ಧಾರವಾಡ: ರಾಜ್ಯದಲ್ಲಿ ಬೆಳೆಯುವ ಪ್ರಮುಖ 16 ಬೆಳೆಗಳು ಬೆಂಬಲ ಬೆಲೆಗಿಂತಲೂ ಕಡಿಮೆ ದರದಲ್ಲಿ ಮಾರಾಟ ಆಗುತ್ತಿದೆ ಎಂಬುದನ್ನು ರಾಜ್ಯದ ಸರಕಾರ ರಚಿಸಿರುವ ಕೃಷಿ ಬೆಲೆ ಆಯೋಗವೇ ತನ್ನ ವರದಿಯಲ್ಲಿ ಹೇಳಿದ್ದು, ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರೇ ಉತ್ತರ ಕೊಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ನಗರದ ಮಿನಿ ವಿಧಾನಸೌಧದ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸಾಲಮನ್ನಾಗೆ ಆಗ್ರಹಿಸಿ ಹಮ್ಮಿಕೊಂಡಿದ್ದ ಅರ್ಜಿ ಸಲ್ಲಿಸುವ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೃಷಿ ಬೆಲೆ ಆಯೋಗವು ತನ್ನ ವರದಿಯಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ವಿವರಣೆ ನೀಡಿದ್ದು, ರೈತರಿಗೆ ಸರಕಾರ ಯಾವ ರೀತಿಯ ಬೆಲೆ ಭದ್ರತೆ ನೀಡುತ್ತಿದೆ ಎನ್ನುವುದನ್ನು ಸ್ಪಷ್ಟಪಡಿಸಬೇಕು.
ಡಾ| ಸ್ವಾಮಿನಾಥನ್ ವರದಿಯನ್ನು ಯಥಾವತ್ ಜಾರಿ ಮಾಡುವ ಮೂಲಕ ಲೆ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು. ರೈತರ 8 ಸಾವಿರ ಕೋಟಿ ಸಾಲ ಮನ್ನಾ ಮಾಡಿರುವುದಾಗಿ ಹೇಳಲಾಗಿತ್ತು. ಆದರೆ, ಅದಕ್ಕಿರುವ ನಿಯಮಗಳನ್ನು ಕೈಬಿಟ್ಟು ಉಳಿದ 2.5 ಸಾವಿರ ಕೋಟಿ ಮೊತ್ತವನ್ನು ಅದಕ್ಕೆ ಸೇರಿಸಿ ಸಾಲ ಮನ್ನಾ ಮಾಡಿದಲ್ಲಿ ಸಂಕಷ್ಟದಲ್ಲಿರುವ ರಾಜ್ಯದ ರೈತರಿಗೆ ಅನುಕೂಲವಾಗಲಿದೆ.
ಕೃಷಿ ಬೆಲೆ ಆಯೋಗಕ್ಕೆ ಸ್ವಾಯತ್ತತೆ ನೀಡಬೇಕು. ಕೃಷಿ ಉತ್ಪನ್ನಗಳ ಬೆಲೆಯನ್ನು ವೇತನ ಆಯೋಗದ ಮಾನದಂಡಕ್ಕೆ ಸರಿದೂಗುವಂತೆ ಬೆಲೆ ಘೋಷಣೆ ಮಾಡಬೇಕು ಎಂದರು.ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎ. ಶಿವಪ್ಪ ಕೋಲಾರ ಮಾತನಾಡಿ, ರೈತ ಬೆಳೆದ ಬೆಳೆಗೆ ಬೆಲೆ ನಿಗದಿಗೆ ಆತನಿಗೇ ಅವಕಾಶ ಕಲ್ಪಿಸಬೇಕು. ರೈತರ ಸಾಲ ಮನ್ನಾ ಮಾಡಿದರೆ ಬ್ಯಾಂಕ್ ಗಳು ದಿವಾಳಿ ಆಗಲಿವೆ ಎಂಬುದಾಗಿ ಕೇಂದ್ರ ಸಚಿವರು ಹೇಳುತ್ತಾರೆ.
ಆದರೆ, ಕಂಪೆನಿಗಳ ಸಾಲ ಮನ್ನಾ ಮಾಡಿದರೆ ದಿವಾಳಿ ಆಗುವುದಿಲ್ಲವೇ? ಇದೇ ಪ್ರಶ್ನೆ ಇಟ್ಟುಕೊಂಡು ಸುಪ್ರೀಂ ಕೋರ್ಟ್‌ಗೆ ಹೋಗುವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ರಾಜ್ಯ ಉಪಾಧ್ಯಕ್ಷ ಬಸವರಾಜ ಮಳ್ಳಿ, ಸಂಘಟನೆಯ ಜಿಲ್ಲಾಧ್ಯಕ್ಷ ಫಾರೂಖ್ ಕಿಲ್ಲೇದಾರ ಸೇರಿದಂತೆ ಸಾವಿರಾರು ರೈತರು ಇದ್ದರು. ಇದೇ ಸಂದರ್ಭದಲ್ಲಿ ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಜಿಲ್ಲಾ ಧಿಕಾರಿ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಅರ್ಜಿ ಸಲ್ಲಿಸಲು ಸಾಲು: ರೈತರ ಸಾಲಮನ್ನಾ ಅಭಿಯಾನದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ರೈತರು ತಮ್ಮ ದಾಖಲೆಗಳನ್ನು ಅರ್ಜಿಗೆ ಹಚ್ಚಿ ಸಾಲಮನ್ನಾ ಮಾಡಲು ಸರಕಾರಕ್ಕೆ ಆಗ್ರಹಿಸಿದರು. ಅಲ್ಲದೇ ಈ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಅರ್ಜಿ ಸೀÌಕರಿಸಲು ಜಿಲ್ಲಾಡಳಿತದಿಂದ ಕೇಂದ್ರ ಸಹ ತೆರೆಯಲಾಗಿತ್ತು. ಅರ್ಜಿ ಸಲ್ಲಿಸುವ ವೇಳೆ ರೈತ ಸಂಘದಿಂದ ರೈತರಿಂದ ಪ್ರತಿ ಅರ್ಜಿಗೆ 50-60 ರೂ. ಪಡೆದುಕೊಂಡಿದ್ದು, ಇದು ರೈತ ಹೋರಾಟಕ್ಕಾಗಿ ಎಂದು ಹೇಳಿಕೊಂಡಿದೆ.