Advertisement

ಬಿಜೆಪಿಗೆ ರಾಜ್ಯದ ಒಂಬತ್ತು ಕ್ಷೇತ್ರಗಳಲ್ಲಿ ಸೂಕ್ತ ಅಭ್ಯರ್ಥಿಗಳೇ ಇಲ್ಲ

06:00 AM Sep 08, 2018 | |

ಬೆಂಗಳೂರು: ಮುಂದಿನ ಲೋಕಸಭೆ ಚುನಾವಣೆಯಲ್ಲಿ 25 ಸ್ಥಾನ ಗೆಲ್ಲುವ ಗುರಿ ಹೊಂದಿರುವ ಬಿಜೆಪಿಗೆ ರಾಜ್ಯದ ಒಂಬತ್ತು ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳೇ ಇಲ್ಲ!

Advertisement

ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಖುದ್ದು ಖಾಸಗಿ ಸಂಸ್ಥೆಯೊಂದರ ಮೂಲಕ ನಡೆಸಿರುವ ಆಂತರಿಕ ಸಮೀಕ್ಷೆಯಲ್ಲೇ ಇದು ಗೊತ್ತಾಗಿದೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಗೆಲುವು ಸಾಧಿಸಿರುವ ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಮಂಡ್ಯ, ರಾಯಚೂರು, ಚಾಮರಾಜನಗರ, ಕಲಬುರಗಿ,  ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳ ಕೊರತೆ ಇದೆ.

ಒಂದೊಮ್ಮೆ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದರೆ ತುಮಕೂರು, ಶಿವಮೊಗ್ಗ, ಮೈಸೂರು, ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲೂ ಕಠಿಣ ಸವಾಲು ಎದುರಾಗಬಹುದು ಎಂಬುದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.

ಬಿಜೆಪಿ ಗೆಲುವು ಸಾಧಿಸಿರುವ ವಿಜಯಪುರ ಹಾಗೂ ದಾವಣಗೆರೆ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಬದಲಾವಣೆ ಮಾಡಿದರೆ ಸೂಕ್ತ ಎಂಬ ಅಭಿಪ್ರಾಯ ಸಹ ಸಮೀಕ್ಷೆ ಸಂದರ್ಭದಲ್ಲಿ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.

ಹೀಗಾಗಿ, ಒಂಬತ್ತು ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳ ತಲಾಷೆಗೆ ಅಮಿತ್‌ ಶಾ ಮುಂದಾಗಿದ್ದು, ರಾಜ್ಯ ನಾಯಕರಿಗೂ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಪ್ರಭಾವಿ ನಾಯಕರಿಗೆ “ಗಾಳ’ ಹಾಕಲು ಸೂಚಿಸಿದ್ದಾರೆ. ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿರುವ ಚೆಲುವರಾಯಸ್ವಾಮಿ, ಎಚ್‌.ಸಿ.ಬಾಲಕೃಷ್ಣ, ಕಾಂಗ್ರೆಸ್‌ನ ಮಾಜಿ ಸಚಿವ ಎ.ಮಂಜು, ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಅವರನ್ನು ಪಕ್ಷಕ್ಕೆ ಕರೆತಂದರೆ ಲಾಭವಾಗಬಹುದೇ ಎಂಬ ಲೆಕ್ಕಾಚಾರಗಳು ನಡೆಯುತ್ತಿವೆ.

Advertisement

ಈ ಮುಖಂಡರನ್ನು ಹೊರತುಪಡಿಸಿ ಆಯಾ ಕ್ಷೇತ್ರಗಳಲ್ಲಿ ಪ್ರಭಾವ ಹೊಂದಿರುವ ನಾಯಕರನ್ನು ಸೆಳೆಯಲು ಕಾರ್ಯತಂತ್ರ ರೂಪಿಸಲಾಗಿದೆ. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಗೆ ವಿರೋಧ ಇರುವವರ ಪಟ್ಟಿ ಸಹ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಸೂಕ್ತ ಅಭ್ಯರ್ಥಿಗೆ ಹುಡುಕಾಟ:
ಕೋಲಾರ ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಮಾಜಿ ಶಾಸಕ ನಾರಾಯಣಸ್ವಾಮಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ಸಿಗಲಿಲ್ಲ ಎಂದು ಮುನಿಸಿಕೊಂಡು ಪಕ್ಷದ ಚಟುವಟಿಕೆಗಳಿಂದ ದೂರವಾಗಿ ಜೆಡಿಎಸ್‌ ಅಭ್ಯರ್ಥಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಹೀಗಾಗಿ, ಅಲ್ಲಿ ಹೊಸ ಅಭ್ಯರ್ಥಿ ಹುಡುಕಾಟ ನಡೆದಿದೆ. ಈ ಹಿಂದೆ ಸ್ಪರ್ಧೆ ಮಾಡಿ ಪ್ರಬಲ ಪೈಪೋಟಿ ನೀಡಿದ್ದ ಡಿ.ಎಸ್‌.ವೀರಪ್ಪ ಆಕಾಂಕ್ಷಿಯಾಗಿದ್ದರೂ ಜೆಡಿಎಸ್‌- ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡರೆ ಎದುರಿಸುವುದು ಕಷ್ಟವಾಗಬಹುದು.

ಚಿಕ್ಕಬಳ್ಳಾಪುರದಲ್ಲಿ ಕಳೆದ ಬಾರಿ ಮಾಜಿ ಸಚಿವ ಬಿ.ಎನ್‌.ಬಚ್ಚೇಗೌಡ ಅವರು ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು. ಈ ಬಾರಿ ಅವರೂ ಆಕಾಂಕ್ಷಿ. ಆದರೆ, ಅವರಿಗೆ ವಯಸ್ಸಾಗಿದ್ದು, ಓಡಾಟ ಸಾಧ್ಯವಿಲ್ಲ. ಇಲ್ಲಿ ಕಾಂಗ್ರೆಸ್‌ ಗೆದ್ದಿದ್ದರೂ ಜೆಡಿಎಸ್‌ ಮೈತ್ರಿಯಡಿ ಕ್ಷೇತ್ರ ಪಡೆದುಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ, ಹೊಸ ಅಭ್ಯರ್ಥಿ ಬೇಕಾಗಬಹುದು. ಚಾಮರಾಜನಗರ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎ.ಆರ್‌.ಕೃಷ್ಣಮೂರ್ತಿ ಕಾಂಗ್ರೆಸ್‌ ಸೇರಿದ್ದು, ಇದೀಗ ಹೊಸ ಅಭ್ಯರ್ಥಿ ಹುಡುಕಬೇಕಾಗಿದೆ.

ಖರ್ಗೆಗೆ ಸವಾಲೊಡ್ಡದವರಿಲ್ಲ
ಕಲಬುರಗಿ ಕ್ಷೇತ್ರದಿಂದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಪರ್ಧೆ ಮಾಡಿದ್ದ ರೇವೂನಾಯಕ್‌ ಬೆಳಮಗಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಸೇರಿದ್ದಾರೆ. ಹೀಗಾಗಿ ಅಲ್ಲಿಯೂ ಸಮರ್ಥ ಅಭ್ಯರ್ಥಿ ತಕ್ಷಣಕ್ಕೆ ಇಲ್ಲ. ಆ ಕ್ಷೇತ್ರದ ಪ್ರಭಾವಿ ಮುಖಂಡರಾದ ಮಾಲೀಕಯ್ಯ ಗುತ್ತೇದಾರ್‌, ಬಾಬೂರಾವ್‌ ಚಿಂಚನಸೂರ್‌ ಬಿಜೆಪಿಗೆ ಸೇರಿರುವುದರಿಂದ ಅಲ್ಲಿ ಪಕ್ಷ ಬಲವರ್ಧನೆಯಾಗಿದೆ. ಆದರೆ, ಸೂಕ್ತ ಅಭ್ಯರ್ಥಿ ಇನ್ನೂ ಗುರುತಿಸಿಲ್ಲ. ಶಿವಮೊಗ್ಗದಲ್ಲಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಸ್ಪರ್ಧೆ ಮಾಡಿದರೆ ಬಿಜೆಪಿಗೆ ಕಷ್ಟವಾಗಬಹುದು ಎಂಬ ಅಂಶಗಳು ಸಮೀಕ್ಷೆ ಒಳಗೊಂಡಿವೆ ಎಂದು ಹೇಳಲಾಗಿದೆ.

– ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next