Advertisement

ರೈತ ಪರ ಯೋಜನೆಗಳಿಲ್ಲ.. ಸರ್ಕಾರ ನನ್ನ ಗೋಳು ಕೇಳುತ್ತಿಲ್ಲ: ಹರಿಹಾಯ್ದ ಕಾಂಗ್ರೆಸ್ ಶಾಸಕ ಕಾಗೆ

12:48 PM Oct 12, 2024 | Team Udayavani |

ಬೆಳಗಾವಿ: ರೈತರ ಪರ ಯಾವುದೇ ಯೋಜನೆಗಳು ಬರುತ್ತಿಲ್ಲ. ರೈತರು ಬದುಕು ದುಸ್ತರವಾಗಿದೆ ಎಂದು ತಮ್ಮದೇ ಸರ್ಕಾರದ ವಿರುದ್ಧ ಕಾಗವಾಡ ಕಾಂಗ್ರೆಸ್ ಶಾಸಕ ರಾಜು ಕಾಗೆ ಹರಿಹಾಯ್ದಿದ್ದಾರೆ.

Advertisement

ಬೆಳಗಾವಿ ಜಿಲ್ಲೆಯ ಕಾಗವಾಡ ಮತಕ್ಷೇತ್ರದ ತಾವಂಶಿ ಗ್ರಾಮದಲ್ಲಿ ಶನಿವಾರ (ಅ.12) ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಪರಿಸ್ಥಿತಿ ಹೀಗೆಯೇ ಮುಂದುವರಿದರೆ ವಿಧಾನಸೌಧದಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಓರ್ವ ಮಂತ್ರಿಗೆ ಹೇಳಿದೆ. ನೀನ್ಯಾಕೆ ಆತ್ಮಹತ್ಯೆ ಮಾಡಿಕೊಳ್ಳುತ್ತೀಯಾ, ನಿನ್ನ ಕೆಲಸ ಮಾಡುತ್ತೇವೆಂದು ಹೇಳಿ ಅನುದಾನ ಬಿಡುಗಡೆ ಮಾಡದ ಮಂತ್ರಿಗಳಿದ್ದಾರೆ‌ ಎಂದು ಅನುದಾನ ನೀಡದ ಸ್ವಪಕ್ಷೀಯ ಸಚಿವರ ವಿರುದ್ಧ ರಾಜು ಕಾಗೆ ಗರಂ ಆದರು.

ರೈತರು ಒಂದು ವರ್ಷ ಬೆಳೆಗಳನ್ನು ಬೆಳೆಯುವುದನ್ನು ಬಿಟ್ಟರೆ ನೀವೇನು ತಿನ್ನುತ್ತೀರೀ? ನಿಮ್ಮ ಬಳಿ ರೊಕ್ಕ, ಬಂಗಾರ ಬೆಳ್ಳಿ ಸಾಕಷ್ಟು ಇರಬಹುದು, ಆದರೆ ಅದನ್ನು ತಿನ್ನೋಕಾಗುತ್ತಾ? ಮೊದಲು ರೈತರನ್ನು ಬದುಕಿಸುವ ಕೆಲಸ ಮಾಡಿ. ರೈತರು ಬದುಕಿದರೆ ಮಾತ್ರ ಈ ದೇಶ ಪ್ರಗತಿ ಹೊಂದಲು ಸಾಧ್ಯವಿದೆ. ಕಳೆದ ಒಂದು ವರ್ಷದಿಂದ ನನ್ನ ಗೋಳನ್ನು ಸರ್ಕಾರ ಆಲಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Advertisement

ನಾವೇನು ವಿಧಾನಸೌಧಕ್ಕೆ ಹೋಗಿ ಖಾಲಿ ಕುಂತಿಲ್ಲ, ಚೈನಿ (ಮೋಜು, ಮಸ್ತಿ) ಮಾಡುತ್ತಿಲ್ಲ. ರೈತರ ಕಷ್ಟ ಸುಖಗಳನ್ನು ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡ್ತಿದ್ದೇನೆ. ಆದರೆ ಸರ್ಕಾರದವರು ನಮಗೆ ಸ್ಪಂದನೆ ಮಾಡುತ್ತಿಲ್ಲ ಎಂದು ಸಿದ್ದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಶಾಸಕ‌ ಕಾಗೆ ಬೇಕಾದರೆ ನಾನು ನಾಳೆ ಹೋಗಿ ರಾಜೀನಾಮೆ ಕೊಡುತ್ತೇನೆ, ಏತಕ್ಕಾಗಿ ನಾವು ಎಂಎಲ್‌ಎ ಗಳಾಗಿರಬೇಕು, ಯಾತಕ್ಕಾಗಿ ನಾವು ಅಧಿಕಾರದಲ್ಲಿಬೇಕು. ಆಡಳಿತ ಪಕ್ಷದ ಒಬ್ಬ ಶಾಸಕನಾಗಿ ಅಸಹಾಯಕತೆ ಬಗ್ಗೆ ಹೇಳುತ್ತಿದ್ದೀನಿ. ಎಷ್ಟರಮಟ್ಟಿಗೆ ಈ ವ್ಯವಸ್ಥೆಯಲ್ಲಿ ಬದುಕಿದ್ದೇವೆ ಎಂದು ಅರ್ಥ ಮಾಡಿಕೊಳ್ಳಿ. ಕಾಂಗ್ರೆಸ್ ಸರ್ಕಾರದ ನಡೆಯಿಂದಾಗಿ ನನ್ನ ಮನಸ್ಸಿಗೆ ಬಹಳ ನೋವಾಗಿದೆ ಎಂದರು.

ಹೀಗಾಗಿ ಮುಂದಿನ ಸಲ ನನಗೆ ಎಂಎಲ್ಎ ಆಗುವುದು ಬೇಕಾಗಿಲ್ಲ ಎಂದು ಕ್ಷೇತ್ರದ ಜನತೆ ಮುಂದೆ ಶಾಸಕ ರಾಜು ಕಾಗೆ ತಮ್ಮ ಅಸಹಾಯಕತೆ ತೊಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next