ಬೆಂಗಳೂರು: “ಕೇಂದ್ರ ಮಾಜಿ ಸಚಿವ ಅನಂತಕುಮಾರ್ ನಮ್ಮಿಂದ ದೈಹಿಕವಾಗಿ ದೂರವಾಗಿದ್ದರೂ, ತಮ್ಮ ಸಮಾಜಮುಖಿ ಕಾರ್ಯಗಳ ಮೂಲಕ ನಮ್ಮೊಂದಿಗೆ ನೆಲೆಸಿದ್ದಾರೆ’ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮಂಗಳವಾರ ಅದಮ್ಯ ಚೇತನ ಸಂಸ್ಥೆ ಹಮ್ಮಿಕೊಂಡ ಅನಂತ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೆಹಲಿಯಲ್ಲಿ ವಾಯುಮಾಲಿನ್ಯ ಉಸಿರುಗಟ್ಟಿಸುತ್ತಿದೆ. ಉದ್ಯಾನ ನಗರಿಗೂ ಆ ಪರಿಸ್ಥಿತಿ ಬಾರದಿರಲೆಂಬ ದೂರದೃಷ್ಟಿಯಿಂದ ಗಿಡ ನೆಡುವ ಕಾರ್ಯಕ್ರಮ ಕೈಗೆತ್ತಿಕೊಂಡಿದ್ದರು.
ಅದಮ್ಯ ಚೇತನ ಸಂಸ್ಥೆಯ ಮೂಲಕ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸುವುದರ ಜತೆಗೆ ವಿವಿಧ ಸಂಸ್ಥೆಗಳನ್ನು ಆಮಂತ್ರಿಸಿ, ಜ್ಞಾನ ದಾಸೋಹ ಮಾಡಿದರು. ಹೀಗಾಗಿ ಅನಂತಕುಮಾರ್ ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿರಬಹುದು. ಆದರೆ, ಅವರು ಕೈಗೊಂಡ ಕಾರ್ಯಗಳ ಮೂಲಕ ನಮ್ಮೊಂದಿಗೆ ಸದಾ ಇರುತ್ತಾರೆ ಎಂದು ಬಣ್ಣಿಸಿದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಮಾತನಾಡಿ, ನಾಡು-ನುಡಿಯ ವಿಚಾರವಾಗಿ ದೆಹಲಿಯಲ್ಲಿ ಸಹ ಅನಂತ ಕುಮಾರ್ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿದ್ದರು. ಆದರೆ, ಇದೀಗ ಅವರು ನಮ್ಮಿಂದ ದೂರವಾದ ಪರಿಣಾಮ ಕನ್ನಡ ರಾಷ್ಟ್ರ ರಾಜಧಾನಿಯಲ್ಲಿ ಅನಾಥವಾಗಿದೆ ಎಂದರು.
ಸಾಂಸ್ಕೃತಿಕ ಕ್ಷೇತ್ರದ ಪ್ರತಿನಿಧಿಯಾಗಿದ್ದ ಅನಂತ ಕುಮಾರ್ ಸರ್ವರನ್ನು ಸಮಾನವಾಗಿ ಕಾಣುತ್ತಿದ್ದರು. ವಿಶ್ವ ಸಂಸ್ಥೆಯಲ್ಲಿ ಸಹ ಕನ್ನಡದಲ್ಲಿಯೇ ಭಾಷಣ ಮಾಡುವ ಮೂಲಕ ತಾಯ್ನುಡಿಗೆ ಗೌರವ ನೀಡಿದ್ದರು. ಅವರ ಅಗಲಿಕೆಯಿಂದ ನಮ್ಮ ದನಿ ಅಡಗಿಹೋದಂತಾಗಿದೆ ಎಂದು ಕಂಬನಿ ಮಿಡಿದರು.
ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್, ಆರೆಸ್ಸೆಸ್ ಕ್ಷೇತ್ರೀಯ ಸಂಘಚಾಲಕ ವಿ. ನಾಗರಾಜ, ಶಾಸಕ ರವಿಸುಬ್ರಹ್ಮಣ್ಯ, ನ್ಯಾಷನಲ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ರಾಮ ರಾವ್, ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ತೇಜಸ್ವಿನಿ ಅನಂತ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ವಂದೇ ಮಾತರಂ ಗಾಯನ: ನುಡಿ ನಮನದಲ್ಲಿ ನಗರದ 33 ಶಾಲೆಯ ನಾಲ್ಕು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಏಕಕಾಲದಲ್ಲಿ ವಂದೇ ಮಾತರಂ ಹಾಗೂ ಕುವೆಂಪು ಅವರ “ಓ ನನ್ನ ಚೇತನ’ ಕವನವನ್ನು ಹಾಡುವ ಮೂಲಕ ಗಮನಸೆಳೆದರು. ಹಿಂದುಸ್ತಾನಿ ಗಾಯಕಿ ಸಂಗೀತಾ ಕಟ್ಟಿ ಸೇರಿದಂತೆ ವಿವಿಧ ಗಾಯಕರು ಕೂಡ ಇದಕ್ಕೆ ಸಾಥ್ ನೀಡಿದರು.