ಥಾಣೆ: ಕೋವಿಡ್ ಮಹಾಮಾರಿಯು ನಗರದಲ್ಲಿ ಮಾತ್ರವಲ್ಲದೆ ಹಳ್ಳಿಗಳಲ್ಲೂ ಹರಡುತ್ತಿರುವುದು ನಮಗೆಲ್ಲ ತಿಳಿದ ವಿಚಾರ. ಕೋವಿಡ್ ಹರಡದ ಊರಿಲ್ಲ ಅನ್ನೋ ಕಾಲದಲ್ಲಿ, ಅದರಲ್ಲೂ ಅತೀ ಹೆಚ್ಚು ಕೋವಿಡ್ ಪ್ರಕರಣ ಪತ್ತೆಯಾಗುವ ಜಿಲ್ಲೆಯ 45 ಗ್ರಾಮಗಳಲ್ಲಿ ಯಾವುದೇ ಪ್ರಕರಣ ಪತ್ತೆಯಾಗಿಲ್ಲ ಎಂದರೆ ನಂಬಲು ಸಾಧ್ಯವೇ?
ಹೌದು. ಇದು ಥಾಣೆ ಜಿಲ್ಲೆಯ 4 ತಾಲೂಕುಗಳ 45 ಗ್ರಾಮ ಪಂಚಾಯತ್‌ಗಳ ವರದಿಯಾಗಿದೆ. ಈ 45 ಗ್ರಾ.ಪಂ.ಗಳಲ್ಲಿ ಮುರ್ಬಾಡ್ ತಾಲೂಕಿನಲ್ಲಿ 25 ಗ್ರಾ.ಪಂ.ಗಳು, ಶಹಾಪುರದ 16 ಗ್ರಾ.ಪಂ.ಗಳು, ಅಂಬರ್‌ನಾಥದ 3 ಮತ್ತು ಭಿವಂಡಿಯಲ್ಲಿ ಒಂದು ಗ್ರಾ.ಪಂ. ಸೇರಿವೆ. ಆದರೆ ಕಲ್ಯಾಣ್ ತಾಲೂಕಿನ ಎಲ್ಲ ಗ್ರಾ.ಪಂ.ಗಳಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.
ಥಾಣೆ ಜಿಲ್ಲೆಯ ಭಿವಂಡಿ, ಅಂಬರ್‌ನಾಥ್, ಕಲ್ಯಾಣ್, ಶಹಾಪುರ ಮತ್ತು ಮುರ್ಬಾಡ್ ತಾಲೂಕುಗಳಲ್ಲಿ ಒಟ್ಟು 430 ಗ್ರಾ.ಪಂ.ಗಳಿವೆ. ಜಿಲ್ಲೆಯಲ್ಲಿ ಮಾರ್ಚ್ ಕೊನೆಯಿಂದ ಕೊರೊನಾ ಪ್ರಕರಣಗಳು ಪತ್ತೆಯಾಗಲು ಪ್ರಾರಂಭವಾಯಿತು. ಆರಂಭದಲ್ಲಿ, ಜಿಲ್ಲೆಯ ಗ್ರಾಮೀಣ ಭಾಗಗಳು ಕೊರೊನಾದಿಂದ ಸುರಕ್ಷಿತವಾಗಿದ್ದರೂ ಅನಂತರ ಅಗತ್ಯ ಸೇವಾ ಸಿಬಂದಿಗಳ ಪ್ರಯಾಣ ಮತ್ತು ಲಾಕ್‌ಡೌನ್ ಸಡಿಲಿಕೆಯಿಂದ ಗ್ರಾಮೀಣ ಪ್ರದೇಶಗಳಲ್ಲಿಯು ಕೊರೊನಾ ಪ್ರಕರಣಗಳು ಪತ್ತೆಯಾಗಲಾರಂಭಿಸಿದವು. ಅಲ್ಲದೆ, ಮೊದಲಿನಿಂದಲೂ ಥಾಣೆ ಜಿಲ್ಲಾ ಪರಿಷತ್ ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಥ ಆರೋಗ್ಯ ವ್ಯವಸ್ಥೆ ಸ್ಥಾಪಿಸಲು ವಿಶೇಷ ಪ್ರಯತ್ನಗಳನ್ನು ಮಾಡುತ್ತಿದ್ದರೂ ಇಲ್ಲಿಯ ತನಕ ಜಿಲ್ಲೆಯ 430 ಗ್ರಾಂ ಪಂಚಾಯತ್‌ಗಳಲ್ಲಿ ಪೈಕಿ 385 ಗ್ರಾಂ. ಪಂ.ಗಳು ಕೊರೊನಾ ಸೋಂಕಿಗೆ ಗುರಿಯಾಗಿವೆ. ಇದರಲ್ಲಿ ಕಲ್ಯಾಣ್ ತಾಲೂಕಿನ ಎಲ್ಲ ಗ್ರಾಮಗಳು ಕೊರೊನಾ ಪತ್ತೆಯಾದ ಪಟ್ಟಿಯಲ್ಲಿ ಸೇರಿಕೊಂಡಿವೆ.
ಕೋವಿಡ್ ಜಾಗೃತಿ ಅಭಿಯಾನಕ್ಕೆ ಹೆಚ್ಚಿನ ಲಾಭವು ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕಂಡುಬಂತು. ಆದ್ದರಿಂದ ಕಳೆದ ಏಳು ತಿಂಗಳಲ್ಲಿ ಜಿಲ್ಲೆಯ 45 ಗ್ರಾಮ ಪಂಚಾಯತ್‌ಗಳಲ್ಲಿ ಕೊರೊನಾದ ಯಾವುದೇ ಪ್ರಕರಣಗಳು ಕಂಡು ಬಂದಿಲ್ಲ. ಈ ಗ್ರಾಮ ಪಂಚಾಯತ್ ಆಡಳಿತ ಮತ್ತು ಗ್ರಾಮಸ್ಥರು ಕಾಲಕಾಲಕ್ಕೆ ಮಾರ್ಗಸೂಚಿಗಳು ಕಟ್ಟುನಿಟ್ಟಾಗಿ ಪಾಲಿಸಿದ್ದಾರೆ. ಅದಕ್ಕಾಗಿಯೇ ಈ ಗ್ರಾಮ ಪಂಚಾಯತ್‌ಗಳಲ್ಲಿ ಕೊರೊನಾ ನುಸುಳಲು ಸಾಧ್ಯವಾಗಲಿಲ್ಲ ಎಂದು ಜಿಲ್ಲಾ ಪರಿಷತ್ ಮೂಲಗಳು ತಿಳಿಸಿವೆ.