Advertisement

ಗಣ್ಯರು ಓದಿದ ಶಾಲೆಗಳಿಗಿಲ್ಲ ಮೂಲ ಸೌಲಭ

07:27 PM Dec 26, 2020 | Adarsha |

ದಾವಣಗೆರೆ: ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಒಟ್ಟು ಮೂರು ಶಾಲೆಗಳನ್ನು ದತ್ತು ಪಡೆದಿದ್ದಾರೆ. ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಕುಕ್ಕುವಾಡದ ಪಬ್ಲಿಕ್‌ ಶಾಲೆ, ಹೊಸ ಬೆಳವನೂರಿನ ಕುವೆಂಪು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ದಾವಣಗೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ದತ್ತು ತೆಗೆದುಕೊಂಡಿದ್ದಾರೆ.

Advertisement

ಕುಕ್ಕುವಾಡ ಪಬ್ಲಿಕ್‌ ಶಾಲೆ-8 ಲಕ್ಷ ರೂ.

ದಾವಣಗೆರೆ ತಾಲೂಕಿನ ಕುಕ್ಕುವಾಡದ ಪಬ್ಲಿಕ್‌ ಶಾಲೆ ಪ್ರೌಢಶಾಲೆ ಮತ್ತು ಪಿಯು ಕಾಲೇಜು ಒಳಗೊಂಡಿದೆ. 520ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಹೊಸ ಕೊಠಡಿಗಳ ನಿರ್ಮಾಣಕ್ಕಾಗಿ 8 ಲಕ್ಷ ಅನುದಾನದ ಪ್ರಸ್ತಾವನೆ ಸಲ್ಲಿಸಲಾಗಿದೆ. ಕುಕ್ಕುವಾಡದ ಪಬ್ಲಿಕ್‌ ಶಾಲೆಯಲ್ಲಿ ಕೊಠಡಿಗಳ ಸಮಸ್ಯೆಯೇ ಹೆಚ್ಚಾಗಿ ಕಾಣುತ್ತಿದೆ. ಪ್ರತಿ ವರ್ಷ ವಿದ್ಯಾರ್ಥಿಗಳ ಸಂಖ್ಯೆಗೆ ಹೆಚ್ಚಳಕ್ಕೆ ಅನುಗುಣವಾಗಿ ಕೊಠಡಿಗಳ ತುರ್ತು ಅಗತ್ಯತೆ ಇದೆ.

ಎಲ್‌ಕೆಜಿಯಿಂದ ಪಿಯು ತನಕ ವಿದ್ಯಾರ್ಥಿಗಳು ಒಂದೇ ಕಡೆ ಅಭ್ಯಾಸ ಮಾಡುವುದರಿಂದ ಕೊಠಡಿಗಳ ಜೊತೆ ಜೊತೆಯಾಗಿಯೇ ಶೌಚಾಲಯ, ಪ್ರಯೋಗಾಲಯ ಇತರೆ ಮೂಲಭೂತ ಸೌಲಭ್ಯಗಳು ಬೇಕಾಗಿವೆ. ಎಲ್ಲವೂ ದೊರೆತಲ್ಲಿ ಮಾದರಿ ಪಬ್ಲಿಕ್‌ ಶಾಲೆಯನ್ನಾಗಿಸುವ ಉತ್ತಮ ಬೋಧಕ-ಬೋಧಕೇತರ ಬಳಗ ಇದೆ. ಮುಖ್ಯವಾಗಿ ಕೊಠಡಿಗಳ ಸಮಸ್ಯೆ ನೀಗಬೇಕು ಎಂದು ಮುಖ್ಯ ಶಿಕ್ಷಕ ಕೆ.ಎಂ.ಸಿ. ಸುರೇಶ್‌ ಹೇಳುತ್ತಾರೆ.

ಹಳೆ ಮಾಧ್ಯಮಿಕ ಶಾಲೆ-15 ಲಕ್ಷ ರೂ

Advertisement

ದಾವಣಗೆರೆ ಹೃದಯಭಾಗದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಹಳೆ ಮಾಧ್ಯಮಿಕ ಶಾಲೆ) ಇತಿಹಾಸ ಪ್ರಸಿದ್ಧ ಶಾಲೆ. ರಾಷ್ಟ್ರ ನಾಯಕ ಎಸ್‌. ನಿಜಲಿಂಗಪ್ಪ,  ಶಾಸಕ ಶಾಮನೂರು  ಶಿವಶಂಕರಪ್ಪ, ವಿಧಾನ ಪರಿಷತ್‌ ಮಾಜಿ ಮುಖ್ಯ ಸಚೇತಕ ಡಾ| ಎ.ಎಚ್‌. ಶಿವಯೋಗಿಸ್ವಾಮಿ ಒಳಗೊಂಡಂತೆ ಅನೇಕ ಗಣ್ಯರು, ವರ್ತಕರು ಅಭ್ಯಾಸ ಮಾಡಿರುವ ಶಾಲೆ ಈಗ ತೀರಾ ದುಸ್ಥಿತಿಯಲ್ಲಿದ್ದು, ಕಳ್ಳ ಕಾಕರಿಗೆ ಸ್ವರ್ಗದಂತಿದೆ.

ಅಂತಹ ಶಾಲೆಗೆ ಹೊಸ ಕೊಠಡಿ, 10 ಡೆಸ್ಕ್, 5 ಗ್ರೀನ್‌ ಬೋರ್ಡ್‌, ಹೈಟೆಕ್‌ ಶೌಚಾಲಯ, ಕುಡಿಯುವ ನೀರಿನ ಫಿಲ್ಟರ್‌ಗಾಗಿ 15 ಲಕ್ಷ ಅನುದಾನ ಪ್ರಸ್ತಾವನೆ ಸಲ್ಲಿಸಲಾಗಿದೆ. ಇತಿಹಾಸ ಪ್ರಸಿದ್ಧ ನಾಯಕರು ಅಭ್ಯಾಸ ಮಾಡಿರುವಂತಹ ಶಾಲೆ ಇಂದು ತೀರಾ ದುರಾವಸ್ಥೆಯಲ್ಲಿದೆ. ದುರಸ್ತಿಗಾಗಿ ಅಧಿಕಾರಿಗಳು ಆಗಮಿಸಿದ್ದರು. ದುರಸ್ತಿ ಮಾಡಿಸುವ ಬದಲಿಗೆ ಇಡೀ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡುವ ಮೂಲಕ ಶಾಲೆಯ ಇತಿಹಾಸವನ್ನು ಜನರಿಗೆ ಮತ್ತೆ ತಲುಪಿಸುವಂತಾಗಬೇಕು. ಹೊಸ ಕಟ್ಟಡ ಆಗಲೇಬೇಕು ಎಂದು ಮುಖ್ಯ ಶಿಕ್ಷಕಿ ಸಿ. ದುಗ್ಗಮ್ಮ ಹೇಳುತ್ತಾರೆ.

ಕುವೆಂಪು ಸ ಹಿ ಪ್ರಾ ಶಾಲೆ-12 ಲಕ್ಷ ರೂ.

ದಾವಣಗೆರೆ ತಾಲೂಕಿನ ಹೊಸಬೆಳವನೂರು ಕುವೆಂಪು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಠಡಿಗಳ ನಿರ್ಮಾಣ ಮತ್ತು ಹೈಟೆಕ್‌ ಶೌಚಾಲಯಕ್ಕಾಗಿ 12 ಲಕ್ಷ ರೂ. ಅನುದಾನದ ಪ್ರಸ್ತಾವನೆ ಸಲ್ಲಿಸಲಾಗಿದೆ. ಕುವೆಂಪು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಕಷ್ಟು ಮಾದರಿ ಶಾಲೆಯಾಗಿದೆ.

ಶಾಲೆಯಲ್ಲಿ ಮುಖ್ಯವಾಗಿ ನಲಿ-ಕಲಿ ಬೋಧನೆಗಾಗಿ ಪ್ರತ್ಯೇಕ ಸುಸಜ್ಜಿತ ಕೊಠಡಿಯ ಅಗತ್ಯತೆ ಇದೆ. ಇರುಂತಹ ಒಂದು ಶೌಚಾಲಯವನ್ನು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಳಸಬೇಕಾಗುತ್ತದೆ. ಹಾಗಾಗಿ ಈಗ ಪ್ರಸ್ತಾವನೆ ಸಲ್ಲಿಸಲಾಗಿರುವ ಹೈಟೆಕ್‌ ಶೌಚಾಲಯದ ಜೊತೆಗೆ ಇನ್ನೂ ಒಂದು ಶೌಚಾಲಯದ ಅಗತ್ಯತೆ ತೀರಾ ಅನಿವಾರ್ಯವಾಗಿದೆ. ಕ್ರೀಡಾಂಗಣ ವಿಸ್ತರಣೆ ಜೊತೆಗೆ ಇಂದಿನ ಸ್ಪರ್ಧಾತ್ಮಕ ಯುಗದ ಮಕ್ಕಳ ಅಭ್ಯಾಸಕ್ಕೆ ಅನುಗುಣವಾಗಿ ಸ್ಮಾರ್ಟ್‌ಕ್ಲಾಸ್‌ ಅಗತ್ಯತೆ ಇದೆ ಎನ್ನುವುದು ಮುಖ್ಯ ಶಿಕ್ಷಕಿ ಸೌಭಾಗ್ಯಲಕ್ಷ್ಮೀ ಅವರ ಒತ್ತಾಸೆ.

ಶಾಲೆ ಅಭಿವೃದ್ಧಿಗೆ ಬದ್ಧ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮೂರು ಶಾಲೆಗಳ ದತ್ತು ಪಡೆಯಲಾಗಿದೆ. ಆ ಎಲ್ಲಾ ಶಾಲೆಗಳಲ್ಲಿ ಸಮಗ್ರ ಅಭಿವೃದ್ಧಿಗೆ ಸದಾ ಬದ್ಧ. ಕೋವಿಡ್ ಹಿನ್ನೆಲೆಯಲ್ಲಿ ದತ್ತು ಪಡೆದಂತಹ ಶಾಲೆಗಳ ಪರಿಶೀಲನೆಗೆ ಹೋಗಲು ಸಾಧ್ಯವಾಗಿಲ್ಲ. ಪರಿಸ್ಥಿತಿ ತಿಳಿಯಾದ ನಂತರ ಪರಿಶೀಲನೆ ನಡೆಸಿ ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು.

ಶಾಮನೂರು ಶಿವಶಂಕರಪ್ಪ, ಶಾಸಕರು, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ

ರಾ. ರವಿಬಾಬು

 

Advertisement

Udayavani is now on Telegram. Click here to join our channel and stay updated with the latest news.

Next