ಢಾಕಾ: ಸ್ಥಳೀಯ ಕ್ರಿಕೆಟ್‌ನಲ್ಲಿ ಹಲವು ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಆಟಗಾರನೊಬ್ಬನೇ ಸಾವಿರ ರನ್ ಗಳಿಸುವುದು, ಬೌಲರೊಬ್ಬ ಹತ್ತೂ ವಿಕೆಟ್ ಗಳಿಸುವುದು ಹೀಗೆ ಊಹಿಸಲಾಗದ ಹತ್ತಾರು ವಿಚಿತ್ರಗಳು ನಡೆಯುತ್ತಲೇ ಇರುತ್ತವೆ. ಆದರೆ ಬಾಂಗ್ಲಾದೇಶದ ಢಾಕಾ ಸೆಕೆಂಡ್ ಡಿವಿಷನ್ ಕ್ರಿಕೆಟ್ ಲೀಗ್‌ನಲ್ಲಿ ತೀರಾ ವಿಶೇಷ ಪ್ರಕರಣ ದಾಖಲಾಗಿದೆ. ಅಲ್ಲಿನ ಪಂದ್ಯವೊಂದರಲ್ಲಿ ಕೇವಲ 4 ಎಸೆತಗಳಲ್ಲಿ 92 ಅಧಿಕ ರನ್ ದಾಖಲಾಗಿದೆ. ಅದೂ
ಹೇಗೆ ಅಂತೀರಾ? ಮುಂದೆ ಓದಿ.
ಆಗಿದ್ದೇನು?: ಆಕ್ಸಿಯಮ್ ಕ್ಲಬ್ ಮತ್ತು ಲಾಲ್ಮತಿಯಾ ಕ್ಲಬ್ ನಡುವೆ ಪಂದ್ಯ ನಡೆಯಿತು. ಟಾಸ್ ಸೋತ ಲಾಲ್ಮತಿಯಾ ಬ್ಯಾಟಿಂಗ್‌ಗಿಳಿಸಲ್ಪಟ್ಟಿತು. ಆದರೆ ಲಾಲ್ಮತಿಯಾ ತಂಡಕ್ಕೆ ಅಂಪೈರ್ ಬಗ್ಗೆ ಅನುಮಾನ. ಟಾಸ್ ಹಾರಿಸುವುದಕ್ಕೆ ಮುನ್ನ ಕಾಯಿನ್ ಹೇಗಿದೆ ಎನ್ನುವುದನ್ನು ನೋಡಲು ಬಿಡಲೇ ಇಲ್ಲ ಎಂಬ ಗುಮಾನಿಯಲ್ಲೇ ಅವರು ಕ್ರೀಸ್‌ಗಿಳಿದರು.
ಬ್ಯಾಟಿಂಗ್ ವೇಳೆಯೂ ಅಂಪೈರ್ ತಮ್ಮ ವಿರುದ್ಧ ಹಲವು ತೀರ್ಪು ನೀಡಿದರು ಎಂಬ ಸಿಟ್ಟೂ ಸೇರಿಕೊಂಡಿತು. ಒಟ್ಟಾರೆ ಲಾಲ್ಮತಿಯಾ 14 ಓವರ್‌ನಲ್ಲಿ 88 ರನ್‌ಗೆ ಆಲೌಟಾಯಿತು. ಇದೆಲ್ಲದರ ವಿರುದ್ಧ ಬೌಲಿಂಗ್ ವೇಳೆ ಲಾಲ್ಮತಿಯಾ ನಾಯಕ ಸೇಡು ತೀರಿಸಿಕೊಂಡರು. ಅವರ ಸೂಚನೆಯಂತೆ ಬೌಲರ್ ಸುಜಾನ್ ಮೆಹೂ¾ದ್ ಸರಿಯಾಗಿ ಎಸೆದಿದ್ದು ಬರೀ ನಾಲ್ಕು ಎಸೆತ. ಅದರಲ್ಲಿ ಮೂರನ್ನು ಆಕ್ಸಿಯಮ್ ಬ್ಯಾಟ್ಸ್ ಮನ್ ರೆಹಮಾನ್ ಬೌಂಡರಿ ಬಾರಿಸಿದರು. ಇನ್ನುಳಿದಂತೆ 15 ನೋಬಾಲನ್ನು ಎಸೆದರು. 13 ಅಗಲ ವೈಡ್‌ಗಳನ್ನು ಎಸೆದರು! ಅದನ್ನು ಕ್ಷೇತ್ರರಕ್ಷಕರು ಸ್ವಲ್ಪವೂ ತಡೆಯಲೆತ್ನಿಸದೇ ಬೌಂಡರಿಗೆ ಹೋಗಲು ಬಿಟ್ಟರು! ಒಟ್ಟಾರೆ ಹೀಗೆಯೇ ಆಕ್ಸಿಯಮ್‌ಗೆ 65 ರನ್ ಬಂತು! ಇದನ್ನೆಲ್ಲ ಅಂಪೈರ್ ಮೂಕವಿಸ್ಮಿತರಾಗಿ ನೋಡುತ್ತಿದ್ದರಂತೆ.