Advertisement

ತೊಗರಿ ಬಂಪರ್‌ ಬೆಳೆ ಬಂದರೂ ಬೆಲೆ ಇಲ್ಲ 

03:45 AM Jan 16, 2017 | |

ಕಲಬುರಗಿ: ಕಳೆದ ವರ್ಷ ಭೀಕರ ಬರಗಾಲದಿಂದ ಇಳುವರಿ ಬಾರದೇ ಕಂಗಾಲಾಗಿದ್ದ ತೊಗರಿ ಬೆಳೆಗಾರರು ಈ ವರ್ಷ ಬಂಪರ್‌ ಇಳುವರಿ ತೆಗೆದಿದ್ದಾರೆ. ಆದರೆ ಸರ್ಕಾರದ ಬೆಂಬಲೆ ಬೆಲೆ ಹೊರತಾಗಿಯೂ ಸೂಕ್ತ ಬೆಲೆ ಸಿಗದೆ ಪರದಾಡುವಂತಾಗಿದೆ. ರೈತರ ನೆರವಿಗೆ ಬರಬೇಕಿದ್ದ ತೊಗರಿ ಕೇಂದ್ರಗಳು ನಾಮ್‌ ಕೆ ವಾಸ್ತೆ ಎನ್ನುವಂತಾಗಿವೆ.

Advertisement

ಬೆಲೆ ಕುಸಿತದಿಂತ ತೊಗರಿ ಬೆಳೆಗಾರರನ್ನು ರಕ್ಷಿಸುವ ಸಲುವಾಗಿ ಕೇಂದ್ರದ 5050 ರೂ. ಬೆಂಬಲ ಬೆಲೆಗೆ ರಾಜ್ಯ ಸರ್ಕಾರ 1000 ರೂ. ಪ್ರೋತ್ಸಾಹಧನ ನೀಡಬಹುದು ಎನ್ನುವ ನಿರೀಕ್ಷೆ ರೈತರಲ್ಲಿತ್ತು. 2014-15ರಲ್ಲಿ 750 ರೂ. ಪ್ರೋತ್ಸಾಹ ಧನ ನೀಡಿದ್ದ ರಾಜ್ಯ ಸರ್ಕಾರ ಈ ವರ್ಷ ಕೇವಲ 450 ರೂ. ನೀಡಿರುವುದರಿಂದ ಪ್ರೋತ್ಸಾಹ ಧನದಿಂದ ತೊಗರಿ ಬೆಳೆಗಾರರಿಗೆ ಪ್ರಯೋಜನವಿಲ್ಲದಂತಾಗಿದೆ.

ಎರಡು ವರ್ಷದ ಹಿಂದೆ ತೊಗರಿಗೆ ಮಾರುಕಟ್ಟೆಯಲ್ಲಿ 5200 – 5300 ರೂ. ಬೆಲೆ ಇತ್ತು. ಆಗ 4300 ರೂ. ಬೆಂಬಲ ಬೆಲೆ ಜೊತೆಗೆ ರಾಜ್ಯ ಸರ್ಕಾರ ಪ್ರತಿ ಕ್ವಿಂಟಲ್‌ಗೆ 700 ರೂ. ಪ್ರೋತ್ಸಾಹ ಧನ ಸೇರಿಸಿ 5000 ರೂ.ನಂತೆ ಖರೀದಿಸುತ್ತಿತ್ತು. ಈ ವರ್ಷ 5050 ರೂ. ಬೆಂಬಲ ಬೆಲೆ ಮತ್ತು ರಾಜ್ಯ ಸರ್ಕಾರದ ಪ್ರೋತ್ಸಾಹ ಧನ 450 ರೂ. ಸೇರಿ 5500 ರೂ. ದರದಲ್ಲಿ ಖರೀದಿ ಪ್ರಕ್ರಿಯೆ ಆರಂಭವಾಗಿದೆ. ಆದರೆ ಕೆಲ ಕಾರಣಗಳಿಂದ ಮಾರುಕಟ್ಟೆ ದರ 4300 ರೂ. ದಿಂದ 4700 ರೂ. ಬೆಲೆಯಲ್ಲಿಯೇ ತೊಗರಿ ಹೆಚ್ಚು ಮಾರಾಟವಾಗುತ್ತಿದೆ.

ನ್ಯಾಫೆಡ್‌ ಸಂಸ್ಥೆ ಕಳೆದ ಡಿಸೆಂಬರ್‌ ಮಾಸಾಂತ್ಯದಲ್ಲಿ ಜಿಲ್ಲೆಯ ಏಳು ಕಡೆ ಖರೀದಿ ಕೇಂದ್ರಗಳನ್ನು ತೆರೆದಿದೆ. ಇನ್ನೂ ಏಳು ಕಡೆ ಖರೀದಿ ಪ್ರಕ್ರಿಯೆ ಉಸ್ತುವಾರಿಯನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಗೆ ವಹಿಸಲಾಗಿದೆ. 

ಮಹಾಮಂಡಳಿಯು ತಾಲೂಕು ಕೃಷಿ ಉತ್ಪನ್ನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ (ಟಿಎಪಿಸಿಎಂಎಸ್‌) ಮೂಲಕ ಖರೀದಿಸುತ್ತಿದೆ. ಎಲ್ಲಕ್ಕೂ ಮೊದಲೇ ತೊಗರಿ ಬೆಳೆಗಾರರ ನೆರವಿಗೆ ಬರಬೇಕಿದ್ದ ತೊಗರಿ ಅಭಿವೃದ್ಧಿ ಮಂಡಳಿ ಈಗ ಎಚ್ಚೆತ್ತು ಸೋಮವಾರದಿಂದ (ಜ. 16) ಖರೀದಿಗೆ ಮುಂದಾಗಿದೆ.

Advertisement

ರೈತರ ಸ್ಪಂದನೆ ಇಲ್ಲ;
ನ್ಯಾಫೆಡ್‌ ಹಾಗೂ ತೊಗರಿ ಮಂಡಳಿ ತೊಗರಿಯನ್ನು ಖರೀದಿಸುತ್ತಿದ್ದರೂ ತೊಗರಿ ಬೆಳೆಗಾರರು ಸ್ಪಂದಿಸುತ್ತಿಲ್ಲ. ನ್ಯಾಫೆಡ್‌ ಹಾಗೂ ಸಹಕಾರಿ ಸಂಘಗಳಲ್ಲಿನ ತೊಗರಿ ಖರೀದಿ ಕೇಂದ್ರಗಳಲ್ಲಿ ಸಾಮಾನ್ಯ ರೈತರು ತೊಗರಿ ನೇರವಾಗಿ ಒಯ್ಯುವಂತಿಲ್ಲ. ಮೊದಲು ಪಹಣಿ, ಆಧಾರ ಕಾರ್ಡ್‌ಗಳೊಂದಿಗೆ ಹೆಸರು ನೋಂದಾಯಿಸಬೇಕು. ಈಗ ಹೆಸರು ನೋಂದಾಯಿಸಿದರೆ ಫೆಬ್ರವರಿ ಕೊನೆ ವಾರ ಸರದಿ ಬರುತ್ತದೆ. ಜೊತೆಗೆ ತಕ್ಷಣವೇ ಹಣ ರೈತರ ಕೈಸೇರಲಿದೆ. ಆದರೆ ಮಂಡಳಿಯು ಸಹಕಾರ ಸಂಘಗಳಿಂದ ಮೂಲಕ ಖರೀದಿಸಿ ನ್ಯಾಫೆಡ್‌ಗೆ ನೀಡಿ ಅಲ್ಲಿಂದ ಹಣ ಬಂದ ಮೇಲೆ ರೈತರ ಖಾತೆಗೆ ಹಣ ಪಾವತಿಸುತ್ತದೆ. ಹೀಗಾಗಿ ರೈತರು ನ್ಯಾಫೆಡ್‌ ಹಾಗೂ ಮಂಡಳಿ ಮೂಲಕ ಮಾರಿದಾಗ ಸಿಗುವ 5500 ರೂ. ಬಿಟ್ಟು 4400ರಿಂದ 4700 ದರಕ್ಕೆ ಮಾರುಕಟ್ಟೆಯಲ್ಲಿ ತೊಗರಿಯನ್ನು ಮಾರುತ್ತಿದ್ದಾರೆ.

ಮಾರುಕಟ್ಟೆಯಲ್ಲಿ 4400ರಿಂದ 4700 ರೂ. ದರದಲ್ಲಿ ರೈತರಿಂದ ಖರೀದಿ ಮಾಡಿರುವ ಮಧ್ಯವರ್ತಿಗಳು ಖರೀದಿ ಕೇಂದ್ರಗಳಲ್ಲಿ 5500 ರೂ.ಗೆ ಮಾರಾಟ ಮಾಡುತ್ತಿದ್ದಾರೆ.

ರಾಜ್ಯ ಸರ್ಕಾರ ಬೆಂಬಲ ಬೆಲೆ ಮೇಲೆ ಕನಿಷ್ಠ ಸಾವಿರ ರೂ. ಪ್ರೋತ್ಸಾಹ ಧನ ಘೋಷಿಸಬೇಕೆಂದು ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಅವರಲ್ಲಿ ಮನವಿ ಮಾಡಲಾಗಿತ್ತು. ಆದರೆ ಸರ್ಕಾರ ಕೇವಲ 450 ರೂ. ಘೋಷಿಸಿದೆ. ಖರೀದಿ ಕೇಂದ್ರಗಳಲ್ಲಿ ಸಾಮಾನ್ಯ ರೈತರಿಗಿಂತ ಮಧ್ಯವರ್ತಿ(ದಲ್ಲಾಳಿ)ಗಳ ತೊಗರಿಯೇ ಮಾರಾಟವಾಗುತ್ತಿದೆ. ಹೀಗಾಗಿ ರೈತರ ಎಲ್ಲ ನಿರೀಕ್ಷೆ ಹುಸಿಯಾಗುತ್ತಿವೆ.
– ಮಾರುತಿ ಮಾನ್ಪಡೆ, ಅಧ್ಯಕ್ಷರು, ಕರ್ನಾಟಕ ಪ್ರಾಂತ ರೈತ ಸಂಘ

ಮೂರು ವರ್ಷಗಳ ಬೆಲೆ
ವರ್ಷ ಬೆಂಬಲ ಬೆಲೆ ಮಾರುಕಟ್ಟೆಯಲ್ಲಿ ಮಾರಾಟವಾದ ಬೆಲೆ
2016-17 5050 ರೂ. 4000-4700ರೂ.
2015-16 4625 ರೂ. 9000-13000ರೂ.
2014-15 4350 ರೂ. 4600-5200ರೂ.

– ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next