Advertisement

ಭಾರತದಲ್ಲಿ ಸದ್ಯ ಯಾವುದೇ ಕ್ರೀಡಾಕೂಟಗಳಿಲ್ಲ; ರಿಜಿಜು

10:55 PM May 23, 2020 | Sriram |

ಹೊಸದಿಲ್ಲಿ: ಸದ್ಯ ಭಾರತ ಯಾವುದೇ ಅಂತಾರಾಷ್ಟ್ರೀಯ ಕ್ರೀಡಾಕೂಟಗಳನ್ನು ನಡೆಸುವುದಿಲ್ಲ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಶನಿವಾರ ಸ್ಪಷ್ಟಪಡಿಸಿದ್ದಾರೆ. ಜತೆಗೆ ಕ್ರೀಡಾಭಿಮಾನಿಗಳು ಖಾಲಿ ಸ್ಟೇಡಿಯಂನಲ್ಲಿ ನಡೆಯುವ ಪಂದ್ಯಗಳಿಗೆ ಹೊಂದಿಕೊಳ್ಳಬೇಕಿದೆ ಎಂದೂ ಅವರು ಹೇಳಿದರು.

Advertisement

“ನಮ್ಮ ಮುಂದಿರುವ ಸದ್ಯದ ಗುರಿಯೆಂದರೆ ಕೋವಿಡ್‌-19 ವಿರುದ್ಧ ಹೋರಾಟ ನಡೆಸಿ ಇದನ್ನು ನಿರ್ಮೂಲನೆ ಮಾಡುವುದಾಗಿದೆ. ಕ್ರೀಡಾ ಜಗತ್ತು ಸಹಜ ಸ್ಥಿತಿಗೆ ಮರಳಬೇಕಿದೆ. ಈಗಿನ ಸ್ಥಿತಿಯಲ್ಲಿ ಭಾರತದ ಆತಿಥ್ಯದ ಕ್ರೀಡಾಕೂಟಗಳ ದಿನಾಂಕವನ್ನು ಸೂಚಿಸುವುದು ಅಸಾಧ್ಯ. ಸದ್ಯ ಭಾರತದಲ್ಲಿ ಯಾವುದೇ ಅಂತಾ ರಾಷ್ಟ್ರೀಯ ಕ್ರೀಡಾಕೂಟ ನಡೆಯುವ ಸಾಧ್ಯತೆ ಇಲ್ಲ’ ಎಂದು ಕಿರಣ್‌ ರಿಜಿಜು ಹೇಳಿದರು.

“ಭವಿಷ್ಯದಲ್ಲಿ ವೀಕ್ಷಕರ ಗೈರಲ್ಲಿ ಕ್ರೀಡಾ ಕೂಟಗಳು ನಡೆಯುವ ಸಾಧ್ಯತೆ ಹೆಚ್ಚಿದೆ. ಇದಕ್ಕೆ ಕ್ರೀಡಾಭಿಮಾನಿಗಳು ಹೊಂದಿ ಕೊಳ್ಳಲು ಮಾನಸಿಕವಾಗಿ ಸಿದ್ಧರಾಗ ಬೇಕಿದೆ’ ಎಂದೂ ರಿಜಿಜು ಹೇಳಿದರು.

ಐಪಿಎಲ್‌ ಭವಿಷ್ಯವೇನು?
ಈ ಸಂದರ್ಭದಲ್ಲಿ 13ನೇ ಐಪಿಎಲ್‌ ಪಂದ್ಯಾವಳಿಯ ಬಗ್ಗೆ ಪ್ರತಿಕ್ರಿಯಿಸಿದ ಕ್ರೀಡಾ ಸಚಿವರು, “ಅದು ಐಪಿಎಲ್‌ ಇರಬಹುದು ಅಥವಾ ಇನ್ಯಾವುದೇ ಕ್ರೀಡಾಕೂಟ ಇರಬಹುದು, ಇಲ್ಲಿ ಸರಕಾರದ ನಿರ್ಧಾರವೇ ಅಂತಿಮ. ಸರಕಾರ ಪರಿಸ್ಥಿತಿಯನ್ನು ಗಮನಿಸಿ ತನ್ನ ನಿರ್ಧಾರವನ್ನು ಪ್ರಕಟಿಸಲಿದೆ. ನಾವು ಕ್ರೀಡಾಕೂಟ ನಡೆಸಲೇಬೇಕೆಂಬ ಕಾರಣಕ್ಕಾಗಿ ಕ್ರೀಡಾಳುಗಳ ಆರೋಗ್ಯ ದೊಂದಿಗೆ ಚೆಲ್ಲಾಟವಾಡುವುದಿಲ್ಲ. ಆರೋಗ್ಯ ಮತ್ತು ಸುರಕ್ಷತೆಗೆ ನಮ್ಮ ಮೊದಲ ಆದ್ಯತೆ. ಇದರ ಜತೆಗೇ ಕೇಂದ್ರ ಗೃಹ ಸಚಿವಾಲಯ ಮತ್ತು ಸ್ಥಳೀಯ ಆಡಳಿತ ಮಂಡಳಿ ರೂಪಿಸಿದ ಮಾರ್ಗದರ್ಶಿ ಸೂತ್ರಗಳನ್ನೂ ಗಂಭೀರವಾಗಿ ಪರಿಗಣಿಸ ಬೇಕಿದೆ’ ಎಂದರು.ದೇಶದಲ್ಲಿ ಕ್ರೀಡಾ ಚಟುವಟಿಕೆಯನ್ನು ಮುಂದುವರಿಸಲು ಸಾಯ್‌ ಕೆಲವು ನಿಯಮಗಳನ್ನು ರೂಪಿಸಿದ ಬೆನ್ನಲ್ಲೇ ಸಚಿವ ಕಿರಣ್‌ ರಿಜಿಜು ಈ ಹೇಳಿಕೆ ನೀಡಿರುವುದು ಉಲ್ಲೇಖನೀಯ.

ಒಲಿಂಪಿಕ್ಸ್‌ ನಡೆಯುವ ವಿಶ್ವಾಸ
ಕೋವಿಡ್-19 ಕಾರಣದಿಂದ 2021ಕ್ಕೆ ಮುಂದೂಡಲ್ಪಟ್ಟ ಟೋಕಿಯೊ ಒಲಿಂ ಪಿಕ್ಸ್‌ ಕ್ರೀಡಾಕೂಟಕ್ಕೆ ಸಂಬಂಧಿಸಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಿರಣ್‌ ರಿಜಿಜು, “ಇದು ಮುಂದಿನ ವರ್ಷ ನಡೆಯುವ ವಿಶ್ವಾಸವಿದೆ. ಇದಕ್ಕಾಗಿ ಭಾರತೀಯರ ತಯಾರಿ ಉತ್ತಮ ಮಟ್ಟದಲ್ಲಿದೆ. ಒಲಿಂಪಿಕ್ಸ್‌ ಇತಿಹಾಸದಲ್ಲೇ ನಮ್ಮವರು ಇಷ್ಟೊಂದು ದೊಡ್ಡ ಮಟ್ಟದ ಸಿದ್ಧತೆ ನಡೆಸಿದ್ದಿಲ್ಲ. ಆದರೆ ಟಾಪ್‌-10 ಅಥವಾ ಟಾಪ್‌-5 ಸ್ಥಾನದ ಗುರಿಯಲ್ಲಿ ನಾವಿಲ್ಲ. 2028ರಲ್ಲಿ ಭಾರತ ಪದಕಪಟ್ಟಿಯಲ್ಲಿ ಅಗ್ರ ಹತ್ತರಲ್ಲಿರಬೇಕು ಎಂಬುದು ನಮ್ಮ ಪ್ರಮುಖ ಗುರಿ…’ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next