Advertisement
2020ರಿಂದ 10ನೇ ತರಗತಿಗೆ ಎರಡು ಹಂತದ ಗಣಿತ ಪರೀಕ್ಷೆಯನ್ನು ಪರಿಚಯಿಸಲು ಸಿಬಿಎಸ್‌ಇ ನಿರ್ಧರಿಸಿದೆ. ಅದರಂತೆ, ಗಣಿತ-ಸ್ಟಾಂಡರ್ಡ್ ಮತ್ತು ಗಣಿತ-ಬೇಸಿಕ್ ಎಂಬ ಎರಡು ಆಯ್ಕೆಗಳಿರುತ್ತವೆ. ಯಾರು ಗಣಿತದಲ್ಲಿ ನಿಸ್ಸೀಮರಾಗಿದ್ದು, ಅದಕ್ಕೆ ಸಂಬಂಧಿಸಿಯೇ ಮುಂದಿನ ವಿದ್ಯಾಭ್ಯಾಸ ಮಾಡಲು ಇಚ್ಛಿಸುತ್ತಾರೋ, ಅಂಥವರು ಗಣಿತ- ಸ್ಟಾಂಡರ್ಡ್ ಪರೀಕ್ಷೆಯನ್ನು ಬರೆಯಬಹುದು, ಯಾರಿಗೆ ಗಣಿತ ಕಷ್ಟ ಎಂಬ ಭಾವನೆಯಿದೆಯೋ, ಅಂಥವರು ಗಣಿತ-ಬೇಸಿಕ್ ಪರೀಕ್ಷೆ ಬರೆದು, ತಮ್ಮ ಆಯ್ಕೆಯ ಕೋರ್ಸ್ ಆಯ್ದುಕೊಂಡು ವಿದ್ಯಾಭ್ಯಾಸ ಮುಂದುವರಿಸಬಹುದು.10ನೇ ತರಗತಿಯ ಪರೀಕ್ಷೆ ವೇಳೆ ವಿದ್ಯಾರ್ಥಿಗಳಲ್ಲಿರುವ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಬಿಎಸ್‌ಇ ತಿಳಿಸಿದೆ.
ಆದರೆ, ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಅಂದರೆ, ಪರೀಕ್ಷೆಗಳು ಪ್ರತ್ಯೇಕವಾಗಿದ್ದರೂ ಶಾಲೆಗಳಲ್ಲಿನ ಪಠ್ಯಕ್ರಮ, ಆಂತರಿಕ ಮೌಲ್ಯಮಾಪನ ಒಂದೇ ಆಗಿರುತ್ತದೆ. ಮಾನ್ಯತೆ ಪಡೆದ ಶಾಲೆಯು ಆನ್‌ಲೈನ್ ಮೂಲಕ ಅಭ್ಯರ್ಥಿಗಳ ಪಟ್ಟಿಯನ್ನು ಸಿಬಿಎಸ್‌ಇಗೆ ಕಳುಹಿಸುವ ಸಂದರ್ಭದಲ್ಲೇ ವಿದ್ಯಾರ್ಥಿಗಳ ಪರೀಕ್ಷೆಯ ಆಯ್ಕೆಯನ್ನು ನಮೂದಿಸಬೇಕಾಗುತ್ತದೆ. ಫೇಲಾದರೆ ಮುಂದೇನು?
ಗಣಿತ-ಬೇಸಿಕ್ ಪರೀಕ್ಷೆ ಬರೆದಿರುವ ವಿದ್ಯಾರ್ಥಿಯು ಅನುತ್ತೀರ್ಣನಾದರೆ, ಆತ ನಂತರ ನಡೆಯುವ ಗಣಿತ-ಬೇಸಿಕ್ ಪೂರಕ ಪರೀಕ್ಷೆಯನ್ನು ಬರೆಯಬೇಕಾಗುತ್ತದೆ. ಆದರೆ, ಗಣಿತ-ಸ್ಟಾಂಡರ್ಡ್ ಪರೀಕ್ಷೆ ಬರೆದು ಅನುತ್ತೀರ್ಣನಾದ ವಿದ್ಯಾರ್ಥಿಯು, ಪೂರಕ ಪರೀಕ್ಷೆ ವೇಳೆ ಗಣಿತ-ಬೇಸಿಕ್ ಅನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಅದೇ ರೀತಿ, ಒಬ್ಬ ವಿದ್ಯಾರ್ಥಿ ಆರಂಭದಲ್ಲಿ ಗಣಿತ-ಬೇಸಿಕ್ ಪರೀಕ್ಷೆ ಬರೆದಿದ್ದರೂ, ನಂತರ ಮನಸ್ಸು ಬದಲಿಸಿ ಗಣಿತದಲ್ಲೇ ಉನ್ನತ ಶಿಕ್ಷಣ ಪಡೆಯಬೇಕೆಂದು ಬಯಸಿದರೆ, ಅಂಥ ವಿದ್ಯಾರ್ಥಿಯು ಪೂರಕ ಪರೀಕ್ಷೆ ಕುಳಿತು ಗಣಿತ-ಸ್ಟಾಂಡರ್ಡ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು.