Advertisement

ಕೋವಿಡ್ ನಡುವೆ ಎದೆಗುಂದದಿರುವುದೇ ಜೀವನ

01:50 AM Aug 19, 2020 | mahesh |

ಉಡುಪಿ/ ಮಂಗಳೂರು: ಕೋವಿಡ್‌-19 ಸೋಂಕು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಆತ್ಮಹತ್ಯೆ ಪ್ರಕರಣಗಳೂ ಹೆಚ್ಚುತ್ತಿವೆ. ಸಮಸ್ಯೆ ಪರಿಹಾರಕ್ಕೆ ಆತ್ಮಹತ್ಯೆ ಮಾರ್ಗವಲ್ಲ; ಅದು ಮತ್ತಷ್ಟು ಸಮಸ್ಯೆಗಳಿಗೆ ಮೂಲವಾಗುತ್ತಿದೆ. ಐದು ತಿಂಗಳಲ್ಲಿ ಕರಾವಳಿಯಲ್ಲಿ 340ಕ್ಕೂ ಅಧಿಕ ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಲಾಕ್‌ಡೌನ್‌ ಅವಧಿಯಲ್ಲಿ ವಿವಿಧ ಕಾರಣ ಗಳಿಂದಾಗಿ ಜನರು ಕೆಲವೊಂದು ಸಮಸ್ಯೆಗಳ ಸುಳಿಯಲ್ಲಿರುವುದು ಕೂಡ ಆತ್ಮಹತ್ಯೆಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

Advertisement

ಹಲವು ಕಾರಣ
ಲಾಕ್‌ಡೌನ್‌ಗಿಂತ ಮೊದಲು ಆತ್ಮಹತ್ಯೆ ಪ್ರಕರಣ ಕಡಿಮೆಯಿತ್ತು. ಸಡಿಲಿಕೆ ಅನಂತರ ಅಧಿಕವಾಗುತ್ತಿದೆ. ಖನ್ನತೆ, ಆರ್ಥಿಕ ಮುಗ್ಗಟ್ಟು, ಉದ್ಯೋಗ ನಷ್ಟ, ಮದ್ಯ ವ್ಯಸನ, ಕೋವಿಡ್‌ ಸೋಂಕಿನ ಭಯ, ಕೌಟುಂಬಿಕ ಕಲಹ, ದೀರ್ಘ‌ಕಾಲದ ಅನಾರೋಗ್ಯ, ವಿಪರೀತ ಒತ್ತಡ,
ದುಃಖದ ಮನೋಭಾವ, ಮಾದಕ ದ್ರವ್ಯ ವ್ಯಸನ ಇತ್ಯಾದಿ ಆತ್ಮಹತ್ಯೆಗೆ ಮೂಲ ಕಾರಣ ಎನ್ನಲಾಗುತ್ತಿದೆ. 15ರಿಂದ 29 ಹಾಗೂ 35ರಿಂದ 50 ವರ್ಷದವರು ಅತಿಯಾಗಿ ಈ ಸಮಸ್ಯೆ ಎದುರಿಸುತ್ತಿದ್ದಾರೆ.

ಪರಿಹಾರಕ್ಕಿದೆ ಹಲವು ಮಾರ್ಗ
ಇಂತಹ ಕಾಯಿಲೆಗಳು ಕಂಡು ಬಂದ ತತ್‌ಕ್ಷಣ ಮನೋವೈದ್ಯರ ಚಿಕಿತ್ಸೆ ಪಡೆಯುವುದು ಅತೀ ಅಗತ್ಯ. ಗೆಳೆಯರ ಧನಾತ್ಮಕ ಮಾತುಗಳೂ ಜೀವ ಉಳಿಸಲು ಸಹಕಾರಿ. ಹೊಸ ಆಲೋಚನೆಗಳು, ಯೋಗ, ಧ್ಯಾನ, ಪೈಂಟಿಂಗ್‌, ಅಡುಗೆ, ಕ್ರಾಫ್ಟ್, ಪುಸ್ತಕಗಳ ಓದು,
ಆನ್‌ಲೈನ್‌ ತರಗತಿಗಳಲ್ಲಿ ಭಾಗಿಗಳಾಗುವುದರಿಂದ ನಮ್ಮಲ್ಲಿರುವ ತಪ್ಪು ಕಲ್ಪನೆಗಳನ್ನು ದೂರ ಮಾಡ ಬಹುದಾಗಿದೆ.

ಮೊಬೈಲ್‌ ವ್ಯಸನ ಬೇಡ
ಲಾಕ್‌ಡೌನ್‌ ಅವಧಿಯಲ್ಲಿ ಅತಿ ಯಾದ ಮೊಬೈಲ್‌ ಬಳಕೆ, ಟಿವಿ ವೀಕ್ಷಣೆಯನ್ನು ಆದಷ್ಟು ದೂರ ಮಾಡಿ ದರೆ ಒಳಿತು. ಇದಕ್ಕಾಗಿ ವೇಳಾಪಟ್ಟಿ ಸಿದ್ಧಪಡಿಸಿಕೊಂಡರೆ ಉತ್ತಮ. ಮೊಬೈಲ್‌ ಇಲ್ಲದೆ ದಿನಕಳೆಯುವ ಹವ್ಯಾಸವೂ ಉತ್ತಮ ಎನ್ನುತ್ತಾರೆ ಮಾನಸಿಕ ತಜ್ಞರು.

ಉಡುಪಿ ಜಿಲ್ಲೆ: 105 ಪ್ರಕರಣ
ಉಡುಪಿ ಜಿಲ್ಲೆಯಲ್ಲಿ ಮಾರ್ಚ್‌ನಲ್ಲಿ 10, ಎಪ್ರಿಲ್‌ನಲ್ಲಿ 17, ಮೇಯಲ್ಲಿ 25, ಜೂನ್‌ನಲ್ಲಿ 28, ಜುಲೈಯಿಂದ ಆಗಸ್ಟ್‌ 15ರ ವರೆಗೆ 25 ಸೇರಿದಂತೆ ಒಟ್ಟು 105 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ.

Advertisement

ವಿವರ
ಮಲ್ಪೆ, ಕುಂದಾಪುರ, ಕೋಟ ಠಾಣೆಗಳಲ್ಲಿ ಗರಿಷ್ಠ ತಲಾ 12ಪ್ರಕರಣಗಳು, ಅಮಾಸೆಬೈಲು ಠಾಣೆಯಲ್ಲಿ 8, ಉಡುಪಿ, ಬೈಂದೂರು, ಕಾರ್ಕಳದಲ್ಲಿ ತಲಾ 5, ಶಂಕರನಾರಾಯಣ, ಹಿರಿಯಡ್ಕ ಠಾಣೆಗಳಲ್ಲಿ ತಲಾ 6, ಗಂಗೊಳ್ಳಿ, ಮಣಿಪಾಲ, ಕಾಪು, ಪಡುಬಿದ್ರಿಗಳಲ್ಲಿ ತಲಾ 5, ಕೊಲ್ಲೂರು, ಶಿರ್ವದಲ್ಲಿ ತಲಾ 4, ಅಜೆಕಾರು, ಹೆಬ್ರಿ ಮತ್ತು ಬ್ರಹ್ಮಾವರ ಠಾಣೆಗಳಲ್ಲಿ ತಲಾ 2 ಪ್ರಕರಣಗಳು ದಾಖಲಾಗಿವೆ.

ದ.ಕ. ಜಿಲ್ಲೆ : 238 ಪ್ರಕರಣ
ದ.ಕ. ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ ಮಾರ್ಚ್‌ನಲ್ಲಿ 30, ಎಪ್ರಿಲ್‌ನಲ್ಲಿ 13, ಮೇಯಲ್ಲಿ 22, ಜೂನ್‌ನಲ್ಲಿ 18, ಜುಲೈಯಲ್ಲಿ 20 ಸೇರಿದಂತೆ ಒಟ್ಟು 103 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಮಂಗಳೂರು ನಗರ ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯ ಠಾಣೆಗಳಲ್ಲಿ ಮಾ. 1ರಿಂದ ಜುಲೈ 31ರ ವರೆಗೆ 135 ಪ್ರಕರಣಗಳಿವೆ.

ವಿವರ
ಬಂಟ್ವಾಳ ನಗರ ಮತ್ತು ಬೆಳ್ತಂಗಡಿ – ತಲಾ 7, ಬೆಳ್ಳಾರೆ – 6, ಬಂಟ್ವಾಳ ಗ್ರಾಮಾಂತರ – 11 ಉಪ್ಪಿನಂಗಡಿ ಮತ್ತು ವಿಟ್ಲ – ತಲಾ 10, ಕಡಬ – 9, ಪುತ್ತೂರು ಗ್ರಾಮಾಂತರ – 8, ವೇಣೂರು – 3 ಸುಬ್ರಹ್ಮಣ್ಯ – 4, ಪುಂಜಾಲಕಟ್ಟೆ  -2, ಧರ್ಮಸ್ಥಳ -13, ಪುತ್ತೂರು ನಗರ – 9, ಸುಳ್ಯ – 5 ಪ್ರಕರಣಗಳು ದಾಖಲಾಗಿವೆ.

ಸಮಾಧಾನದ ಮಾತುಗಳೇ ಶ್ರೀರಕ್ಷೆ
ಖನ್ನತೆ ಎಂಬುದು ಮಾನಸಿಕ ಕಾಯಿಲೆ. ಅಪ್ತಸಮಾಲೋಚನೆ ಸಹಿತ ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನಿವಾರಿಸುವಂಥದ್ದು. ವಿಪರೀತ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಗೆಳೆಯರ ಸಾಂತ್ವನದ ನುಡಿಗಳೇ ಶ್ರೀರಕ್ಷೆಯಾಗುತ್ತವೆೆ. ಸಮಸ್ಯೆಗೆ ಆತ್ಮಹತ್ಯೆಯೇ ಪರಿಹಾರವಲ್ಲ ಎಂಬುದನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು.
– ಡಾ| ಮಾನಸ್‌ ಇ.ಆರ್‌. ಮಾನಸಿಕ ತಜ್ಞರು, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ

Advertisement

Udayavani is now on Telegram. Click here to join our channel and stay updated with the latest news.

Next