Advertisement
ವಿಟ್ಲ ಪ.ಪಂ. ಚುನಾವಣೆಯಲ್ಲಿ ಬಿಜೆಪಿ 12 ಸ್ಥಾನ, ಕಾಂಗ್ರೆಸ್ 5 ಸ್ಥಾನ ಮತ್ತು 1 ಸ್ಥಾನ ಎಸ್‌ಡಿಪಿಐ ಜಯಗಳಿಸಿದ್ದು, ಬಿಜೆಪಿಗೆ ಅಧಿಕಾರ ನಡೆಸುವ ಯೋಗ ಸತತ ಎರಡನೇ ಬಾರಿ ಲಭಿಸಿದೆ. ಕಾಂಗ್ರೆಸ್ ಕಳೆದ ಅವಧಿಯಲ್ಲಿದ್ದ ಒಂದು ಸ್ಥಾನ ಕಳೆದುಕೊಂಡು 5 ಸ್ಥಾನಕ್ಕೆ ಕುಸಿದರೆ, ಎಸ್‌ಡಿಪಿಐ ಖಾತೆ ತೆರೆದಿದೆ. ಆದರೆ ಇವರೆಲ್ಲರಿಗೂ ಆಯಾ ಸ್ಥಾನಗಳನ್ನು ಅಲಂಕರಿಸುವ ಯೋಗ ಇನ್ನೂ ಕೂಡಿಬಂದಿಲ್ಲ. ಈ ನಡುವೆ ಸರಕಾರ ಮೂವರನ್ನು ನಾಮನಿರ್ದೇಶನ ಮಾಡಿದೆ. ಸದಸ್ಯರ ಸಂಖ್ಯೆ 21ಕ್ಕೇರಿದೆ. ಆದರೆ ಇವರೆಲ್ಲರಿಗೂ ಚುಕ್ಕಾಣಿ ಸಿಕ್ಕಿಲ್ಲ ಮತ್ತು ಇನ್ನೂ ಮುಖ್ಯಾಧಿಕಾರಿ ಮತ್ತು ತಹಶೀಲ್ದಾರ್ ಅವರ ಅಧಿಕಾರಾವಧಿ ಮುಂದುವರಿದಿದೆ.
Related Articles
Advertisement
ನೂರಾರು ಸಮಸ್ಯೆಗಳನ್ನು ಹೊತ್ತಿರುವ ಪಂಚಾಯತ್ ಆಡಳಿತ ವ್ಯವಸ್ಥೆಯಿಲ್ಲದೇ ಕಂಗೆಟ್ಟಿದೆ. ಸಿಬಂದಿ ಕೊರತೆ, ಗ್ರಾಮಸ್ಥರಿಗೆ ಖಾತೆ, ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವ ಪ್ರಕ್ರಿಯೆ ಸ್ಥಗಿತ, ತಾಂತ್ರಿಕ ತೊಂದರೆಗಳಿವೆ. ಪ್ರಸ್ತುತ ಪಂಚಾಯತ್ ಕಚೇರಿಯ ಕಟ್ಟಡ ಹಳೆಯದಾಗಿದ್ದು, ಹೊಸ ಕಟ್ಟಡ ನಿರ್ಮಾಣ ವಾಗಬೇಕಾಗಿದೆ. ಆದರೆ ಹೊಸ ಕಟ್ಟಡ ನಿರ್ಮಿಸಲು ಸ್ಥಳ ನಿಗದಿಯಾಗಿಲ್ಲ. ಕುಡಿಯುವ ನೀರು ಸರಬರಾಜು ವ್ಯವಸ್ಥೆಯಲ್ಲಿ ತೊಂದರೆಯಿದೆ. ಪ್ರಮುಖ ರಸ್ತೆ ಹದಗೆಟ್ಟಿದ್ದು, ಅಭಿ ವೃದ್ಧಿಪಡಿಸಬೇಕಾಗಿದೆ. ಲೋಕೋ ಪಯೋಗಿ ಇಲಾಖೆ ರಸ್ತೆ ಅಭಿವೃದ್ಧಿ ಮಾಡಬೇಕಾಗಿದೆ.
ಹುದ್ದೆ ಭರ್ತಿಯಾಗಲಿ
ಪ.ಪಂ. ಆದ ಬಳಿಕ ಮುಖ್ಯಾಧಿಕಾರಿ ಹುದ್ದೆಯೊಂದೇ ಭರ್ತಿಯಾಗಿತ್ತು. ಏಳೆಂಟು ವರ್ಷಗಳಿಂದ ಎಂಜಿನಿಯರ್, ಕಂದಾಯ ಅಧಿಕಾರಿ, ಆರೋಗ್ಯ ಅಧಿಕಾರಿ ಇನ್ನಿತರ ಹುದ್ದೆಗಳು ಭರ್ತಿಯಾಗಲೇ ಇಲ್ಲ. ಕೆಲವು ಅಧಿಕಾರಿಗಳಿಗೆ ವಾರದಲ್ಲಿ ಎರಡು ದಿನ, ಮೂರು ದಿನ ವಿಟ್ಲಕ್ಕೆ ಪ್ರಭಾರ ರೂಪದ ಅಧಿಕಾರವನ್ನು ಕೊಡಲಾಗಿತ್ತು. ಆದರೆ ನಾಗರಿಕರ ಸಮಸ್ಯೆ ಪರಿಹಾರವಾಗುತ್ತಿರಲಿಲ್ಲ. ಇದೀಗ ಎಂಜಿನಿಯರ್ ಹುದ್ದೆ ಭರ್ತಿಯಾಗಿದ್ದು, ಉಳಿದ ಹುದ್ದೆಗಳೂ ಭರ್ತಿಯಾಗಲೆಂದು ನಾಗರಿಕರು ಆಗ್ರಹಿಸುತ್ತಿದ್ದಾರೆ.
ಅನುದಾನಕ್ಕೂ ಕಡಿವಾಣ
ಅಧಿಕಾರಿಗಳಿಲ್ಲದೆ ಇರುವುದರಿಂದ ಎಲ್ಲ ತೆರಿಗೆ, ವಸೂಲಾತಿ ಚಟುವಟಿಕೆಗಳು ಹಿಂದೆ ಬಿದ್ದಿವೆ. ಪರಿಣಾಮವಾಗಿ ಸರಕಾರ ಪಂಚಾಯತ್‌ಗೆ ನೀಡುವ ಅನುದಾನಕ್ಕೂ ಕಡಿವಾಣ ಬೀಳುತ್ತದೆ. ವಿಟ್ಲದ ಜನತೆಗೆ ಓಡಾಟ ಹೆಚ್ಚಾಗಿದೆ. ಯೋಜನ ಪ್ರಾಧಿಕಾರವಿಲ್ಲ. ವಿಟ್ಲ ವ್ಯವಸಾಯ ಸೇವಾ ಸಹಕಾರಿ ಸಂಘ, ಕೆಪಿಟಿಸಿಎಲ್ ಕೇಂದ್ರ, ಪೊಲೀಸರ ವಸತಿಗೃಹಕ್ಕೆ ತೆರಳುವ ರಸ್ತೆ ಸರಿಯಿಲ್ಲ. ಈ ರಸ್ತೆಯಲ್ಲೇ ವಾರದ ಸಂತೆ ನಡೆಯುತ್ತಿದ್ದು ಮಂಗಳವಾರ ಇಲ್ಲಿ ವಾಹನ ಸಂಚಾರ ದುಸ್ತರವೆನಿಸಿದೆ. ವಾರದ ಸಂತೆಯನ್ನು ಬೇರೆ ಕಡೆ ವರ್ಗಾಯಿಸಬೇಕೆಂಬ ಆಗ್ರಹ ಕೇಳಿಬಂದಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ.
ಅಭಿವೃದ್ಧಿಗೆ ಸ್ಪಂದಿಸಲಾಗುತ್ತಿಲ್ಲ: ಮೀಸಲಾತಿ ಸಮಸ್ಯೆ ನಿವಾರಣೆಯಾಗಿ ಜನಪ್ರತಿನಿಧಿಗಳಿಗೆ ಅಧಿಕಾರ ಸಿಗಬೇಕು. ಸಾಮಾನ್ಯ ಸಭೆಗಳಿಲ್ಲದೆ, ಯಾವುದೇ ನಿರ್ಣಯಗಳನ್ನು ಕೈಗೊಳ್ಳಲಾಗದೇ ಜನಪ್ರತಿನಿಧಿಗಳಿಗೆ ಊರಿನ ಅಭಿವೃದ್ಧಿಗೆ ಸ್ಪಂದಿಸಲಾಗುತ್ತಿಲ್ಲ. ರಾಜ್ಯದೆಲ್ಲೆಡೆ ಪಟ್ಟಣ, ನ.ಪಂ. ಆಡಳಿತ ವ್ಯವಸ್ಥೆ ಸುಗಮವಾಗಿ ನಡೆಯದಿದ್ದಲ್ಲಿ ಅಭಿವೃದ್ಧಿ ಕಾರ್ಯ ಕುಂಠಿತಗೊಳ್ಳುತ್ತದೆ. ಅನುದಾನವಿಲ್ಲದೇ ಸೊರಗಿಹೋಗುತ್ತವೆ. ಸಂಬಂಧಪಟ್ಟವರು ಸೂಕ್ತ ಕ್ರಮಕೈಗೊಂಡಿದ್ದರೆ ಊರಿಗೆ ಅನುಕೂಲವಾಗುತ್ತಿತ್ತು. –ಭವಾನಿ ರೈ ಕೊಲ್ಯ, ಮಾಜಿ ಅಧ್ಯಕ್ಷರು, ವಿಟ್ಲ ಗ್ರಾ.ಪಂ.
ಕ್ರಮ ಕೈಗೊಳ್ಳಬೇಕು: ವಿಟ್ಲ ಪೇಟೆ ಮತ್ತು ಜಂಕ್ಷನ್‌ನಿಂದ ಹೊರಡುವ ನಾಲ್ಕೂ ರಸ್ತೆಗಳು ಹೊಂಡಗುಂಡಿಗಳಿಂದ ಆವೃತವಾಗಿವೆ. ಸಂಚಾರ ಅಸಾಧ್ಯವಾಗಿದೆ. ಸಂಬಂಧಪಟ್ಟವರು ಗಮನಹರಿಸಿ, ಶೀಘ್ರದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ವಿಟ್ಲ ಪ.ಪಂ. ಆಡಳಿತ ವ್ಯವಸ್ಥೆ ಅಸ್ತಿತ್ವಕ್ಕೆ ಬರದೇ ಇಂತಹ ನೂರಾರು ಸಮಸ್ಯೆಗಳು ಬಗೆಹರಿಯುತ್ತಿಲ್ಲ. –ದಿನೇಶ್, ನಾಗರಿಕರು, ವಿಟ್ಲ
-ಉದಯಶಂಕರ್ ನೀರ್ಪಾಜೆ