Advertisement

ಅಂಟಿ ಕೂತರೂನೂ ಅಂತರ ಜಾಸ್ತಿ…!

11:16 PM Apr 27, 2019 | mahesh |

ನಾವು ಚೆನ್ನಾಗಿ ಕುಳಿತು ಮಾತನಾಡಿದ್ದೇ ವಿರಳ ಆಗಿಬಿಟ್ಟಿದೆ ಮೇಡಂ. ಸಮಯವೇ ಸಿಗಲ್ಲ. ಆದರೂ ಸ್ವಲ್ಪ ಸಮಯ ಜೊತೆಗಿದ್ದಾಗಲೂ ಜಗಳ ಆರಂಭವಾಗಿಬಿಡುತ್ತದೆ. ಇವಳು ಸರಿಯಾಗಿ ಮಾತನಾಡುವುದೇ ಇಲ್ಲ. ರೊಮ್ಯಾನ್ಸ್‌ ಅಂತೂ ಸತ್ತು ಹೋಗಿದೆ. ಏನು ಮಾಡೋದು ಎಂದು ಅವನಂದ. “ನಾನು ದಣಿದು ಬಂದಿರುತ್ತೇನೆ…. ‘ ಅಂತ ಅವಳು ಏನನ್ನೋ ಹೇಳುವ ಮುನ್ನವೇ ಇವನು ಮಾತು ತುಂಡರಿಸಿದ.

Advertisement

ನನ್ನ ಪರಿಣತಿ ಇರುವುದು ಕಪಲ್‌ ಥೆರಪಿಯಲ್ಲಿ. ಅಂದರೆ, ಸಂಬಂಧದಲ್ಲಿ ಬಿರುಕು ಸೃಷ್ಟಿಸಿಕೊಂಡ ದಂಪತಿಗಳು, ಸಂಗಾತಿಗಳಿಗೆ ಆಪ್ತಸಲಹೆ ನೀಡುತ್ತೇನೆ. ನನ್ನ ವೃತ್ತಿ ಜೀವನದಲ್ಲಿ ಸಾವಿರಾರು ಜನರಿಗೆ ಥೆರಪಿ ನೀಡಿದ್ದೇನೆ. ವಿಚ್ಛೇದನದ ಅಂಚಿಗೆ ಬಂದು ನಿಂತಿದ್ದ ಅನೇಕ ಸಂಬಂಧಗಳನ್ನು ಸರಿಪಡಿಸಿದ್ದೇನೆ, ಅದರ ಜೊತೆಗೆ, ಎಷ್ಟೋ ಪ್ರಯತ್ನಪಟ್ಟರೂ ಸಂಬಂಧಗಳನ್ನು ಸುಧಾರಿಸಲಾಗದೇ ಕೈ ಚೆಲ್ಲಿದ್ದೇನೆ. ಮನೋಲೋಕದ ವ್ಯಾಪಾರವೇ ವಿಚಿತ್ರ, ಇಲ್ಲಿ ಸಮಸ್ಯೆ ಪರಿಹಾರ ಕಾಣುವಲ್ಲಿ ವೈದ್ಯನಿಗಿಂತಲೂ ರೋಗಿಯ ಸಹಕಾರ- ಪರಿಶ್ರಮ ಅಧಿಕವಿರಲೇಬೇಕು.

ನಾನು ಮನಶ್ಯಾಸ್ತ್ರದ ಅಧ್ಯಯನದಲ್ಲಿ ತೊಡಗಿದ್ದ ಸಮಯವದು, ಆಗೆಲ್ಲ ನಾವು ಗೆಳೆಯರು ನಿತ್ಯವೂ ಒಂದಲ್ಲ ಒಂದು ವಿಷಯದ ಕುರಿತು ಚರ್ಚೆ ಮಾಡುತ್ತಿದ್ದೆವು. ನನಗಿನ್ನೂ ನೆನಪಿದೆ, ಒಂದು ದಿನ ಯಾವುದೋ ವಿಷಯದ ಮೇಲೆ ಚರ್ಚೆ ಮಾಡುತ್ತಾ ಅಂದಿದ್ದೆ- “”ಈಗ ಎಲ್ಲರೂ ವಿದ್ಯಾವಂತರಾಗುತ್ತಿದ್ದಾರೆ, ಜಗತ್ತನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ, ಆರ್ಥಿಕ ಲಿಬರೇಷನ್‌ ಸಿಕ್ಕಿದೆ, ಈ ನಾಗಾಲೋಟವನ್ನು ನೋಡಿದರೆ ಮುಂದೆ ಮಾನಸಿಕ ಸಮಸ್ಯೆಗಳಿಂದ ಬಳಲುವವರ ಸಂಖ್ಯೆ ಕಡಿಮೆ ಆಗಬಹುದು” ಅಂತ! ಎಂಥ ತಪ್ಪು ಕಲ್ಪನೆಯದು! ನಾನು ಹಾಗೆ ಯೋಚಿಸಿದೆ ಎನ್ನುವುದನ್ನು ನೆನಪಿಸಿಕೊಂಡರೇ ಮುಜುಗರವಾಗುತ್ತದೆ.

ನಾನು ವೃತ್ತಿ ಜೀವನ ಆರಂಭ ಮಾಡಿದಾಗಿನಿಂದ ಈಗಿನ ಅವಧಿಯವರೆಗಿನ ಪ್ರಕರಣಗಳನ್ನೆಲ್ಲ ನೋಡಿದಾಗ ಒಂದಂಶವಂತೂ ಸ್ಪಷ್ಟವಾಗಿ ಹೇಳಬಲ್ಲೆ- ಈಗ ಮನುಷ್ಯ ಸಂಬಂಧಗಳು ಅತ್ಯಂತ ದುರ್ಬಲ ಘಟ್ಟಕ್ಕೆ ಬಂದು ತಲುಪಿಬಿಟ್ಟಿವೆ. ಖನ್ನತೆಯೆನ್ನುವುದು ಸರ್ವೇಸಾಮಾನ್ಯ ಸಂಗತಿ ಯಾಗಿ ಬದಲಾಗಿಬಿಟ್ಟಿದೆ, ಸಂಬಂಧಗಳು ಇಂದು ಹುಟ್ಟಿ ಸಂಜೆಯೊಳಗೆ ಮುದುಡುವ ನಾಜೂಕು ಹೂವಿನಂತಾಗಿಬಿಟ್ಟಿವೆ. ನಾನು ಹೇಳುತ್ತಿರುವುದು ಅಮೆರಿಕದ ವಿಚಾರ, ಬಹುಶಃ ಇಂದು ಅನೇಕ ರಾಷ್ಟ್ರಗಳಲ್ಲೂ ಇದೇ ಪರಿಸ್ಥಿತಿ ಇರಬಹುದೆಂದೇ ಊಹಿಸುತ್ತೇನೆ.

ಅದರಲ್ಲೂ ಪ್ರೇಮ-ಸಂಬಂಧವೆನ್ನುವುದು ಇಂದು ಅತ್ಯಂತ ದುರ್ಬಲ ವಸ್ತುವಾಗಿ ಬದಲಾಗಿಬಿಟ್ಟಿದೆ. ಏಕೆ ಹೀಗಾಗುತ್ತಿದೆ ಎನ್ನುವ ಪ್ರಶ್ನೆಗೆ ಒಂದೇ ಉತ್ತರ ಇರುವುದಿಲ್ಲ, ಆದರೂ ಒಂದು ಪ್ರಮುಖ ಸಂಗತಿಯಂತೂ ಈ ಸಮಸ್ಯೆಗೆ ಮುಖ್ಯ ಕಾರಣ ಎಂದು ಹೇಳಬಲ್ಲೆ…

Advertisement

ಅವನು ಸುಮಾರು 30ರ ಯುವಕ, ಅವನ ಮಡದಿಗೆ 27/28 ಇರಬಹುದು. ಸಂಸಾರದಲ್ಲಿ ಸಮಸ್ಯೆಗಳು ಎದುರಾಗಿಬಿಟ್ಟಿವೆ. ಇಬ್ಬರಿಗೂ ಸಂಬಂಧವನ್ನು ಉಳಿಸಿಕೊಳ್ಳುವ ಬಯಕೆ. ಆದರೆ ಹೇಗೆ ಎಂದು ತಿಳಿಯುತ್ತಿಲ್ಲ. ಅವರ ಸಮಸ್ಯೆ ಏನು ಎನ್ನುವುದನ್ನು ಆಲಿಸುತ್ತಿದ್ದಾಗ ಆ ಯುವಕ “”ಸುಖ ಸಂಸಾರವೆನ್ನುವುದು ಎಂದೂ ಈಡೇರದ ಒಂದು ಸುಂದರ ಕನಸು” ಎಂದು ಕಾವ್ಯಾತ್ಮಕವಾಗಿ ಹೇಳಿದ. ಅವರಿಬ್ಬರೂ ಪ್ರೀತಿಸಿ ಮದುವೆಯಾಗಿದ್ದವರು, ಕೇವಲ 3 ವರ್ಷಗಳಲ್ಲೇ ಅವರ ಸಂಸಾರ ತುಂಡಾಗುವ ಹಂತಕ್ಕೆ ಬಂದು ನಿಂತಿತ್ತು. ಇಬ್ಬರಿಗೂ ಒಬ್ಬರ ಮುಖ ಕಂಡರೆ ಒಬ್ಬರಿಗಾಗದಷ್ಟು ಸಂಬಂಧದಲ್ಲಿ ಕ್ಲೇಷ ಏರ್ಪಟ್ಟುಬಿಟ್ಟಿತ್ತು. ಅವನ ಮಾತು ಕೇಳಿದರೆ ಇವಳಿಗೆ ಕಿರಿಕಿರಿಯಾಗುತ್ತಿತ್ತು, ಇವಳ ಮಾತೆಲ್ಲ ಅವನಿಗೆ ಆರೋಪ-ದೂರಿನಂತೆಯೇ ಕೇಳುತ್ತಿತ್ತು. ಒಟ್ಟಲ್ಲಿ ಮಾತು- ಚರ್ಚೆಗಿಂತ ಹೆಚ್ಚಾಗಿ ಜಗಳದಲ್ಲೇ ಪರ್ಯಾವಸಾನ ವಾಗಿದ್ದು ಹೆಚ್ಚು. “ನನ್ನ ಕಷ್ಟವನ್ನು ಇವನು ಅರ್ಥಮಾಡಿಕೊಳ್ಳುವುದೇ ಇಲ್ಲ’ ಎಂಬುದು ಅವಳ ದೂರು, “ನನ್ನ ಮಾತನ್ನು ಇವಳು ಕೇಳಿಸಿಕೊಳ್ಳುವುದೇ ಇಲ್ಲ’ ಎನ್ನುವುದು ಅವನ ಪ್ರತಿ ದೂರು.

ಅವರಿಬ್ಬರೂ ವರ್ಕಿಂಗ್‌ ಕ್ಲಾಸ್‌ ಕಪಲ್‌ಗ‌ಳು. ಇಬ್ಬರೂ ನೌಕರಿಗೆ ಹೋಗುತ್ತಾರೆ. ಅವಳು ಆಸ್ಪತ್ರೆಯೊಂದರಲ್ಲಿ ನರ್ಸು. ಇವನು ಕನ್ಸ್‌ ಟ್ರಕ್ಷನ್‌ ಕಂಪನಿಯೊಂದರಲ್ಲಿ ಇಂಜಿನಿಯರುÅ. ಇಬ್ಬರೂ ಅನೇಕಾ ನೇಕ ಕನಸುಗಳನ್ನು ಕಟ್ಟಿಕೊಂಡೇ ಸಂಸಾರ ಲೋಕಕ್ಕೆ ಧುಮುಕಿದ್ದಾರೆ. ಆದರೆ ನೌಕರಿಯ ಭಾರ ಇಬ್ಬರನ್ನೂ ಗಟ್ಟಿಯಾಗಿ ನಿಲ್ಲಲು ಬಿಟ್ಟೇ ಇಲ್ಲ. ಇವನು ಕಚೇರಿಯಿಂದ ಬರುವ ಹೊತ್ತಲ್ಲಿ ಅವಳು ಆಸ್ಪತ್ರೆಗೆ ಹೊರಟಿರುತ್ತಾಳೆ, ಅವಳು ರಾತ್ರಿ ಡ್ನೂಟಿ ಮುಗಿಸಿ ಬೆಳಗ್ಗೆ ಮನೆಗೆ ಬಂದಾಗ ಇವನು ಶೂ ಧರಿಸಿ ಹೊರಡಲು ಸಿದ್ಧನಾಗಿರುತ್ತಾನೆ.

“ನಾವು ಚೆನ್ನಾಗಿ ಕುಳಿತು ಮಾತನಾಡಿದ್ದೇ ವಿರಳ ಆಗಿದೆ ಮೇಡಂ. ಆದರೂ ಸ್ವಲ್ಪ ಸಮಯ ಜೊತೆಗಿದ್ದಾಗಲೂ ಜಗಳ ಆರಂಭವಾಗಿಬಿಡುತ್ತದೆ. ಇವಳು ಸರಿಯಾಗಿ ಮಾತನಾಡುವುದೇ ಇಲ್ಲ. ರೊಮ್ಯಾನ್ಸ್‌ ಅಂತೂ ಸತ್ತು ಹೋಗಿದೆ. ಏನು ಮಾಡೋದು’ ಎಂದು ಅವನಂದ. “ನಾನು ದಣಿದು ಬಂದಿರುತ್ತೇನೆ…. ‘ ಅಂತ ಅವಳು ಏನನ್ನೋ ಹೇಳುವ ಮುನ್ನವೇ ಇವನು ಮಾತು ತುಂಡರಿಸಿ ಅಂದ-“ಸುಮ್ಮನೇ ಏನಾದರೂ ನೆಪ ಹೇಳುತ್ತಾಳೆ, ನಾನೇನು ಮನೆಯಲ್ಲೇ ಕುಳಿತಿರುತ್ತೇನಾ? ನನಗೂ ದಣಿವಾಗಿರುತ್ತದೆ’

ಅವನು ಇಷ್ಟು ಮಾತನಾಡಿದ್ದೇ ಇಬ್ಬರ ನಡುವೆ ಮತ್ತೆ ಆರೋಪ- ಪ್ರತ್ಯಾರೋಪಗಳ ಯುದ್ಧ ಆರಂಭವಾಗಿಬಿಟ್ಟಿತು. ಮಾತನಾಡುವಾಗ ಅವರ ಹಾವಭಾವವನ್ನು, ಉಸಿರಿನ ಏರಿಳಿತಗಳನ್ನು ನಾನು ಗಮನಿಸುತ್ತಾ ಹೋದೆ. ಅವರಿಬ್ಬರಿಗೂ ಮಾತು ನಿಲ್ಲಿಸಲು ಹೇಳಿ, ಆಕೆಗೆ ಕೇಳಿದೆ- “ನಿಮ್ಮ ಜೀವನದಲ್ಲಿ ಅತಿ ಹೆಚ್ಚು ಪ್ರಭಾವ ಬೀರಿದ ಪುರುಷ ಯಾರು?’ ಆಕೆ ಕೂಡಲೇ ಹೇಳಿದಳು-“ನನ್ನ ಅಪ್ಪ’.

“ನಿನ್ನ ಅಪ್ಪನಿಂದ ನೀನು ಕಲಿತ ಪಾಠಗಳೇನು…ಒಬ್ಬ ಗಂಡಸು ಹೇಗಿರಬೇಕು ಅಂತ ನಿನಗೆ ಅನ್ನಿಸುತ್ತೆ?’
“ಅವನು ಧೈರ್ಯನಂತನಾಗಿರಬೇಕು, ವಯಸ್ಸಿಗೆ ತಕ್ಕಂಥ ಗಾಂಭೀರ್ಯವಿರಬೇಕು… ಹೆಂಡತಿಗೆ ಏನು ಬೇಕು ಎನ್ನುವುದನ್ನು ಅವನು ಅರಿತಿರಬೇಕು’ ಅಂದಳು.
ಈಗ ಅವನಿಗೆ ಕೇಳಿದೆ-“ನಿನಗೆ ನಿನ್ನ ಜೀವನದಲ್ಲಿ ಮಾದರಿ ಎನಿಸುವ ಮಹಿಳೆ ಯಾರು?’. ಅವನಂದ “ನನ್ನ ಅಮ್ಮ’
ನಾನು ಕೇಳಿದೆ- “ನಿನ್ನ ಅಮ್ಮನಿಂದ ನೀನು ಕಲಿತ ಪಾಠಗಳೇನು…ಹೆಂಗಸು ಹೇಗಿರಬೇಕು?’
“ಅವಳು ಚಿಕ್ಕ ಮಗುವಿನಂತೆ ಆಡಬಾರದು. ಗಂಡನಿಗೆ ಏನು ಬೇಕು ಎನ್ನುವ ಪ್ರಬುದ್ಧತೆ ಅರಿತಿರಬೇಕು’ ಎಂದ.

ಅವರಿಬ್ಬರ ಬಯಕೆಯಲ್ಲಿ, ನಿರೀಕ್ಷೆಗಳಲ್ಲಿ ಒಂದು ಸಮಾನ ಸಂಗತಿಗಳನ್ನು ಗಮನಿಸಿ ನೋಡಿ. ಇಬ್ಬರೂ ತಮಗೇನು ಬೇಕು ಎನ್ನುವುದು ಎದುರಿನ ವ್ಯಕ್ತಿಗೆ ತಿಳಿದಿರಬೇಕು ಎಂದು ಭಾವಿಸುತ್ತಾರೆ ಮತ್ತು ಎದುರಿನ ವ್ಯಕ್ತಿಗೆ ವಯಸ್ಸಿಗೆ ತಕ್ಕಂಥ ವರ್ತನೆ ಇರಬೇಕು ಎಂದು ಆಶಿಸುತ್ತಾರೆ.
ಅವರ ಸಮಸ್ಯೆಯ ಮೂಲ ಇರುವುದು ಇಲ್ಲೇ ಎನ್ನುವುದು ನನಗೆ ಅರ್ಥವಾಯಿತು. ಈ ಸಮಸ್ಯೆ ಕೇವಲ ಅವರಲ್ಲಷ್ಟೇ ಅಲ್ಲ, ಇಂದು ಜಗತ್ತಿನ ಬಹುತೇಕ ಸಂಸಾರಗಳಲ್ಲೂ ಇದೇ ಆಗುತ್ತಿದೆ.

ಯಾವಾಗ ನಾವು ದೊಡ್ಡವರನ್ನು ದೊಡ್ಡವರಂತೆ ನೋಡುವುದನ್ನು ನಿಲ್ಲಿಸುತ್ತೇವೋ ಆಗ ಸಮಸ್ಯೆಗೆ ಪರಿಹಾರಗಳು ಗೋಚರಿಸಲಾರಂ ಭಿಸುತ್ತವೆ. ಸತ್ಯವೇನೆಂದರೆ, ನಮಗೆ ಎಷ್ಟೇ ವಯಸ್ಸಾಗಿರಬಹುದು ಆದರೂ ನಮ್ಮ ಅಗತ್ಯಗಳು, ಆತಂಕಗಳು, ಸಿಟ್ಟು, ನೋವು ಉದ್ಭವವಾಗೋದು ನಮ್ಮೊಳಗಿನ ಮಗುಮನಸ್ಸಿನಲ್ಲಿಯೇ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.

ನಮ್ಮೊಳಗಿನ ಆ ಮಗುವಿನ ಇರುವಿಕೆಯನ್ನೇ ನಾವು ಕಡೆಗಣಿಸಿಬಿಡುತ್ತಿದ್ದೇವೆ. ಮಗುವೊಂದು ತುಂಬಾ ಅಳುತ್ತಿದೆ ಅಥವಾ ಆಟಿಕೆ ಎಸೆದು ಕಿರುಚಾಡಿ ತಂಟೆ ಮಾಡುತ್ತಿದೆ ಎಂದುಕೊಳ್ಳಿ. ಸಾಮಾನ್ಯವಾಗಿ ಬಹುತೇಕ ಸಂದರ್ಭಗಳಲ್ಲಿ ಅದರ ಅಪ್ಪ-ಅಮ್ಮ ಏನು ಮಾಡುತ್ತಾರೆ? ಅದರ ಅಳು ಅಥವಾ ಸಿಟ್ಟಿಗೆ ಏನು ಕಾರಣವಿರಬಹುದು ಎಂದು ಹುಡುಕುತ್ತಾರೆ ತಾನೆ? ಪಾಪ ಅದಕ್ಕೆ ಭಯವಾಗಿದೆಯೇನೋ, ಹಸಿವಾಗಿದೆಯೋನೋ, ಜ್ವರ ಬಂದಿದೆಯೋನೋ, ಸುಸ್ತಾಗಿದೆಯೇನೋ, ನಮ್ಮ ಗಮನ ಸೆಳೆಯುವುದಕ್ಕಾಗಿ ಹೀಗೆ ರಂಪ ಮಾಡುತ್ತಿದೆಯೇನೋ ಅಂತ ಮಗುವಿನ ಅಳುವಿಗೆ ಕಾರಣ ಹುಡುಕುತ್ತಾರೆ. ಅದರ ಬದಲು ಅದರ ಮುಂದೆ ನಿಂತು, “ನಿನ್ನಿಂದ ನನಗೆ ಸಾಕಾಗಿ ಹೋಗಿದೆ…ನೆಮ್ಮದಿ ಹಾಳಾಗಿದೆ’ ಎನ್ನುತ್ತಾ ತಮಗಾಗುತ್ತಿರುವ ತೊಂದರೆಗಳ ಬಗ್ಗೆ ಭಾಷಣ ಬಿಗಿಯುತ್ತಾ, ಅದರ ಜೊತೆಗೆ ತಾವೂ ಆಟಿಕೆಗಳನ್ನು ಪುಡಿಗಟ್ಟೋದಿಲ್ಲ ತಾನೇ?

ನಮ್ಮ ಸಂಗಾತಿಯನ್ನೂ ನಾವು ಮಗುವಿನಂತೆ ನೋಡಲು ಆರಂಭಿಸಿದಾಗ…ಅವರ ಸಿಟ್ಟು-ಸೆಡವಿನ ಹಿಂದೆ, ತಂಟೆ- ತಕರಾರುಗಳ ಹಿಂದೆ ಇದೇ ರೀತಿಯ ಕಾರಣಗಳು ಇರುತ್ತವೆ ಎನ್ನುವುದು ಅರ್ಥವಾಗುತ್ತದೆ. ನಾವು ಎಷ್ಟೇ ದೊಡ್ಡವರಾಗಿದ್ದರೂ ನೋವಾದಾಗ ನಮಗೆ ಸಾಂತ್ವನ ನೀಡುವವರು ಬೇಕು, ಬೇಸರವಾದಾಗ ಬೆನ್ನು ಸವರಿ ತಬ್ಬುವವರು ಬೇಕು, ರೇಗಾಟ ಬಂದಾಗ ನಮ್ಮ ಮಾತುಗಳನ್ನು ಕೇಳಿ ರಮಿಸುವವರು ಬೇಕು…ಅಂದರೆ ನಾವೆಲ್ಲರೂ ಎಷ್ಟೇ ಬೆಳೆದಿದ್ದರೂ ನಮ್ಮ ಬಹುತೇಕ ಭಾವನೆಗಳು-ವರ್ತನೆಗಳಿಗೂ ಮಗುವೊಂದರ ಭಾವನೆಗಳಿಗೂ ವ್ಯತ್ಯಾಸವೇನೂ ಇಲ್ಲ. ಮಗುವಿಗೆ ಇರುವ ಅಡ್ವಾಂಟೇಜ್‌ ಏನೆಂದರೆ ಅದು ತನಗೆ ನೋವಾದಾಗ ಕಿರುಚಾಡಿಯೋ, ಅತ್ತೋ, ಆಟಿಕೆಗಳನ್ನು ಮುರಿದೋ ಎದುರಿನವರ ಗಮನ(ಅನುಕಂಪ) ಸೆಳೆದುಬಿಡುತ್ತದೆ. ಆದರೆ ನಾವು ದೊಡ್ಡವರಲ್ಲವೇ, ನಮಗೆ ಅದೇ ಅನುಕಂಪ-ಸಹಾನುಭೂತಿ ಬೇಕು ಎಂದು ಒಪ್ಪಿಕೊಳ್ಳಲು ಸಿದ್ಧವಿರು ವುದಿಲ್ಲ. ನೆಲದ ಮೇಲೆ ಉರುಳಾಡಿ, ಮನೆಯ ಸಾಮಾನುಗಳನ್ನು ಮುರಿಯುವ ಬದಲು ಅದೇ ಭಾವನೆಗಳನ್ನು ಸಿಟ್ಟು- ಚುಚ್ಚುಮಾತು- ಅವಹೇಳನದ ರೂಪದಲ್ಲಿ ವ್ಯಕ್ತಪಡಿಸಿಬಿಡುತ್ತೇವೆ. ನಾವು ಹೀಗೆ ಮಾಡುತ್ತಿದ್ದೇವೆ ಎನ್ನುವುದು ನಮಗೆ ತಿಳಿಯುವುದೇ ಇಲ್ಲ. ಆದರೆ ಎದುರಿನ ವ್ಯಕ್ತಿ ನಮ್ಮ ಭಾವನೆಗಳ ಮೂಲವನ್ನು ಹುಡುಕುವ ಪ್ರಯತ್ನ ಮಾಡುವುದಿಲ್ಲವಾದ್ದರಿಂದ ಅವನ ಕಣ್ಣಿಗೆ ನಾವು ದುಷ್ಟರಂತೆ, ಅಸಹಿಷ್ಣುಗಳಂತೆ, ಅಸೂಕ್ಷ್ಮ ವ್ಯಕ್ತಿಗಳಂತೆ ಕಾಣಿಸಲಾರಂಭಿಸಿಬಿಡುತ್ತೇವೆ. ನಮ್ಮ ಭಾವನೆಗಳನ್ನು ಅವನು/ಅವಳು ಅರ್ಥಮಾಡಿಕೊಳ್ಳು ವುದಿಲ್ಲ ಎಂದು ನಾವು ಅವರಿಂದ ದೂರ ಕಾಯ್ದುಕೊಳ್ಳಲು ಆರಂಭಿಸುತ್ತೇವೆ. ಆಗ ಅಂಟಿ ಕೂತರೂನೂ ಅಂತರ ಹೆಚ್ಚಾಗಲಾರಂಭಿಸುತ್ತದೆ…

ಅವರಿಬ್ಬರಿಗೆ ಇದೇ ಸಂಗತಿಯನ್ನೇ ವಿವರಿಸಿ ಹೇಳಿದೆ. ಅವನು ತನ್ನ ಮಡದಿಯತ್ತ ತಿರುಗಿ ಕೇಳಿದ-“ತುಂಬಾ ಹೆವಿ ಆಗ್ತಿದೇನಾ ಕೆಲಸ ನಿನಗೆ?’ ಅವಳು “ಹೂಂ’ ಎನ್ನುತ್ತಾ ಅವನ ಕೈ ಹಿಡಿದುಕೊಂಡಳು…
ನಾನು ಅವರನ್ನು ಬೀಳ್ಕೊಡುತ್ತಾ ಅಂದೆ…”ನೆನಪಿಡಿ, ನೀವಿಬ್ಬರೂ ಇನ್ನೂ ಪುಟ್ಟ ಮಕ್ಕಳೇ!’

ಎಲೆನಾ ಸ್ಯಾಂಟರೆಲಿ
ಮನಶ್ಯಾಸ್ತ್ರಜ್ಞರು, ಬರಹಗಾರ್ತಿ

Advertisement

Udayavani is now on Telegram. Click here to join our channel and stay updated with the latest news.

Next