ತುಮಕೂರು: ಸದಾ ಬರಗಾಲದ ಜಿಲ್ಲೆಯೆಂದೇ ಹೆಸರಾಗುತ್ತಿರುವ ತುಮಕೂರು ಜಿಲ್ಲೆಯಲ್ಲಿ ದಿನೇ ದಿನೆ ಭೂಮಿಯಲ್ಲಿನ ಅಂತರ್ಜಲ ಬತ್ತಿಹೋಗುತ್ತಿದೆ. ಸಾವಿರಾರು ಅಡಿವರೆಗೆ ಭೂಮಿ ಕೊರೆದರೂ ನೀರಿ ಲ್ಲದೇ ಬರೀ ಧೂಳೇ ಬರುತ್ತಿದೆ. ಈ ಭಾಗದಲ್ಲಿ ತಾಪಮಾನ ಏರಿಕೆಯಾಗುತ್ತಿದೆ. ಈ ಬೇಸಿಗೆ ಯಲ್ಲಿ ಈ ಹಿಂದೆ ಎಂದೂ ಕಂಡಿರದಷ್ಟು ಸುಡು ಬಿಸಿಲ ಬೇಗೆ ಹೆಚ್ಚುತ್ತಿದೆ. ತುಮಕೂರು ಸೇರಿದಂತೆ ಜಿಲ್ಲೆಯ ಐದು ತಾಲೂಕುಗಳಲ್ಲಿ ಅಂತರ್ಜಲ ಹೆಚ್ಚು ಬಳಸುವ ತಾಲೂಕು ಗಳೆಂದು ಅಂತರ್ಜಲ ನಿರ್ದೇ ಶನಾಲಯವು ಕೇಂದ್ರೀಯ ಅಂತರ್ಜಲ ಮಂಡಳಿ ಸಹಯೋಗದಲ್ಲಿ ನಡೆಸಿರುವ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ.
ಅಂತರ್ಜಲ ನಿರ್ದೇಶನಾಲಯವು ಕೇಂದ್ರೀಯ ಅಂತರ್ಜಲ ಮಂಡಳಿ ಸಹಯೋಗದೊಂದಿಗೆ ರಾಜ್ಯದ ಅಂತರ್ಜಲ ಸಂಪನ್ಮೂಲವನ್ನು ಮೌಲೀಕರಿಸಿ ವರದಿ ಯನ್ವಯ ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಕೊರಟಗೆರೆ, ಮಧುಗಿರಿ, ತುಮಕೂರು, ತಿಪಟೂರು ತಾಲೂಕು ಗಳನ್ನು ಅಂತರ್ಜಲ ಅತಿಬಳಕೆಯ ತಾಲೂಕುಗಳೆಂದು ಎಂದು ಗುರುತಿಸಿದೆ. ಈ ಭಾಗದಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿರುವುದಕ್ಕೆ ಈ ವರದಿ ಸಾಕ್ಷಿಯಾಗಿದೆ.
ನೀರಿಲ್ಲದೇ ರೈತರಿಗೆ ಸಂಕಷ್ಟ: ಬಹುತೇಕ ಬಯಲು ಸೀಮೆ ಪ್ರದೇಶವಾಗಿರುವ ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಸಮರ್ಪಕ ಮಳೆಯಾಗದೇ ಅಂತರ್ಜಲ ಭತ್ತಿ ಹೋಗುತ್ತಿದೆ, ಜಿಲ್ಲೆಯಾದ್ಯಂತ ಕಳೆದ 10 ವರ್ಷಗಳಿಂದ ಮಳೆ ಬಾರದೆ ಜನ ಮಳೆಗಾಗಿ ಮುಗಿಲು ಕಡೆ ನೋಡುತ್ತಿದ್ದರು, ಕುಡಿಯುವ ನೀರಿನ ತೊಂದರೆ ತೀವ್ರಗೊಂಡಿದ್ದ ಹಿನ್ನೆಲೆಯಲ್ಲಿ ಕುಡಿವ ನೀರಿಗಾಗಿ ಮತ್ತು ಕೃಷಿ ಚಟುವಟಿಕೆಗೆಗಾಗಿ ಸಾವಿರಾರು ಬೋರ್ ವೆಲ್ಗಳನ್ನು ರೈತರು ಕೊರೆಸುತ್ತಿದ್ದಾರೆ. ಸರ್ಕಾರದ ವರದಿನ್ವಯ ಈ ಭಾಗಗಳಲ್ಲಿ ಬೋರ್‌ವೆಲ್ ಕೊರೆಸುವವರು ಅನುಮತಿ ಪಡೆಯಬೇಕಾಗಿದೆ. ಆದರೆ, ರೈತರು ತಮ್ಮ ಜಮೀನು ಉಳಿಸಿಕೊಳ್ಳಲು ಸಾಲ ಮಾಡಿ ಬೋರ್‌ವೆಲ್ ಕೊರೆಸಿ ನೀರು ಸಿಗದೇ ಸಂಕಷ್ಟ ಅನುಭವಿಸುತ್ತಿದ್ದಾರೆ.
ತೋಟ ಉಳಿಸಿಕೊಳ್ಳಲು ಪರದಾಟ: ಜಿಲ್ಲೆಯ ಚಿಕ್ಕನಾಯಕನಹಳ್ಳಿ, ತಿಪಟೂರು ಭಾಗದಲ್ಲಿ ತೆಂಗು, ಅಡಿಕೆ ಪ್ರಧಾನವಾದ ಬೆಳೆಯಾಗಿದೆ. ಒಂದು ಕಡೆ ಮಳೆಯಿಲ್ಲ. ಇನ್ನೊಂದು ಕಡೆ ತೆಂಗಿಗೆ ರೋಗ ಜೊತೆಗೆ ಅಂತರ್ಜಲ ಕುಸಿತ ಏನಾದರೂ ಮಾಡಿ ತಮ್ಮ ಬದುಕಿನ ಆಸರೆಯಾಗಿರುವ ತೆಂಗಿನ ತೋಟವನ್ನು ಉಳಿಸಿಕೊಳ್ಳಬೇಕು ಎನ್ನುವ ತವಕ ರೈತರಲ್ಲಿ ಉಂಟಾ ಗಿದೆ. ಕಳೆದ ಆರೇಳು ವರ್ಷಗಳಿಂದ ಒಂದು ತೆಂಗಿನ ತೋಟಕ್ಕೆ 4-5 ಬೋರ್‌ವೆಲ್ಗಳನ್ನು ಕೊರೆಸಿದ್ದು, ಹಲವು ಬೋರ್‌ವೆಲ್ಗಳು ವಿಫಲವಾಗಿದೆ. ಸರ್ಕಾರ ದಿಂದ ಕುಡಿಯುವ ನೀರಿಗೆ ಒಂದು ವರ್ಷದಲ್ಲಿ ಎಷ್ಟು ಬೋರ್‌ವೆಲ್ಗಳನ್ನು ಕೊರೆಸಿದ್ದಾರೆ ಎನ್ನುವ ಮಾಹಿತಿ ಸಿಗುತ್ತದೆ. ಆದರೆ, ರೈತರು ತಮ್ಮ ತೋಟಗಳನ್ನು ಉಳಿಸಿಕೊಳ್ಳಲು ಎಷ್ಟು ಬೋರ್‌ವೆಲ್ಗಳನ್ನು ಕೊರೆಸಿದ್ದಾರೆ ಎನ್ನುವ ಮಾಹಿತಿ ಎಲ್ಲೂ ಇಲ್ಲ. ಅಷ್ಟರ ಮಟ್ಟಿಗೆ ಭೂಮಿಯ ಅಂತರ್ಜಲ ಬಳಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ದಿನೇ ದಿನೆ ಅಂತರ್ಜಲ ಮಟ್ಟ ಕುಸಿಯುತ್ತಿದೆ.
2017ರ ಮುಂಗಾರು ನಂತರ ಅಲ್ಲಲ್ಲಿ ಸುರಿದ ಧಾರಾಕಾರ ಮಳೆಯಿಂದ ಕೆಲ ಕೆರೆ, ಕಟ್ಟೆಗಳು ತುಂಬಿರುವ ಹಿನ್ನೆಲೆಯಲ್ಲಿ ಭತ್ತಿ ಹೋದ ಬೋರ್‌ವೆಲ್ಗಳಲ್ಲಿ 2018ರಲ್ಲಿ ಸ್ವಲ್ಪಮಟ್ಟಿಗೆ ನೀರು ಬರ ಲಾರಂಭಿಸಿತ್ತು. 2018-19ರಲ್ಲಿ ಮತ್ತೆ ಮಳೆ ಕೈಕೊಟ್ಟಿ ದರಿಂದ ಜಿಲ್ಲೆಯಾದ್ಯಂತ ಸಾವಿರಾರು ಕೆರೆ, ಕಟ್ಟೆಗಳು ನೀರಿಲ್ಲದೆ ಒಣಗಿ ಹೋಗಿವೆ. ಪತ್ರಿವರ್ಷ ಪೂರ್ವ ಮುಂಗಾರು ಮಳೆ ಅಲ್ಲಲ್ಲಿ ಸುರಿಯುತ್ತಿದ್ದ ಪರಿಣಾಮ ಈ ವೇಳೆಗೆ ಕನಿಷ್ಠ ಕೆರೆಗಳ ಗುಂಡಿಗಳಲ್ಲಿ ಆದರೂ ನೀರು ನಿಲ್ಲುತಿತ್ತು. ಆದರೆ, ಈ ಬಾರಿ ಪೂರ್ವ ಮುಂಗಾರು ಮಳೆ ಕೈಕೊಟ್ಟಿರುವುದರ ಪರಿಣಾಮದಿಂದಾಗಿ ಕೆರೆಗಳು ನೀರಿಲ್ಲದೆ ಬೀರುಕು ಬಿಡುತ್ತಿವೆ. ಬರದ ಕಾರ್ಮೋಡ ಜಿಲ್ಲೆ ಯಾದ್ಯಂತ ಕಂಡು ಬಂದಿದೆ.
2 ಸಾವಿರಕ್ಕೂ ಹೆಚ್ಚು ಕೊಳವೆ ಬಾವಿಗಳು ವಿಫಲ: ಕೆರೆ, ಕಟ್ಟೆಗಳಲ್ಲಿ ನೀರಿಲ್ಲದೇ ಬೋರ್‌ವೆಲ್ಗಳು ಭತ್ತಿ ಹೋಗಿದೆ. ಈಗ ಬೋರ್‌ವೆಲ್ ಕೊರೆಸಿದರೂ ನೀರು ಬರದ ಸ್ಥಿತಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಇಂದಿಗೂ ಇದೆ. ಜಿಲ್ಲಾಡಳಿತ ನೀಡಿರುವ ವರದಿ ಪ್ರಕಾರ ಕಳೆದ ವರ್ಷ ಜಿಲ್ಲೆಯ ನಗರ ಪ್ರದೇಶಗಳಲ್ಲಿ 1285 ಕೊಳವೆ ಬಾವಿಗಳನ್ನು ಕೊರೆದಿದ್ದು, ಅದರಲ್ಲಿ 1062 ಕೊಳವೆಬಾವಿಗಳು ಕಾರ್ಯನಿರ್ವಹಿಸುತ್ತಿದ್ದ 223 ಕೊಳವೆ ಬಾವಿಗಳು ವಿಫಲಗೊಂಡಿವೆ. ಅತಿ ಹೆಚ್ಚು ಅಂತರ್ಜಲ ಬಳಕೆಯಾಗುತ್ತಿರುವ ಚಿಕ್ಕ ನಾಯಕನಹಳ್ಳಿ ಪಟ್ಟಣದಲ್ಲಿ ಕೊರೆಸಿರುವ 62 ಕೊಳವೆ ಬಾವಿಗಳಲ್ಲಿ 22 ಕಾರ್ಯನಿರ್ವಹಿಸಿದರೆ 33 ವಿಫಲಗೊಂಡಿವೆ. ತುಮಕೂರು ನಗರದಲ್ಲಿ 694 ಕೊಳವೆಬಾವಿಗಳಲ್ಲಿ 569 ಕೊಳವೆಬಾವಿ ಕಾರ್ಯ ನಿರ್ವಹಿಸಿದರೆ 250 ವಿಫಲಗೊಂಡಿವೆ. ತಿಪಟೂರು ನಗರದಲ್ಲಿ 193 ಕೊಳವೆಬಾವಿಗಳಲ್ಲಿ 158 ಕಾರ್ಯ ನಿರ್ವಹಿಸುತ್ತಿದ್ದು, 33 ವಿಫಲಗೊಂಡಿವೆ. ಮಧುಗಿರಿ ಯಲ್ಲಿ 71 ಕೊಳವೆಬಾವಿಗಳ ಪೈಕಿ 63 ಕಾರ್ಯ ನಿರ್ವಹಿಸಿ 8 ವಿಫಲಗೊಂಡಿವೆ. ಕೊರಟಗೆರೆಯಲ್ಲಿ 21 ಕೊಳವೆಬಾವಿಗಳ ಪೈಕಿ 14 ಕಾರ್ಯನಿರ್ವಹಿಸಿದ್ದು, 7 ವಿಫಲಗೊಂಡಿವೆ. ಅದೇ ರೀತಿಯಲ್ಲಿ ಜಿಲ್ಲೆಯಾಧ್ಯಂತ ಗ್ರಾಮೀಣ ಪ್ರದೇಶಗಲ್ಲಿ 10 ಸಾವಿರಕ್ಕೂ ಹೆಚ್ಚು ಕುಡಿಯುವ ನೀರು ಯೋಜನೆಯಲ್ಲಿ ಕೊಳವೆಬಾವಿ ಕೊರೆಸಿದ್ದು, 2 ಸಾವಿರಕ್ಕೂ ಹೆಚ್ಚು ಕೊಳವೆಬಾವಿಗಳು ವಿಫಲವಾಗಿದೆ. ಚಿಕ್ಕನಾಯಕನಹಳ್ಳಿ, ತುಮಕೂರು, ಮಧುಗಿರಿ, ತಿಪಟೂರು, ಕೊರಟಗೆರೆ ಬಾಗಗಳಲ್ಲಿ ಹೆಚ್ಚು ಬೋರ್‌ವೆಲ್ಗಳು ವಿಫಲವಾಗಿರುವುದು ಕಂಡು ಬಂದಿದೆ. ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದೆ ಎನ್ನುವುದು ತಿಳಿಯುತ್ತದೆ.
ಜಿಲ್ಲೆಯಲ್ಲಿ ದಿನೇ ದಿನೆ ಅಂತರ್ಜಲ ಬಳಕೆ ಹೆಚ್ಚುತ್ತಾ ಹೋದರೆ ಮುಂದೊಂದು ದಿನ ಈ ಭಾಗದಲ್ಲಿ ಅಂತರ್ಜಲ ಸಂಪೂರ್ಣ ಕುಸಿಯುವ ಸಾಧ್ಯತೆಗಳೇ ಹೆಚ್ಚಿದೆ. ಸರ್ಕಾರ ಈ ಭಾಗದಲ್ಲಿ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿ, ನೀರಿನ ಸೌಲಭ್ಯ ಕಲ್ಪಿಸಿ ಅಂತರ್ಜಲ ಹೆಚ್ಚಿಸದಿದ್ದರೆ ಮುಂದೆ ಭಾರೀ ತೊಂದರೆಯಾಗುವ ಸಾಧ್ಯತೆಗಳೇ ಹೆಚ್ಚಿದೆ.
● ಚಿ.ನಿ.ಪುರುಷೋತ್ತಮ್