ಹುಬ್ಬಳ್ಳಿ: ದಿ| ಸಿ.ಎಸ್.ಶಿವಳ್ಳಿ ಅವರೊಂದಿಗಿನ ಬಾಂಧವ್ಯ ಸ್ಮರಿಸಿಕೊಂಡು ಕಣ್ಣೀರು ಹಾಕಿದ್ದೇನೆ ವಿನಃ ಮತಗಳಿಕೆಗಾಗಿ ಅಲ್ಲವೇ ಅಲ್ಲ. ನನ್ನ ಮೇಲೆ 84 ಬಾರಿ ಐಟಿ ದಾಳಿ ನಡೆದಾಗಲೂ ಹನಿ ಕಣ್ಣೀರು ಹಾಕಿಲ್ಲ. ಅದು ನನ್ನ ರಕ್ತದಲ್ಲಿಯೇ ಇಲ್ಲ ಎಂದು ಸಚಿವ ಡಿ.ಕೆ.ಶಿವಕುಮಾರ ತಿಳಿಸಿದರು.
ಇಲ್ಲಿನ ಕಾಟನ್ ಕೌಂಟಿ ಕ್ಲಬ್‌ನಲ್ಲಿ ಹಾಲಿ-ಮಾಜಿ ಸಚಿವರು, ಶಾಸಕರು, ಕೆಪಿಸಿಸಿ ಪದಾಧಿಕಾರಿಗಳ ಹಾಗೂ ಪ್ರಮುಖರ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಎಸ್.ಶಿವಳ್ಳಿ ಕ್ಷೇತ್ರದಲ್ಲಿ ಇಷ್ಟೊಂದು ಪ್ರೀತಿ ಗಳಿಸಿದ್ದಾನೆಂದು ಆತನನ್ನು ನೆನಪಿಸಿಕೊಂಡು ಮನುಷ್ಯತ್ವದ ನೆಲೆಯಲ್ಲಿ ಭಾವುಕನಾಗಿದ್ದೇ ಹೊರತು, ಬಿಜೆಪಿಯವರು ಆರೋಪಿಸುವಂತೆ ಮತಕ್ಕಾಗಿ ಕಣ್ಣೀರು ಹಾಕುವ ಜಾಯಮಾನ ನನ್ನದು ಅಲ್ಲವೇ ಅಲ್ಲ ಎಂದರು.
ಶಾಸಕರ ಖರೀದಿ ಸ್ಪಷ್ಟಪಡಿಸಲಿ: ಸಚಿವ ಡಿ.ಕೆ.ಶಿವಕುಮಾರ ಅವರು ಕುಂದಗೋಳ ಕ್ಷೇತ್ರದಲ್ಲಿ ನಮ್ಮ ಕಾರ್ಯಕರ್ತರ ಸೆಳೆಯಲು ಮುಂದಾದರೆ ಪರಿಸ್ಥಿತಿ ನೆಟ್ಟಗಿರದು ಎಂಬ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ನಮ್ಮ ಶಾಸಕರನ್ನೇ ಸೆಳೆಯಲು ಮುಂದಾಗಿದ್ದಾರಲ್ಲ. 104 ಶಾಸಕರನ್ನು ಹೊಂದಿದ ಬಿಜೆಪಿಯವರು 118 ಶಾಸಕರನ್ನಾಗಿಸಲು ಯತ್ನಿಸುತ್ತಿರುವುದ್ಯಾಕೆ ಹಾಗೂ ಹೇಗೆ ಎಂಬುದನ್ನು ಶೆಟ್ಟರ ಮೊದಲು ಸ್ಪಷ್ಟಪಡಿಸಲಿ ಎಂದು ತಿರುಗೇಟು ನೀಡಿದರು.
ಬಿಜೆಪಿ ಕಾರ್ಯಕರ್ತರಿಗೆ ನಾನು ಆಮಿಷವೊಡ್ಡಿದ್ದೇನೆ ಎಂಬುದು ಬಿಜೆಪಿ ನಾಯಕರಿಗೆ ಖಚಿತವಾಗಿದ್ದರೆ, ಸಾಕ್ಷ್ಯಗಳನ್ನು ಬಹಿರಂಗ ಪಡಿಸಲಿ, ಚುನಾವಣಾ ಆಯೋಗಕ್ಕೆ ದೂರು ನೀಡಲಿ. ಎಲ್ಲರನ್ನು ಮತ ಕೇಳುವ ಹಕ್ಕು ನಮಗಿದೆ. ಜೆಡಿಎಸ್-ಬಿಜೆಪಿಯವರಿಗೂ ಮತಯಾಚಿಸುತ್ತೇವೆ. ಅಷ್ಟೇ ಯಾಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಕುಂದಗೋಳ ಕ್ಷೇತ್ರದ ಮತದಾರರಾಗಿದ್ದರೆ ಅವರನ್ನು ಸಹ ಕಾಂಗ್ರೆಸ್‌ಗೆ ಮತ ಹಾಕಿ ಎಂದು ಕೇಳುತ್ತಿದ್ದೆ ಎಂದರು.
ನಮ್ಮ ಪರ ಉತ್ತಮ ವಾತಾವರಣ: ಪಕ್ಷದ ಪ್ರಮುಖರು ಹಾಗೂ ಕೆಪಿಸಿಸಿ ಪದಾಧಿಕಾರಿಗಳು ಕುಂದಗೋಳ ಕ್ಷೇತ್ರದ ಕುರಿತಾದ ವರದಿ ನೀಡಿದ್ದು. ಕ್ಷೇತ್ರದಲ್ಲಿ ನಮ್ಮ ಪರ ಉತ್ತಮ ವಾತಾವರಣ ಇದೆ ಎಂಬುದು ಸ್ಪಷ್ಟವಾಗಿದೆ. ಇದೊಂದು ಸಿಹಿ ಸುದ್ದಿಯಾಗಿದೆ ಎಂದರು.
ಕುಂದಗೋಳ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಅವರ ಪರ ಜೆಡಿಎಸ್ ನಾಯಕರು ಕೆಲಸ ಮಾಡುತ್ತಿದ್ದಾರೆ. ಕಾರ್ಯತಂತ್ರ ಕುರಿತು ಎರಡು ಪಕ್ಷಗಳವರು ಸೇರಿಯೇ ಚರ್ಚಿಸುತ್ತೇವೆ. ಕೆಲವರಿಗೆ ಅಸಮಾಧಾನ ಇರಬಹುದು ಅದನ್ನು ಸರಿಪಡಿಸುತ್ತೇವೆ ಎಂದರು.
ಪಕ್ಷ-ಸರಕಾರದ ಮೇಲೆ ಕೊಲೆ ಆರೋಪ: ಸಿ.ಎಸ್.ಶಿವಳ್ಳಿ ಅವರು ಕಾಂಗ್ರೆಸ್ ಹಾಗೂ ಸಮ್ಮಿಶ್ರ ಸರಕಾರದ ಕಿರುಕುಳದಿಂದಲೇ ಮೃತಪಟ್ಟಿದ್ದಾರೆ ಎಂದು ಶ್ರೀರಾಮುಲು ಅವರು ಪಕ್ಷ ಹಾಗೂ ಸಮ್ಮಿಶ್ರ ಸರಕಾರ ಮೇಲೆ ಕೊಲೆ ಆರೋಪ ಮಾಡಿದ್ದಾರೆ. ಇಂತಹ ಗಂಭೀರ ಆರೋಪ ಮಾಡಿ ಇದೀಗ ಆ ರೀತಿ ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದರೆ ಏನು ಪ್ರಯೋಜನ ಎಂದು ಶಿವಕುಮಾರ ಪ್ರಶ್ನಿಸಿದರು.