Advertisement
ಜೇನು ಅಳೆಯುವುದಕ್ಕೆ ಹೋದವನು ಜೇನು ತುಪ್ಪದ ರುಚಿ ನೋಡಿಯೇ ನೋಡುತ್ತಾನೆ. ಹೇಗಿದ್ದರೂ ಕೈಗೆ ಮೆತ್ತಿಕೊಂಡಿರುವ ಜೇನು ತುಪ್ಪವನ್ನು ನೀರಿನಲ್ಲಿ ತೊಳೆಯುವ ಮೊದಲು ಒಮ್ಮೆ ಕೈಯನ್ನು ಬಾಯಿಗಿಡುವುದು ಎಷ್ಟು ಸಹಜವಾದ ಅಭ್ಯಾಸವೊ, ಅಷ್ಟೇ ಸಹಜವಾದದ್ದು; ಉಳಿಸಿರುವವನು ಅದನ್ನು ಬೆಳೆಸುವುದಕ್ಕೆ ಯೋಚಿಸುವುದು. ಉಳಿಸುವುದು ಮೊದಲ ಹಂತ. ಉಳಿಸಿದ ನಂತರ, ಉಳಿಸುವಾಗಲೇ ಅವನ ಕಣ್ಣೆದುರು ಮುಂದಿನ ದಾರಿಯೂ ಸಿದ್ಧ ಇದ್ದೇ ಇರುತ್ತದೆ. ಇಲ್ಲವಾದರೂ, ಉಳಿಸುತ್ತ ಉಳಿಸುತ್ತ ಅದನ್ನು ಬೆಳೆಸುವತ್ತಲೂ ಅವನು ಯೋಚಿಸಿಯೇ ಇರುತ್ತಾನೆ.
Related Articles
Advertisement
ಎಲ್ಲ ಹಣವನ್ನೂ ಒಂದೆಡೆ ಹೂಡಬಾರದು ಎನ್ನುವುದು ಹೂಡಿಕೆ ತಜ್ಞರು ಹೇಳುವ ಮಾತು. ಬೇರೆ ಬೇರೆ ರೀತಿಯ ಹೂಡಿಕೆ ಮಾಡಿದಾಗಲೇ ಉತ್ತಮ ಫಲಿತಾಂಶ ದೊರೆಯಲಿದೆ ಎಂದೂ ತಜ್ಞರು ಹೇಳುತ್ತಾರೆ. ದೀರ್ಘ ಕಾಲದ ಹೂಡಿಕೆ, ಕಡಿಮೆ ಅವಧಿಯ ಹೂಡಿಕೆ ಹೀಗೆ ಹೂಡಿಕೆಯಲ್ಲಿ ವೈವಿಧ್ಯತೆಯೂ ಇರಬೇಕು. ಆದರೆ ಇರುವ ಎಲ್ಲ ಹಣವನ್ನೂ ಹೂಡಿಕೆ ಮಾಡಬಾರದು. ನಿತ್ಯ ಬಳಕೆಗೆ, ಏನಾದರೂ ತುರ್ತು ಸಂದರ್ಭ ಎದುರಾದಾಗ ಬೇಕಾಗಬಹುದೆಂದು ಹಾಗೆ ಹಣ ಇಟ್ಟುಕೊಳ್ಳಲೇ ಬೇಕು. ನಗದು ಹಣ ಇರದಿದ್ದರೆ ಮುಖದಲ್ಲಿ ನಗು ಇರುವುದಿಲ್ಲ. ಎಷ್ಟೇ ಕೋಟ್ಯಾಧೀಶರಾದರೂ ಕೈಯಲ್ಲಿ ಕ್ಯಾಶ್ ಇರದಿದ್ದರೆ ಏನುಪಯೋಗ?
ಎಷ್ಟೇ ರೀತಿಯ ಹೂಡಿಕೆಯ ಪರಿಚಯವಿದ್ದರೂ ಎಲ್ಲರೂ ಹೇಳುವ ಮೊದಲ ಹೆಜ್ಜೆ, ಬ್ಯಾಂಕಿನಲ್ಲಿ ಬಡ್ಡಿ ಬರುವುದಕ್ಕೆ ವ್ಯವಸ್ಥೆ ಮಾಡಿಕೊಳ್ಳುವುದು. ಹಿರಿಯ ನಾಗರೀಕರಿಗೆ ವಿಶೇಷ ಅನುಕೂಲತೆಗಳೂ ಇರುವ ಈ ಹೂಡಿಕೆಯಲ್ಲಿ ರಿಸ್ಕ್ ಇಲ್ಲವೇ ಇಲ್ಲ. ಇಲ್ಲಿ ಆದಾಯ ಎಷ್ಟು ಎನ್ನುವುದೂ ಮೊದಲೇ ಖಚಿತವಾಗಿರುತ್ತದೆ. ಇದು ಹನಿ ಹನಿ ಸೇರಿದರೆ ಹಳ್ಳ ಎನ್ನುವ ಹೂಡಿಕೆ. ಈಗಂತೂ ಎಲ್ಲೆಡೆಗೂ ಬ್ಯಾಂಕ್‌ಗಳಿವೆ. ಬ್ಯಾಂಕ್ ವ್ಯವಹಾರ ಸರಳವೂ, ಸುಲಭವೂ ಆಗಿದೆ. ಹಾಗಾಗಿ ಬ್ಯಾಂಕಿನಲ್ಲಿ ಹಣ ಇಡುವುದು ಎಲ್ಲರಿಗೂ ದಕ್ಕುವ, ನಿಲುಕುವ ಅತ್ಯಂತ ಸಾಂಪ್ರದಾಯಿಕ ಹೂಡಿಕೆ ಆಗಿದೆ.
-ಸುಧಾಶರ್ಮ ಚವತ್ತಿ