Advertisement

ಕೊಡಗು ಕಾಂಗ್ರೆಸ್‌ನಲ್ಲಿ ಢೋಂಗಿ ನಾಯಕರಿದ್ದಾರೆ : ಮುತ್ತಪ್ಪ ಟೀಕೆ

08:00 AM Apr 29, 2018 | Team Udayavani |

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ತಾವು ಸಂಘಟಿಸಿದ ಕಾಂಗ್ರೆಸ್‌ ಪಕ್ಷಕ್ಕೆ ಧಕ್ಕೆಯಾಗಬಾರದು ಮತ್ತು ಜಾತ್ಯತೀತ ಮತಗಳು ಹಂಚಿ ಹೋಗಬಾರದು ಎಂಬ ಉದ್ದೇಶದಿಂದ ಕಾಂಗ್ರೆಸ್‌ಗೆ ಬಂಡಾಯವಾಗಿ ತಾವು ಸಲ್ಲಿಸಿದ ನಾಮಪತ್ರವನ್ನು ಹಿಂಪಡೆದಿರುವುದಾಗಿ ಐಎನ್‌ಟಿಯುಸಿ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ತಿಳಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪಕ್ಷ ಸಂಘಟನೆಯಲ್ಲಿ ಸಕ್ರಿಯ ನಾಗಿದ್ದ ನನಗೆ ಟಿಕೆಟ್‌ ಸಿಗುವ ನಿರೀಕ್ಷೆ ಇತ್ತಾದರೂ ಕೊನೆ ಕ್ಷಣದಲ್ಲಿ ಅದು ಬೇರೆಯವರ ಪಾಲಾಯಿತು. ಬಿಜೆಪಿಯನ್ನು ಸೋಲಿಸಲೇಬೇಕೆಂದು ಕಾರ್ಯೋನ್ಮುಖನಾದ‌ ನನಗೆ ಟಿಕೆಟ್‌ ಸಿಗದ ಕಾರಣ ಬಂಡಾಯವಾಗಿ ನಾಮಪತ್ರ ಸಲ್ಲಿಸಬೇಕಾಯಿತು ಎಂದು ಸ್ಪಷ್ಟಪಡಿಸಿದರು.

ಪಕ್ಷದ ರಾಜ್ಯ ಮುಖಂಡರು, ಸಚಿವರುಗಳಾದ ಡಿ.ಕೆ. ಶಿವಕುಮಾರ್‌, ಎಂ.ಆರ್‌. ಸೀತಾರಾಂ ಅವರುಗಳು ನನ್ನೊಂದಿಗೆ ಚರ್ಚಿಸಿ ನಾಮಪತ್ರ ಹಿಂಪಡೆಯುವಂತೆ ಮನವೊಲಿಸಿದರು. ಕೋರ್‌ ಕಮಿಟಿ ಹಾಗೂ ಹಿತೈಷಿಗಳ ಸಭೆಯಲ್ಲಿ ಚರ್ಚಿಸಿ ನಾವು ಕಟ್ಟಿ ಬೆಳೆಸಿದ ಕಾರ್ಯಕರ್ತರ ತಂಡ ಹಾಳಾಗಬಾರದೆಂದು ಸಾಧಕ ಬಾಧಕಗಳ ಕುರಿತು ಚಿಂತಿಸಲಾಯಿತು.  ಜಾತ್ಯತೀತ ಮತಗಳು ಹಂಚಿ ಹೋಗುವುದನ್ನು ತಪ್ಪಿಸಿ ಜಿಲ್ಲೆಯ ಎರಡು ಕ್ಷೇತ್ರಗಳ ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಲು ನಿರ್ಣಯ ಕೈಗೊಳ್ಳಲಾಯಿತು ಎಂದು ನಾಪಂಡ ಮುತ್ತಪ್ಪ ತಿಳಿಸಿದರು.

ಕಾಂಗ್ರೆಸ್‌ ಗೆಲ್ಲಬೇಕು ಎನ್ನುವ ಯೋಜನೆ ಮತ್ತು ಯೋಚನೆ ಇಲ್ಲದವರು ನನ್ನ ವಿರುದ್ಧ ಅನಾವಶ್ಯಕ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ರೀತಿ ಹೇಳಿಕೆ ನೀಡುವ ಪಕ್ಷದ ಕೆಲವು ಡೋಂಗಿ ನಾಯಕರುಗಳಿಗೆ ತಕ್ಕ ಪಾಠ ಕಲಿಸಬೇಕು ಎನ್ನುವ ಉದ್ದೇಶ ಇತ್ತಾದರೂ ಅದು ಸಾಧ್ಯವಾಗಲಿಲ್ಲ. ನಾನು ಕಾಂಗ್ರೆಸ್‌ ಪಕ್ಷದ ಮೇಲೆ ಹಿಡಿತ ಸಾಧಿಸುತ್ತೇನೆ ಎಂಬ ಉದ್ದೇಶದಿಂದ ನನಗೆ ಟಿಕೆಟ್‌ ಸಿಗಬಾರದು ಎಂದು ಕೆಲವರು ಷಡ್ಯಂತ್ರ ನಡೆಸಿದ್ದರು, ನಾನು ಕಾರ್ಯಕರ್ತರ ಬಳಿಯೇ ಇರುವ ನಾಯಕನಾಗಿದ್ದು, ಪಕ್ಷದೊಳಗಿರುವ ಢೋಂಗಿ ನಾಯಕರು ಕಾರ್ಯಕರ್ತರ ನೋವಿಗೆ ಸ್ಪಂದಿಸುತ್ತಿಲ್ಲವೆಂದು ಟೀಕಿಸಿದರು.

ಅನಿವಾರ್ಯವಾಗಿ ಕಾಂಗ್ರೆಸ್‌ ಪಕ್ಷದ ಗೆಲುವಿಗಾಗಿ ಮುಂದಾಗಲೇ ಬೇಕಾಗಿದೆ. ನಮ್ಮ ಕಾರ್ಮಿಕ ಘಟಕದಲ್ಲಿ 21 ಲಕ್ಷ ಸದಸ್ಯರಿದ್ದು, ನನ್ನ ಅಧ್ಯಕ್ಷತೆಯ ಸಂಘಟನೆಯಲ್ಲಿ 3.50 ಲಕ್ಷ ಸದಸ್ಯರಿದ್ದಾರೆ. ಇವರ ಹಿತವನ್ನು ಕಾಯುವ ಉದ್ದೇಶದಿಂದಲೂ ನಾಮ ಪತ್ರ ಹಿಂಪಡೆಯಬೇಕಾಯಿತು ಎಂದು ನಾಪಂಡ ಮುತ್ತಪ್ಪ ಸಮರ್ಥಿಸಿಕೊಂಡರು.

Advertisement

ಹೈಕಮಾಂಡ್‌ ಸಲಹೆ ಹಿನ್ನೆಲೆ ಕಾಂಗ್ರೆಸ್‌ ಪಕ್ಷದ ಹೆಸರಿನಿಂದಲೂ ನಾಮ ಪತ್ರ ಸಲ್ಲಿಸಿದ್ದೆ, ಆದರೆ ಅದು ಬಿ ಫಾರಂ ಇಲ್ಲದ ಕಾರಣ ಈಗಾಗಲೇ ತಿರಸ್ಕೃತಗೊಂಡಿದೆ. ಕಳೆದ ಬಾರಿ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಮೂರನೇ ಸ್ಥಾನದಲ್ಲಿದ್ದ ಕಾಂಗ್ರೆಸ್‌ ಪಕ್ಷವನ್ನು ಈ ಬಾರಿ ಒಂದನೇ ಸ್ಥಾನಕ್ಕೆ ತರುವುದೇ ನಮ್ಮ ಗುರಿಯಾಗಿದ್ದು, ಕ್ಷೇತ್ರದ ಅಭ್ಯರ್ಥಿಯನ್ನು ಪ್ರಬಲಗೊಳಿಸುತ್ತೇವೆ ಎಂದು ಮುತ್ತಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಕೊಡಗು ಬಿಜೆಪಿಯ ಭದ್ರಕೋಟೆ ಅಲ್ಲವೆಂದು ಅಭಿಪ್ರಾಯಪಟ್ಟ ನಾಪಂಡ ಮುತ್ತಪ್ಪ ಅಭ್ಯರ್ಥಿಗಳ ಆಯ್ಕೆಯಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ವಿಳಂಬ ಧೋರಣೆ ತೋರುತ್ತಿರುವುದೇ ಬಿಜೆಪಿ ಗೆಲುವಿಗೆ ಕಾರಣ ಎಂದು ವಿಶ್ಲೇಷಿಸಿದರು.

ಜಿಲ್ಲಾಧ್ಯಕ್ಷ ಸ್ಥಾನ ಸಿಗಲಿದೆ  
ನಾಮಪತ್ರ ಹಿಂಪಡೆಯುವಂತೆ ಮನವೊಲಿಸುವ ಸಂದರ್ಭ ಪಕ್ಷದ ಪ್ರಮುಖರು ನನಗೆ ಜಿಲ್ಲಾಧ್ಯಕ್ಷ ಸ್ಥಾನ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದಾರೆ. ಇನ್ನು ಎರಡು ತಿಂಗಳಿನಲ್ಲಿ ಜಿಲ್ಲಾಧ್ಯಕ್ಷ ಸ್ಥಾನ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ಅಧಿಕಾರ ವಹಿಸಿಕೊಂಡ ನಂತರ ಢೋಂಗಿ ನಾಯಕರು ಪಕ್ಷದಲ್ಲಿರಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಉಸ್ತುವಾರಿ ಸಚಿವರು ಬರುವಾಗ, ಹೋಗುವಾಗ ಕಾರಿನಲ್ಲಿ ಕುಳಿತು ಢೋಂಗಿ ನಾಯಕತ್ವ ಮಾಡಿದವರು ಪಕ್ಷ ಸಂಘಟನೆಯಲ್ಲಿ ಸಂಪೂರ್ಣವಾಗಿ ವಿಫ‌ಲರಾಗಿದ್ದಾರೆ ಎಂದು ಮುತ್ತಪ್ಪ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಐಎನ್‌ಟಿಯುಸಿ ಪ್ರಧಾನ ಕಾರ್ಯದರ್ಶಿ ನಾಪಂಡ ಮುದ್ದಪ್ಪ, ಜಿಲ್ಲಾಧ್ಯಕ್ಷ ಟಿ.ಪಿ. ಹಮೀದ್‌, ಪ್ರಮುಖರಾದ ಹೊಸಬೀಡು ಹೂವಯ್ಯ, ಅಜ್ಜಳ್ಳಿ ರವಿ ಹಾಗೂ ಕಿಶೋರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next