ಸುಬ್ರಹ್ಮಣ್ಯ: ಪಶು ವೈದ್ಯ ಆಸ್ಪತ್ರೆ ಇದ್ದರೂ, ಕೆಲವೊಂದು ಸಂದರ್ಭದಲ್ಲಿ ಬೇರೆಡೆಗೆ ಅಲೆದಾಟ ನಡೆಸಬೇಕಾದ ದುಸ್ಥಿತಿ. ಹತ್ತು ವರ್ಷಗಳಿಂದ ಇಲ್ಲಿ ಪೂರ್ಣಕಾಲಿಕ ಪಶುವೈದ್ಯರೇ ನೇಮಕವಾಗಿಲ್ಲ. ಪ್ರಸ್ತುತ ಇಲ್ಲಿ ವಾರಕ್ಕೆ ಎರಡೇ ದಿನ ಪಶು ವೈದ್ಯರು ಲಭ್ಯವಾಗುತ್ತಿದ್ದಾರೆ-ಇದು ಸುಬ್ರಹ್ಮಣ್ಯ ಪಶು ವೈದ್ಯ ಆಸ್ಪತ್ರೆಯ ಸ್ಥಿತಿ.
ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿನ ಸಮಸ್ಯೆ ಹೈನುಗಾರರಿಗೆ ಸವಾಲಾಗಿ ಪರಿಣಮಿಸಿದೆ. ಇಲ್ಲಿ ಪೂರ್ಣಕಾಲಿಕ ಪಶು ವೈದ್ಯರು ಇಲ್ಲದೆ ಗ್ರಾಮಸ್ಥರು ತುರ್ತು ಸಂದರ್ಭದಲ್ಲಿ ದೂರದ ಊರಿಗೆ ಅಲೆದಾಟ ನಡೆಸಬೇಕಾದ ಅನಿವಾರ್ಯತೆ ಇದೆ.
ಪಶು ವೈದ್ಯರಿಲ್ಲ
ಸುಬ್ರಹ್ಮಣ್ಯದಲ್ಲಿ ಕೋಟಿ ರೂ. ವೆಚ್ಚ ದಲ್ಲಿ ಸುಸಜ್ಜಿತ ಪಶು ವೈದ್ಯ ಆಸ್ಪತ್ರೆ ನಿರ್ಮಾಣವಾಗುತ್ತಿದೆ. ಆದರೆ ಸುಸಜ್ಜಿತ ಕಟ್ಟಡ ಕೇಂದ್ರ ವಿದ್ದರೂ, ಪಶು, ಪ್ರಾಣಿಗಳ ಆರೈಕೆ, ಪರೀಕ್ಷೆ, ಚಿಕಿತ್ಸೆ ನೀಡಬೇಕಾದ ವೈದ್ಯರೇ ಇಲ್ಲಿ ಇಲ್ಲ. ಪರಿಣಾಮ ಈ ವ್ಯಾಪ್ತಿಯಲ್ಲಿ ಪ್ರಾಣಿಗಳಿಗೆ ಸಮಸ್ಯೆ ಉಂಟಾದಲ್ಲಿ ಹೆಚ್ಚಿನ ಸಂದರ್ಭದಲ್ಲಿ ದೂರದ ಪಶು ವೈದ್ಯರನ್ನು ಸಂಪರ್ಕಿಸಿ ಬೇಕಾಗಿದೆ. ಇಲ್ಲವೇ ದೂರದ ಊರಿಗೆ ಅಲೆದಾಟ ನಡೆಸಬೇಕಾಗುತ್ತದೆ ಎನ್ನುತ್ತಾರೆ ಸಾರ್ವಜನಿಕರು.
ಸುಬ್ರಹ್ಮಣ್ಯ ಪೇಟೆ ಹೊರತು ಪಡಿಸಿ ಈ ವ್ಯಾಪ್ತಿ ಗ್ರಾಮೀಣ ಭಾಗವನ್ನು ಒಳಗೊಂಡಿದ್ದು, ಇಲ್ಲಿರುವ ಬಹುತೇಕರು ಕೃಷಿಕರು. ಹೈನುಗಾರರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಹೈನುಗಾರಿಕೆಯ ಪಶು, ಪ್ರಾಣಿಗಳ ನಿರ್ವಹಣೆ, ಸಮಸ್ಯೆಗಳಿಗೆ ಪರಿವಾರ ಕಂಡುಕೊಳ್ಳುವ ಕೇಂದ್ರದಲ್ಲಿ ವೈದ್ಯರ ಕೊರತೆಯಿಂದ ಈ ವ್ಯಾಪ್ತಿಯ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಪಶುವೈದ್ಯರ ಕೊರತೆ ಮಧ್ಯೆ ಸಿಬಂದಿ ಕೊರತೆಯೂ ಕಾಡುತ್ತಿದೆ. ಆದರೆ ಇಲ್ಲಿನ ಡಿ ದರ್ಜೆಯ ಸಿಬಂದಿ ನಿವೃತ್ತರಾಗಿದ್ದು, ಸಿಬಂದಿ ನೇಮಕವಾಗಿಲ್ಲ.
ನೇಮಕಕ್ಕೆ ಆಗ್ರಹ
ಸುಬ್ರಹ್ಮಣ್ಯದಲ್ಲಿ ಪೂರ್ಣಕಾಲಿಕ ಪಶುವೈದ್ಯರನ್ನು ನೇಮಕ ಮಾಡುವಂತೆ ಹಲವು ವರ್ಷಗಳಿಂದ ಆಗ್ರಹಿಸುತ್ತಾ ಬರುತ್ತಿದ್ದರೂ, ಈ ಬಗ್ಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂಬ ಆರೋಪ ವ್ಯಕ್ತವಾಗಿದೆ. ಹಲವು ವರ್ಷಗಳಿಂದ ಗ್ರಾಮಸಭೆಯಲ್ಲಿ ಈ ಬಗ್ಗೆ ಪ್ರಸ್ತಾವಿಸಲಾಗುತ್ತಿತ್ತು. ಇತ್ತೀಚೆಗೆ ನಡೆದ ಗ್ರಾಮ ವಾಸ್ತವ್ಯದಲ್ಲೂ ಇದು ಪ್ರಸ್ತಾವಗೊಂಡಿದ್ದು, ಸಮಸ್ಯೆ ಬಗೆ ಹರಿಯದಿದ್ದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಲಾಗಿತ್ತು.
ಹಲವು ವರ್ಷಗಳ ಬೇಡಿಕೆ
ಪೂರ್ಣಕಾಲಿಕ ವೈದ್ಯರನ್ನು ನೇಮಿಸುವಂತೆ ಹಲವು ವರ್ಷಗಳಿಂದ ಮನವಿ ಸಲ್ಲಿಸುತ್ತಿದ್ದರೂ ಪ್ರಯೋಜನವಾಗಿಲ್ಲ. ಪರಿಣಾಮ ಪಶು, ಪ್ರಾಣಿಗಳಿಗೆ ಸಮಸ್ಯೆ ಕಂಡುಬಂದಲ್ಲಿ ದೂರದ ವೈದ್ಯರ ಬಳಿ ತೆರಳಬೇಕಾದ ಪರಿಸ್ಥಿತಿ ಇದೆ. ಶೀಘ್ರ ಇಲ್ಲಿಗೆ ಪೂರ್ಣಕಾಲಿಕ ಪಶು ವೈದ್ಯರನ್ನು ನೇಮಿಸಬೇಕು. ಇಲ್ಲವೇ ಪ್ರತಿಭಟನೆ ನಡೆಸಲಾಗುವುದು.
–ಹರೀಶ್ ಇಂಜಾಡಿ, ಗ್ರಾಮ ಪಂಚಾಯತ್ ಸದಸ್ಯರು, ಸುಬ್ರಹ್ಮಣ್ಯ
ದಯಾನಂದ ಕಲ್ಚಾರ್