ಕೊಲ್ಹಾರ: ಕೊರೊನಾ ಬಗ್ಗೆ ಜಾಗೃತಿ ವಹಿಸದೇ ಅಲಕ್ಷé ತೋರಿದರೆ ಲಕ್ಷಾಂತರ ರೂ. ಜತೆಗೆ ಜೀವವನ್ನೂ ಕಳೆದುಕೊಳ್ಳುವ ಅಪಾಯ ತಪ್ಪಿದ್ದಲ್ಲ ಎಂದು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ, ಕುಡಚಿ ಶಾಸಕ ಪಿ. ರಾಜೀವ ಹೇಳಿದರು.
ತಾಲೂಕಿನ ಕೂಡಗಿ ತಾಂಡಾದಲ್ಲಿ ರಾಜ್ಯ ತಾಂಡಾ ಅಭಿವೃದ್ಧಿ ನಿಗಮ, ನ್ಯಾಷನಲ್ ಸೇವಾ ಡಾಕ್ಟರ್ ಅಸೋಸಿಯೇಷನ್ (ಎನ್ ಎಸ್‌ಡಿಎ), ವಿಜಯಪುರ ಕೋವಿಡ್ ಆರೈಕೆ ಕೇಂದ್ರದ ಸಹಯೋಗದಲ್ಲಿ ಕೋವಿಡ್-19 ಅರಿವು ಮತ್ತು ಲಸಿಕಾ ಕಾರ್ಯಕ್ರಮ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಕೂಡಗಿ ತಾಂಡಾದಲ್ಲಿ ತಮ್ಮ ನಿಗಮದಿಂದ ಸಮುದಾಯ ಭವನ ನಿರ್ಮಿಸಲು 25 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದ ಶಾಸಕರು ಗೊಳಸಂಗಿ ತಾಂಡಾದಲ್ಲಿ ಸೇವಾಲಾಲ ಮಂದಿರ ನಿರ್ಮಾಣಕ್ಕೆ 15 ಲಕ್ಷ ರೂ., ಪೈಕಿ ಈಗಾಗಲೇ 12 ಲಕ್ಷ ರೂ., ನೀಡಲಾಗಿದ್ದು ಬಾಕಿ 3 ಲಕ್ಷ ರೂ., ಇದೇ ದಿನ ಬಿಡುಗಡೆಗೊಳಿಸಿ ಹೆಚ್ಚಿನ ಅನುದಾನವನ್ನೂ ಬೇರೆ ಮೂಲದಿಂದ ಕೊಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಕೆಸರಟ್ಟಿ ಶಂಕರಲಿಂಗ ಗುರುಪೀಠದ ಬಾಲಶಿವಯೋಗಿ ಸೋಮಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ ಕೂಡಗಿ ತಾಂಡಾದಲ್ಲಿ ನಿಗಮದ ವತಿಯಿಂದ ಕೊರೊನಾ ಅರಿವು ಮತ್ತು ಲಸಿಕಾ ಕಾರ್ಯಕ್ರಮ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಬಂಜಾರಾ ಸಮುದಾಯದ ಬೆಳವಣಿಗೆಗೆ ಜನಾಂಗದ ಯುವ ಶಕ್ತಿ ದುಶ್ಚಟಗಳನ್ನು ತೊರೆದು ಸಂಘಟನಾತ್ಮಕ ಚಿಂತನೆ ಮಾಡಬೇಕು ಎಂದರು. ಉಪವಿಭಾಗಾ ಧಿಕಾರಿ ಬಲರಾಮ್ ಲಮಾಣಿ, ಅರಿವು ತಜ್ಞ ಡಾ.ಬಾಬು ರಾಜೇಂದ್ರ, ಯುವ ಮುಖಂಡ ವಿನೋದ ನಾಯಕ ಮಾತನಾಡಿದರು.
ಜಗನು ಮಹಾರಾಜರು, ತೊರವಿ ಗೋಪಾಲ ಶ್ರೀ ಸಾನ್ನಿಧ್ಯ ವಹಿಸಿದ್ದರು. ಜಿಪಂ ಸದಸ್ಯ ಸಂತೋಷ ನಾಯಕ, ಗ್ರಾಪಂ ಅಧ್ಯಕ್ಷೆ ಶೇಕುಬಾಯಿ ರಾಠೊಡ, ಬಿಜೆಪಿ ಮಂಡಲ ಅಧ್ಯಕ್ಷ ಶಂಕರಗೌಡ ಪಾಟೀಲ, ಕೂಡಗಿ ಪಿಎಸ್‌ಐ ರೇಣುಕಾ ಜಕನೂರ, ವೈದ್ಯಾಧಿ ಕಾರಿ ಡಾ.ಗೋವಿಂದರಾಜ್, ಗ್ರಾಪಂ ಉಪಾಧ್ಯಕ್ಷೆ ದ್ಯಾಮವ್ವ ತೋಳಮಟ್ಟಿ, ಗ್ರಾಪಂ ಸದಸ್ಯರಾದ ಅರುಣ ನಾಯಕ, ಸವಿತಾ ಚವ್ಹಾಣ, ಮುಖಂಡ ಮಲ್ಲಿಕಾರ್ಜುನ ನಾಯಕ, ಎಸ್ ಡಿಎಂಸಿ ಅಧ್ಯಕ್ಷ ಅಪ್ಪಾಲಾಲ ಜಾಧವ, ಭೋಜು ಪವಾರ ಮತ್ತಿತರರು ಇದ್ದರು. ಸನ್ಮಾನ-ಕಿಟ್ ವಿತರಣೆ: ಲಾಕ್‌ಡೌನ್ ಸಂದರ್ಭದಲ್ಲಿ ಪೊಲೀಸರೊಂದಿಗೆ ಕೈ ಜೋಡಿಸಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಿದ ಸ್ವಯಂ ಸೇವಕರಿಗೆ ಸನ್ಮಾನ ಮತ್ತು ಅಂಗನವಾಡಿ, ಆಶಾ ಕಾರ್ಯಕರ್ತರಿಗೆ ಸ್ಥಳೀಯ ಗ್ರಾಪಂ ವತಿಯಿಂದ ಆಹಾರ ಧಾನ್ಯದ ಕಿಟ್ ವಿತರಿಸಲಾಯಿತು.