ಹೊಸದಿಲ್ಲಿ: ರಫೇಲ್ ಯುದ್ಧ ವಿಮಾನ ಖರೀದಿ ವಿಚಾರದಲ್ಲಿ ಬುಧವಾರ ಲೋಕಸಭಾ ಕಲಾಪದಲ್ಲಿ ತೀವ್ರ ಕೋಲಾಹಲ ನಡೆದಿದ್ದು, ಪ್ರಧಾನಿ ಬಳಿ ಇಡೀ ದೇಶವೇ ಉತ್ತರ ಬಯಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗುಡುಗಿದ್ದಾರೆ.
ಕಲಾಪದಲ್ಲಿ ಮಾತನಾಡಿದ ರಾಹುಲ್ ಗಾಂಧಿ ರಫೇಲ್ ವಿಚಾರದಲ್ಲಿ ಸಂದರ್ಶನವೊಂದರಲ್ಲಿ ಪ್ರಧಾನಿ ಹೇಳುತ್ತಾರೆ ನನ್ನನ್ನು ಯಾರು ಪ್ರಶ್ನೆ ಮಾಡಿಲ್ಲ, ನನ್ನ ಮೇಲೆ ಆರೋಪವಿಲ್ಲ ಎಂದು.ಆದರೆ ಇಡೀ ದೇಶವೇ ಪ್ರಧಾನಿ ಬಳಿ ಉತ್ತರ ಬಯಸುತ್ತಿದೆ ಎಂದರು.
ಮೊದಲನೆಯ ಸ್ತಂಭ ಖರೀದಿ ಪ್ರಕ್ರಿಯೆ, ಎರಡನೆಯದು ಬೆಲೆ ನಿಗದಿ, ಮೂರನೆಯದು ಆಸಕ್ತಿ ದಾಯಕವಾಗಿದ್ದು ಪ್ರೋತ್ಸಾಹ. ದೀರ್ಘಾವಧಿ ಸಮಾಲೋಚನೆ ನಡೆದ ಬಳಿಕ ಭಾರತೀಯ ವಾಯುಪಡೆಯ ಹಿರಿಯ ಅಧಿಕಾರಿಗಳು ರಫೇಲನ್ನು ಆಯ್ಕೆ ಮಾಡಿದರು. ವಾಯುಪಡೆಗೆ 126 ವಿಮಾನಗಳು ಬೇಕಿತ್ತು. ಬೇಡಿಕೆಯನ್ನು 36 ಕ್ಕೆ ಬದಲಾಯಿಸಿದ್ದು ಯಾಕೆ ಎಂದು ಪ್ರಶ್ನಿಸಿದರು.
ಕಳೆದ ಬಾರಿ ಪ್ರಧಾನಿಯವರು ನನ್ನ ಭಾಷಣದ ಬಳಿಕ ಉದ್ದನೆಯ ಭಾಷಣ ಮಾಡಿದ್ದರು.ಆದರೆ ರಫೇಲ್ ಕುರಿತು 5 ನಿಮಿಷವೂ ಮಾತನಾಡಿರಲಿಲ್ಲ. ಅವರಿಗೆ ಸಂಸತ್ತಿನಲ್ಲಿ ನಮ್ಮನ್ನು ಎದುರಿಸುವ ಧೈರ್ಯವೇ ಇಲ್ಲ. ರಕ್ಷಣಾ ಸಚಿವರು ಎಐಎಡಿಎಂ ಸಂಸದರ ಹಿಂದೆ ಅಡಗಿ ಕುಳಿತುಕೊಳ್ಳುತ್ತಾರೆ, ಪ್ರಧಾನಿ ರಕ್ಷಣಾ ಸಚಿವರ ಕೊಠಡಿಯಲ್ಲಿ ಅಡಗಿ ಕುಳಿತುಕೊಳ್ಳುತ್ತಾರೆ ಎಂದು ಗುಡುಗಿದರು.
ಸಂಸತ್ ಕಲಾಪದಲ್ಲಿ ಆಡಳಿತ ಪಕ್ಷ ಮತ್ತು ಕಾಂಗ್ರೆಸ್ ಸದಸ್ಯರ ನಡುವೇ ತೀವ್ರ ವಾಗ್ವಾದ ನಡೆದು ಕೋಲಾಹಲ ಉಂಟಾಯಿತು. ಸದನವನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಮಧ್ಯಾಹ್ನ 2.30ಕ್ಕೆ ಮುಂದೂಡಿದರು.