Advertisement

12 ಸಾವಿರ ಜನರಿಗೆ ಒಬ್ಬರೂ ಇಲ್ಲ ವೈದ್ಯರು

05:18 PM Dec 13, 2019 | Suhan S |

ಅಮೀನಗಡ: ಗ್ರಾಮೀಣ ಪ್ರದೇಶದಲ್ಲಿರುವ ಸುಮಾರು 5 ಉಪಕೇಂದ್ರಗಳ ಸಾರ್ವಜನಿಕರಿಗೆ ಉಪಯುಕ್ತವಾದ ಆರೋಗ್ಯ ಸೇವೆ ಒದಗಿಸುವ ಗುಡೂರ(ಎಸ್‌.ಸಿ) ಗ್ರಾಮದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಮರ್ಪಕವಾಗಿ ವೈದ್ಯರಿಲ್ಲದೆ ರೋಗಿಗಳು ಪರದಾಡುವಂತಾಗಿದೆ.

Advertisement

ಹೌದು, ಜಿಪಂ ಮತಕ್ಷೇತ್ರದ ಕೇಂದ್ರ ಸ್ಥಾನ ಹೊಂದಿರುವ ಸುತ್ತಲಿನ ವಿವಿಧ ಗ್ರಾಮಗಳ ವಾಣಿಜ್ಯ ಕೇಂದ್ರ ಗುಡೂರ (ಎಸ್‌.ಸಿ) ಗ್ರಾಮದಲ್ಲಿ ಸುಸಜ್ಜಿತ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಇದೆ. ಆದರೆ, ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೆ ರೋಗಿಗಳು ಪರದಾಡುವ ಪರಿಸ್ಥಿತಿ ಕಳೆದ 9 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ.

ಇಳಕಲ್ಲ ತಾಲೂಕಿನ ಗುಡೂರ (ಎಸ್‌.ಸಿ) ಗ್ರಾಮವು 2011ರ ಜನಗಣತಿ ಪ್ರಕಾರ 11969 ಸಾವಿರ ಜನಸಂಖ್ಯೆ ಹೊಂದಿದೆ. 3223ಕ್ಕೂ ಹೆಚ್ಚು ಮನೆಗಳಿವೆ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 5 ಉಪಕೇಂದ್ರಗಳ ಸುಮಾರು 8 ಹಳ್ಳಿಗಳನ್ನು ಸೇರ್ಪಡೆ ಮಾಡಲಾಗಿದೆ. ಆದರೆ, ಗುಡೂರ ಸೇರಿದಂತೆ 5 ಉಪಕೇಂದ್ರಗಳ ರೋಗಿಗಳ ಕಾಯಿಲೆ ಗುಣಪಡಿಸಲು ವೈದ್ಯರಿಲ್ಲ. ಇದರಿಂದ ನಾನಾ ಕಾಯಿಲೆಗಳು ಬಂದಿರುವ ರೋಗಿಗಳು ಪರದಾಡಬೇಕಾಗಿದ್ದು, ಚಿಕಿತ್ಸೆಗಾಗಿ ಪರ ಊರನ್ನು ಆಶ್ರಯಿಸಬೇಕಾಗಿದೆ. ಸುಮಾರು 9 ವರ್ಷಗಳಿಂದ ಖಾಯಂ ವೈದ್ಯರಿಲ್ಲ, ತಾತ್ಕಾಲಿಕವಾಗಿರುವ ವೈದ್ಯರು ಕೂಡಾ ಸರಿಯಾಗಿ ಬರುತ್ತಿಲ್ಲ ಹಾಗೂ ಸಿಬ್ಬಂದಿಗಳ ಕೊರತೆಯಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಸೌಲಭ್ಯಗಳ ಮರೀಚಿಕೆ: ಆಸ್ಪತ್ರೆಯಲ್ಲಿ ರೋಗಿಗಳಿಗೆ ಮೂಲಸೌಲಭ್ಯಗಳ ಕೊರತೆಯಿದೆ. ಹೆರಿಗೆ ಮಾಡಿಸಲು ಕೂಡಾ ಅಗತ್ಯ ವೈದ್ಯ, ಸಿಬ್ಬಂದಿ,ಔಷಧೋಪಚಾರಗಳಿಲ್ಲದೆ ಮಹಿಳೆಯರು ಸಮಸ್ಯೆ ಎದುರಿಸುವಂತಾಗಿದೆ. ಬಂದ ರೋಗಿಗಳಿಗೆ ಕುಡಿಯಲು ನೀರಿಲ್ಲ, ಸೌಲಭ್ಯಗಳು ಇಲ್ಲ, ಇದ್ದ ಸಿಬ್ಬಂದಿಗಳು ಕೂಡಾ ಸರಿಯಾಗಿ ಸ್ಪಂದಿಸುತ್ತಿಲ್ಲ. ರೋಗಿಗಳಿಗೆ ಕನಿಷ್ಠ ಸೌಲಭ್ಯಗಳು ಇಲ್ಲ. ಹೀಗಾಗಿ ಹುನಗುಂದ ಪಟ್ಟಣಕ್ಕೆ ಹೋಗಿ ವೈದ್ಯರು ಬರುತ್ತಾರೋ ಇಲ್ಲವೋ ಗೊತ್ತಿಲ್ಲ ಎಂದು ಹೇಳುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಎರಡು ದಿನದ ವೈದ್ಯರು: ಪಟ್ಟದಕಲ್ಲ ಮತ್ತು ಬೇವೂರ ಪ್ರಾಥಮೀಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯನ್ನು ವಾರದ ಎರಡು ದಿನ ಮಂಗಳವಾರ ಮತ್ತು ಶುಕ್ರವಾರ ಎರವಲು ಸೇವೆಗಾಗಿ ಗುಡೂರ ಗ್ರಾಮಕ್ಕೆ ನಿಯೋಜಿಸಿದ್ದಾರೆ. ಆದರೆ, ಆ ಎರಡು ದಿನಗಳಲ್ಲಿ ಕೂಡಾ ವೈದ್ಯರು ಬರುತ್ತಾರೆ ಎಂಬುದು ಜನರಿಗೆ ವಿಶ್ವಾಸವೇ ಇಲ್ಲ. ಉಳಿದ ದಿನಗಳಲ್ಲಿ ವೈದ್ಯರಿಲ್ಲದಿರುವುದರಿಂದ ರೋಗಿಗಳು ಹುನಗುಂದ, ಇಳಕಲ್ಲಗೆ ಚಿಕಿತ್ಸೆಗಾಗಿ ಅಲೆದಾಡುವಂತಾಗಿದೆ. ನೂರಾರು ರೂಪಾಯಿ ಖರ್ಚು ಮಾಡಿ ಖಾಸಗಿ ಆಸ್ಪತ್ರೆಗಳಿಗೆ ಹೋಗುವಂತಾಗಿದೆ.

Advertisement

ನಿರುಪಯುಕ್ತ ಕೇಂದ್ರ: ವೈದ್ಯರ ಕೊರತೆಯಿಂದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಗರ್ಭಿಣಿಯರಿಗೆ ಬರುವ ಸಹಾಯ ಧನಕ್ಕೆ ಹಾಗೂ ಇತರ ಪ್ರಮಾಣ ಪತ್ರಗಳಿಗೆ ಜನರು ಪರದಾಡುವವಂತಾಗಿದೆ. ಸುಸಜ್ಜಿತ ಕಟ್ಟಡ ಸೌಲಭ್ಯ ಇದ್ದರೂ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರವೂ ನಿರುಪಯುಕ್ತವಾಗಿದೆ ಎನ್ನಲಾಗಿದೆ.

ಗ್ರಾಮಸ್ಥರ ಒತ್ತಾಯ: ಗುಡೂರ(ಎಸ್‌.ಸಿ) ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ಒದಗಿಸುವ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಅಗತ್ಯ ವೈದ್ಯರು ಸೇರಿದಂತೆ ಸಿಬ್ಬಂದಿ ನೇಮಿಸಬೇಕು ಮತ್ತು ಆಸ್ಪತ್ರೆಯಲ್ಲಿ ಮೂಲಸೌಲಭ್ಯ ಒದಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

 

-ಎಚ್‌.ಎಚ್‌. ಬೇಪಾರಿ

Advertisement

Udayavani is now on Telegram. Click here to join our channel and stay updated with the latest news.

Next