Advertisement

ತುರಹಳ್ಳಿಯಲ್ಲಿ 350ಕ್ಕೂ ಅಧಿಕ ವನ್ಯ ಪ್ರಭೇದ ಪತ್ತೆ

12:23 PM Jan 04, 2017 | |

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರು ನಗರದಲ್ಲಿ ವಿನಾಶದ ಅಂಚಿನಲ್ಲಿರುವ ವನ್ಯಜೀವಿ ಪ್ರಭೇದ ಸೇರಿದಂತೆ 350ಕ್ಕೂ ಹೆಚ್ಚು ಪ್ರಭೇದದ ವನ್ಯಜೀವಿ ಸಂಪತ್ತು ಇಂದಿಗೂ ಅಸ್ತಿತ್ವದಲ್ಲಿರುವುದು ಅಧ್ಯಯನದಿಂದ ಬೆಳಕಿಗೆ ಬಂದಿದೆ.

Advertisement

ಹೌದು, ಬೆಂಗಳೂರು ಕಾಂಕ್ರೀಟ್‌ ಕಾಡಾಗಿ ಬದಲಾಗಿ ದಶಕಗಳು ಕಳೆದರೂ ಬಿಬಿಎಂಪಿ ವ್ಯಾಪ್ತಿವರೆಗೂ ಹರಡಿರುವ ತುರಹಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ವನ್ಯಜೀವಿ ಸಂಪತ್ತು ಇನ್ನೂ ಉಳಿದಿದೆ. ಈ ಬಗ್ಗೆ ಮೂರು ವರ್ಷದಿಂದ ಅಧ್ಯಯನ ನಡೆಸಿರುವ ಬಿಬಿಎಂಪಿ ವನ್ಯ ಜೀವಿ ಸಂರಕ್ಷಕ ಪ್ರಸನ್ನಕುಮಾರ್‌ ಮತ್ತು ಅವರ ತಂಡ 350 ವನ್ಯ ಪ್ರಭೇದ ಇರುವುದನ್ನು ದಾಖಲಿಸಿದ್ದಾರೆ.

ಅಲ್ಲದೆ, ತುರಹಳ್ಳಿ ವ್ಯಾಪ್ತಿಯಲ್ಲಿ ಪ್ರಸ್ತುತ ನಡೆಯುತ್ತಿರುವ ಅಭಿವೃದ್ಧಿ ಚಟುವಟಿಕೆಯಿಂದಾಗಿ ಆಶ್ರಯ ಪಡೆದಿರುವ ಅಷ್ಟೂ ವನ್ಯಜೀವಿ ಸಂಪತ್ತು ಅಳಿವಿನತ್ತ ಸಾಗಿದ್ದು, ಕೂಡಲೇ ತುರಹಳ್ಳಿ ಅರಣ್ಯವನ್ನು ವನ್ಯಜೀವಿ ಸಂರಕ್ಷಿತ ಪ್ರದೇಶವಾಗಿ ಘೋಷಿಸುವಂತೆ ಆಗ್ರಹಿಸಿದ್ದಾರೆ. ಉದ್ಯಾನನಗರಿ ನಾಗರಿಕರಿಗೆ ನಗರದಲ್ಲಿನ ವನ್ಯಜೀವಿ ಸಂಪತ್ತಿನ ಬಗ್ಗೆ ಅರಿವೇ ಇಲ್ಲ. ಹೀಗಾಗಿ ಅರಣ್ಯ ಇಲಾಖೆಯು ವನ್ಯ ಜೀವಿ ಸಂಪತ್ತು ಉಳಿಸಲು ಪ್ರಯತ್ನ ಮಾಡುತ್ತಿಲ್ಲ. 

ಇಲ್ಲಿನ ವನ್ಯಜೀವಿ ಸಂಪತ್ತಿನ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮೂರು ಜನರ ತಂಡವಾಗಿ ಕಳೆದ ಮೂರು ವರ್ಷದಿಂದ ವನ್ಯಜೀವಿಗಳನ್ನು ಫೋಟೋ ಸಹಿತ ಗುರುತಿಸಿ ದಾಖಲೀಕರಣ ಮಾಡುತ್ತಿದ್ದೇವೆ. ಒಂದು ತಿಂಗಳಲ್ಲಿ ಅರಣ್ಯ ಇಲಾಖೆ ಮುಖ್ಯಅರಣ್ಯ ಸಂರಕ್ಷಣಾಧಿಕಾರಿಗೆ ವರದಿ ನೀಡಿ ವನ್ಯಜೀವಿ ಸಂರಕ್ಷಿತ ಪ್ರದೇಶವಾಗಿ ಘೋಷಿಸುವಂತೆ ಮನವಿ ಮಾಡಲಾಗುವುದು ಎಂದು ಪ್ರಸನ್ನಕುಮಾರ್‌ ಮಾಹಿತಿ ನೀಡಿದ್ದಾರೆ.

ನವಿಲು ಧಾಮವಾಗಿ ಘೋಷಿಸಿ: ಮೂರು ವರ್ಷದಿಂದ ನಡೆಸುತ್ತಿರುವ ಅಧ್ಯಯನದಲ್ಲಿ ಆನೆ, ಚಿರತೆ, ನರಿ, ನವಿಲಿನಂತಹ ವನ್ಯಜೀವಿ ಸೇರಿದಂತೆ 350 ಪ್ರಭೇದಗಳನ್ನು ಗುರುತಿಸಿದ್ದೇವೆ. ಎರಡು ವರ್ಷಗಳ ಹಿಂದೆಯೇ ಅರಣ್ಯ ಇಲಾಖೆ ಸ್ಥಳೀಯ ಅಧಿಕಾರಿಗಳಿಗೆ ಪ್ರಾಥಮಿಕ ವರದಿ ಸಲ್ಲಿಸಿದ್ದು, ಪ್ರಸ್ತುತ ನಡೆಸಿರುವ ಅಧ್ಯಯನದ ಪ್ರಕಾರ ನವಿಲುಗಳು ಹೇರಳವಾಗಿರುವ ಕಾರಣ ನವಿಲು ಧಾಮವಾಗಿ ಘೋಷಿಸುವಂತೆ ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ವನ್ಯ ಜೀವಿ ಕಾಯ್ದೆಯಡಿ ನವಿಲು ಸೇರಿದಂತೆ ಯಾವುದೇ ಪ್ರಾಣಿ, ಪಕ್ಷಿ ಸಂರಕ್ಷಿತ ಪ್ರದೇಶವಾಗಿ ಘೋಷಿಸಿದರೆ ಇಡೀ ಅರಣ್ಯವೇ ಸಂರಕ್ಷಿತ ಅರಣ್ಯವಾಗಿ ಬದಲಾಗಿ, ಅರಣ್ಯ ಹಾಗೂ ವನ್ಯಜೀವಿ ಸಂಪತ್ತು ಉಳಿಯುತ್ತದೆ ಎಂದು ಹೇಳುತ್ತಾರೆ.

Advertisement

ಅರಣ್ಯ ಇಲಾಖೆಯ ದಿವ್ಯ ನಿರ್ಲಕ್ಷ್ಯ: ಬೆಂಗಳೂರು ಕೇಂದ್ರ ಭಾಗದಿಂದ 20 ಕಿ.ಮೀ. ದೂರದಲ್ಲಿರುವ ಬಿಬಿಎಂಪಿಗೆ ಸೇರಿದ ಅರಣ್ಯ ಪ್ರದೇಶದಲ್ಲಿ ಇಷ್ಟೊಂದು ವನ್ಯಜೀವಿ ಸಂಪತ್ತು ಇದ್ದರೂ ಇದನ್ನು ಸಂರಕ್ಷಿಸಲು ಅರಣ್ಯ ಇಲಾಖೆ ದಿವ್ಯ ನಿರ್ಲಕ್ಷ್ಯ ತಾಳಿದೆ. ಕಗ್ಗಲೀಪುರದಿಂದ ಹಿಡಿದು ಬಿಡದಿವರೆಗೂ, ಬಿಡದಿಯಿಂದ ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ವಿಶ್ವವಿದ್ಯಾಲಯದಿಂದ ಬನಶಂಕರಿ 6ನೇ ಹಂತದವರೆ ವ್ಯಾಪಿಸಿರುವ ಅರಣ್ಯವನ್ನು ಮೀಸಲು ಅರಣ್ಯವಾಗಿ ಘೋಷಿಸಿದೆ.

ಹೀಗಾಗಿ ಸಂಚಾರಕ್ಕೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಹೀಗಾಗಿ ಅಕ್ರಮವಾಗಿ ಕಾಡು ನಾಶ ಮಾಡಿ ಅಭಿವೃದ್ಧಿ ಚಟುವಟಿಕೆ ಮುಂದು ವರಿದಿದೆ. ಬನಶಂಕರಿ 6ನೇ ಹಂತದಲ್ಲಿ ಬಿಡಿಎ ವತಿಯಿಂದಲೇ ಬಡಾವಣೆ ಅಭಿವೃದ್ಧಿ ಪಡಿಸಲಾಗಿದೆ. ಇನ್ನು ತುರಹಳ್ಳಿ ವ್ಯಾಪ್ತಿಯಲ್ಲಿ ಹಲವು ಪ್ರಮುಖ ಬಿಲ್ಡರ್‌ಗಳು “ಫಾರೆಸ್ಟ್‌ ವ್ಯೂ ಅಪಾರ್ಟ್‌ಮೆಂಟ್‌’ ನಿರ್ಮಾಣ ಮಾಡಿ ಅರಣ್ಯವೇ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂದು ಪರಿಸರ ತಜ್ಞರು ಬೇಸರ ವ್ಯಕ್ತಪಡಿಸಿದ್ದಾರೆ.

ನಗರಕ್ಕೆ ಹೊಂದಿಕೊಂಡು ಇರುವ ಅರಣ್ಯಗಳು
ಬೆಂಗಳೂರಿಗೆ ಹೊಂದಿಕೊಂಡಂತೆ 24 ಅರಣ್ಯ ಪ್ರದೇಶಗಳಿವೆ. ಬನ್ನೇರುಘಟ್ಟ, ತುರಹಳ್ಳಿ, ಬಿ.ಎಂ. ಕಾವಲ್‌, ಗುಂಜೂರು ಅರಣ್ಯ, ತಾವರೆಕೆರೆ, ದಾಸನಾಯಕನಹಳ್ಳಿ ಪ್ರಮುಖ ಅರಣ್ಯ ಪ್ರದೇಶಗಳಾಗಿವೆ. ಇವುಗಳಲ್ಲಿ ಅತಿ ಹೆಚ್ಚು ವನ್ಯ ಜೀವಿ ಸಂಪತ್ತು ಹೊಂದಿರುವ ಅರಣ್ಯ ತುರಹಳ್ಳಿ ಎಂದು ಅಧ್ಯಯನಕಾರರು ಹೇಳಿದ್ದಾರೆ.

ಬೆಂಗಳೂರು ಸುತ್ತ ಇನ್ನು ಆನೆ ಕಾಣಲ್ಲ!
ಬಿ.ಎಂ. ಕಾವಲು ಅರಣ್ಯ ಪ್ರದೇಶದಲ್ಲಿನ ಆನೆ ಕಾರಿಡಾರ್‌ನಲ್ಲಿ ಈವರೆಗೂ ಕಾಣುತ್ತಿದ್ದ ಆನೆಗಳು ಸರ್ಕಾರದ ನಿರ್ಧಾರದಿಂದ ಇನ್ನು ಕಣ್ಮರೆಯಾಗಲಿವೆ. ಈಗಾಗಲೇ ಸಿದ್ದ ಎಂಬ ಆನೆ ಅಸುನೀಗಿದ್ದು, ರೌಡಿ ರಂಗ ಸೇರಿದಂತೆ ಇದ್ದ ಮೂರು ಆನೆಗಳನ್ನು ಅರಣ್ಯ ಇಲಾಖೆ ಸೆರೆ ಹಿಡಿದಿದೆ. ಜತೆಗೆ ಬನ್ನೇರುಘಟ್ಟದಿಂದ ಸಾವನದುರ್ಗ, ಮಾಗಡಿ ಮಾರ್ಗವಾಗಿ ಚಿತ್ರದುರ್ಗಕ್ಕೆ ಹೋಗುತ್ತಿದ್ದ ಮತ್ತು ಆನೆಗಳ ಸಂಚಾರಕ್ಕೆ ಅನುಕೂಲವಾಗಿದ್ದ ಆನೇಕಲ್‌ ರಸ್ತೆ ಬಳಿ ಎಲಿಫೆಂಟ್‌ ಕಾರಿಡಾರ್‌ ಮುಚ್ಚಿ ಆರ್ಟ್‌ ಆಫ್ ಲಿವಿಂಗ್‌ವರೆಗೆ ಮೆಟ್ರೋ ರೈಲು ಮಾಡಲಾಗುತ್ತಿದೆ. ಹೀಗಾಗಿ ಇನ್ನು ಮುಂದೆ ಆನೆ ಕಾಣ ಸಿಗುವುದಿಲ್ಲ ಎಂದು ವನ್ಯಜೀವಿ ತಜ್ಞರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ತರುಹಳ್ಳಿ ವನ್ಯಜೀವಿಗಳು
ಸರಿಸೃಪ ಪ್ರಭೇದ
ಈಲಿಯಟ್ಸ್‌ ಗುರಾಣಿ ಹಾವು, ಕೆಂಪು ಮರಳು ಹಾವು (ರೆಡ್‌ ಸ್ಯಾಂಡ್‌ ಬೊವಾ), ಮರಳು ಹಾವು, ಕಾಮನ್‌ ಟ್ರಿಂಕೆಟ್‌, ಇಂಡಿಯನ್‌ ರ್ಯಾಟ್‌ ಸ್ನೇಕ್‌, ಬ್ಯಾಂಡೆಸ್‌ ರೇಸರ್‌, ಬ್ಯಾಂಡೆಡ್‌ ಕುಕ್ರಿ, ರಸ್ಸೆಲ್ಸ್‌ ಕುಕ್ರಿ, ಬ್ರೋಂಜ್‌ ಬ್ಯಾಕ್‌ ಟ್ರೀ ಸ್ನೇಕ್‌, ಕಾಮನ್‌ ವೋಲ್ಫ್ ಸ್ನೇಕ್‌, ಬ್ಯಾರ್ರಿಡ್‌ ವೋಲ್ಫ್ ಸ್ನೇಕ್‌, ಬ್ಲ್ಯಾಕ್‌ ಹೆಡೆಡ್‌ ಸ್ನೇಕ್‌, ಚೆಕರ್‌x ಕೀಲ್‌ ಬ್ಯಾಕ್‌, ಬಫ್ ಕೀಲ್‌ ಬ್ಯಾಕ್‌, ಗ್ರೀನ್‌ ಕೀಲ್‌ ಬ್ಯಾಕ್‌, ಆಲಿವ್‌ ಕೀಲ್‌ ಬ್ಯಾಕ್‌, ಕಾಮನ್‌ ವೈನ್‌ ಸ್ನೇಕ್‌, ಕಾಮನ್‌ ಕ್ರೈಟ್‌, ನಾಜ ನಾಜ ಸ್ನೇಕ್‌, ರಸ್ಸೆಲ್ಸ್‌ ವೈಪರ್‌, ಸಾ ಸ್ಕೇಲ್ಡ್‌ ವೈಪರ್‌, ಕಾಮನ್‌ ರ್ಯಾಟ್‌ ಸ್ನೇಕ್‌, ಇಂಡಿಯನ್‌ ಟೆರಾಫಿಲ್‌ ಟರ್ಟಲ್‌ ಸೇರಿದಂತೆ 150ಕ್ಕೂ ಹೆಚ್ಚು ಸರಿಸೃಪ ಪ್ರಭೇಧ ಪತ್ತೆಯಾಗಿದೆ.

ಪಕ್ಷಿ ಪ್ರಭೇದ
ಕರ್ನಾಟಕದ ರಾಜ್ಯ ಪಕ್ಷಿ ಇಂಡಿಯನ್‌ ರೋಲರ್‌, ರಾಷ್ಟ್ರೀಯ ಪಕ್ಷಿ ನವಿಲು ಸೇರಿದಂತೆ ಬ್ಲ್ಯಾಕ್‌ ಕೈಟ್‌, ಬ್ರಾಹ್ಮಿಣಿ ಕೈಟ್‌, ಶಿಕ್ರಾ, ಮರಕುಟುಕ, ಕುಟ್ರಹಕ್ಕಿ, ಹೆಬ್ಟಾತು, ಬಾತುಕೋಳಿ, ಕೋಗಿಲೆ, ಗಿಣಿ, ಕೆಂಬೂತ, ಗೊರವ, ಗಿಡುಗ, ರಣಹದ್ದು, ಶಾರ್ಟ್‌ ಟೊಯ್ಡ ಸ್ನೇಕ್‌ ಈಗಲ್‌, ಇಂಡಿಯನ್‌ ರಾಬಿನ್‌, ಬುಲ್‌ಬುಲ್‌, ಕಾಡು ಕಾಗೆ ಸೇರಿ 98ಕ್ಕೂ ಪಕ್ಷಿ ಪ್ರಭೇದವನ್ನು ತಂಡ ಗುರುತಿಸಿದೆ.

ಪ್ರಾಣಿ ಪ್ರಭೇದ
ಆನೆ, ಚಿರತೆ, ನರಿ, ಕಾಡು ಬೆಕ್ಕು, ಮುಳ್ಳು ಹಂದಿ ಸೇರಿದಂತೆ 60ಕ್ಕೂ ಹೆಚ್ಚು ವನ್ಯ ಜೀವಿ ಪ್ರಾಣಿಗಳು ಪತ್ತೆಯಾಗಿವೆ.

ನಮ್ಮ ವರದಿ ಆಧರಿಸಿ ಐಐಎಸ್ಸಿ ವಿದ್ಯಾರ್ಥಿಗಳಿಂದ ಪೂರಕ ಸಮೀಕ್ಷೆ ನಡೆಸಿ ತುರಹಳ್ಳಿ ಅರಣ್ಯವನ್ನು ವೈಲ್ಡ್‌ ಲೈಫ್ ಪ್ರೊಟೆಕ್ಷನ್‌ ಆ್ಯಕ್ಟ್ 1972 ಅಡಿ ವನ್ಯಜೀವಿ ಧಾಮ ಎಂದು ಘೋಷಿಸಲು ಮನವಿ ಮಾಡುತ್ತೇವೆ. ಹೇರಳ ಸಂಖ್ಯೆಯಲ್ಲಿ ನವಿಲುಗಳಿರುವುದರಿಂದ ನವಿಲು ವನ್ಯಧಾಮ ಮಾಡಲು ಮನವಿ ಮಾಡುತ್ತೇವೆ. ನೇಚರ್‌ ಟೂರಿಸಂ ಸಹ ಮಾಡಬಹುದು.
-ಪ್ರಸನ್ನ ಕುಮಾರ್‌, ಕೇಂದ್ರದ ಡಬ್ಲೂಸಿಸಿ ಕಾರ್ಯಕರ್ತ, ಬಿಬಿಎಂಪಿ ವನ್ಯಜೀವಿ ತಜ್ಞ

* ಶ್ರೀಕಾಂತ್‌ ಎನ್‌.ಗೌಡಸಂದ್ರ

Advertisement

Udayavani is now on Telegram. Click here to join our channel and stay updated with the latest news.

Next