವಾಗಿ ಪ್ರಶ್ನೆಗಳನ್ನು ಕೇಳುವುದು ಒಳ್ಳೆಯದು. ಮೀಸಲಾತಿ ಸೌಲಭ್ಯ ಪಡೆದವರು ಮತ್ತೆ ಸೌಲಭ್ಯ ಪಡೆಯಬಹುದೇ ಎಂಬುದರ ಬಗ್ಗೆ ಚರ್ಚೆಯಾಗಬೇಕಿದೆ ಎಂದರು.

ಜ್ಯೋತಿಷಿಗಳಿಂದ ಮೌಡ್ಯ ತುಂಬುವ ಕೆಲಸ: ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಅಕ್ಷರ ಜ್ಞಾನ ಮಾತ್ರ ಲಭಿಸುತ್ತಿದೆ. ಪದವಿ ಮತ್ತು ಉದ್ಯೋಗ ಪಡೆವರು ದೋಚುವುದು-ಬಾಚುವುದನ್ನೇ ಮುಖ್ಯ ಗುರಿಯಾಗಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಅರಿವು ಹೆಚ್ಚಿಸುವ ಮತ್ತು ಸಮಾಜದ ಕೊಳೆ ತೆಗೆಯುವ ಶಿಕ್ಷಣ ನೀಡಬೇಕಾಗಿದ್ದು, ವ್ಯವಹಾರಿಕ, ಅಧ್ಯಾತ್ಮಿಕ, ನೈತಿಕ ಶಿಕ್ಷಣ ನೀಡಬೇಕಿದೆ. ಮಾಧ್ಯಮಗಳ ಮೂಲಕ ಜ್ಯೋತಿಷಿಗಳು ಮೌಡ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಗುರುವಾಗುವ ಯಾವ ಯೋಗ್ಯತೆಯೂ ಇಲ್ಲ. ಅವರೆಲ್ಲ ಮೆದುಳು ತಿನ್ನುವ ಜನರು. ಈ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಅಭಿಯಾನ ನಡೆಯುತ್ತಿದೆ ಎಂದು ಹೇಳಿದರು.

Advertisement

ಹಿರಿಯ ರಂಗಕರ್ಮಿ ಎಚ್‌.ಜನಾರ್ಧನ್‌, ಸಾಹಿತಿ ಪ್ರೊ.ಮೊರಬದ ಮಲ್ಲಿಕಾರ್ಜುನ, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಕೆ.ಎಸ್‌.ಶಿವರಾಮ್‌, ಕೆ.ಆರ್‌.ಗೋಪಾಲಕೃಷ್ಣ, ದಸಂಸ ಹೋರಾಟಗಾರ ಜವರಪ್ಪ, ಮಹದೇವಪ್ಪ ಮುಂತಾದವರು ಭಾಗವಹಿಸಿದ್ದರು.

30 ದಿನಗಳ ನಂತರ ಮುಂದೇನು?: ತರಳಬಾಳು ಕಾಲೇಜಿನ ವಿದ್ಯಾರ್ಥಿ ಉದಯಕುಮಾರ್‌, ಮತ್ತೆ ಕಲ್ಯಾಣದ ಆಶಯ ಏನು? 30 ದಿನಗಳ ಅಭಿಯಾನದ ನಂತರ ಮುಂದೇನು? ಎಂಬ ಪ್ರಶ್ನೆಗೆ ಉತ್ತರಿಸಿದ ಡಾ.ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ, 12ನೇ ಶತಮಾನದಲ್ಲಿದ್ದ ಸಾಮಾಜಿಕ ಅನಿಷ್ಟಗಳ ವಿರುದ್ಧ ಶರಣರು ಅನುಭವ ಮಂಟಪದ ಮೂಲಕ ಹೋರಾಟ ಮಾಡಿದರು. 21ನೇ ಶತಮಾನದಲ್ಲೂ ಇರುವ ಅದೇ ಅನಿಷ್ಟಗಳ ವಿರುದ್ಧ ಹೋರಾಟ ಮಾಡಲೆಂದು ಮತ್ತೆ ಕಲ್ಯಾಣ ಆರಂಭಿಸಿದ್ದೇವೆ ಎಂದರು.

30 ದಿನಗಳ ನಂತರ ಮುಂದೇನು? ಈ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ನಿರಂತರವಾಗಿ ವಿದ್ಯಾರ್ಥಿ ಸಮೂಹದ ಜತೆ ವಚನಗಳ ಬಗ್ಗೆ ಮಾತನಾಡುತ್ತೇವೆ. ಆಯ್ದ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮನೋಸ್ಥೆçರ್ಯ ಮೂಡಿಸುತ್ತೇವೆ. 20 ದಿನಗಳ ಕಾರ್ಯಾಗಾರ ನಡೆಸಲು ಚಿಂತನೆ ನಡೆದಿದೆ. ಹೊಸ ಚಳವಳಿಯಾಗಿ ಮತ್ತೆ ಕಲ್ಯಾಣ ರೂಪುಗೊಳ್ಳಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next