ಬೆಂಗಳೂರು: ನಾಡಪ್ರಭು ಕೆಂಪೇಗೌಡರ ಹೆಸರಿನಲ್ಲಿ ನೀಡುವ ಪ್ರಶಸ್ತಿಯ ಗೌರವ ಉಳಿಸಲು ಮುಂದಾಗಿರುವ ಬಿಬಿಎಂಪಿ, ಪ್ರಶಸ್ತಿ ಪುರಸ್ಕೃತರಿಗಾಗಿ ಸಮಿತಿ ರಚಿಸುತ್ತಿದ್ದು, ಪ್ರಶಸ್ತಿ ಪುರಸ್ಕೃರ ಸಂಖ್ಯೆಯನ್ನು 52 ಅಥವಾ 70ಕ್ಕೆ ಸೀಮಿತಗೊಳಿಸಲು ಸಜ್ಜಾಗಿದೆ.
ಮೇಯರ್ ಸಂಪರ್‌ರಾಜ್ ಅವರ ಅವಧಿಯಲ್ಲಿ ಯಾವುದೇ ಮಾನದಂಡಗಳನ್ನು ಅನುಸರಿದೆ ರಾಜಕೀಯ ಪಕ್ಷಗಳ ಕಾರ್ಯಕರ್ತರು ಸೇರಿ ಅನರ್ಹರಿಗೆ ಪ್ರಶಸ್ತಿ ನೀಡಲಾಗಿತ್ತು. ಜತೆಗೆ ವೇದಿಕೆಯಲ್ಲಿ ಪುರಸ್ಕೃತರನ್ನು ಆಯ್ಕೆ ಮಾಡಿ ಪ್ರಶಸ್ತಿ ವಿತರಣೆ ಮಾಡಿದರಿಂದ ಪುರಸ್ಕೃತರ ಸಂಖ್ಯೆ 542 ದಾಟಿತ್ತು. ಇದರಿಂದಾಗಿ ಕೆಂಪೇಗೌಡ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರೇಕ್ಷಕರಿಗಂತಲೂ ಪ್ರಶಸ್ತಿ ಪುರಸ್ಕೃತರ ಸಂಖ್ಯೆ ಹೆಚ್ಚಾಗಿತ್ತು. ಪಾಲಿಕೆಯ ಈ ಧೋರಣೆಗೆ ಸಾರ್ವಜನಿಕರಿಂದ ಕಟುಟೀಕೆಗಳು ವ್ಯಕ್ತವಾಗಿದ್ದವು.
ಇದರಿಂದ ಎಚ್ಚೆತ್ತುಕೊಂಡಿರುವ ಮೇಯರ್ ಗಂಗಾಂಬಿಕೆ, ಈ ಬಾರಿ ಕೆಂಪೇಗೌಡ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲು ತಜ್ಞರ ಸಮಿತಿ ರಚಿಸಲು ಮುಂದಾಗಿದ್ದು, ಪುರಸ್ಕೃತರ ಸಂಖ್ಯೆಯನ್ನು ಮೇಯರ್‌ಗಳ ಸಂಖ್ಯೆಗೆ ಅನುಗುಣವಾಗಿ ಅಥವಾ ಬಿಬಿಎಂಪಿ ರಚನೆಯಾದ ವರ್ಷಕ್ಕೆ ಅನುಗುಣವಾಗಿ 52 ಅಥವಾ 70ಕ್ಕೆ ಸೀಮಿತಗೊಳಿಸಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಆ ಹಿನ್ನೆಲೆಯಲ್ಲಿ ಗುರುವಾರ ಸಭೆ ನಡೆಸಲಾಗಿದ್ದು, ಕೆಂಪೇಗೌಡ ಜಯಂತಿಯನ್ನು ಜುಲೈ ತಿಂಗಳ ಕೊನೆಯ ವಾರದಲ್ಲಿ ಹಮ್ಮಿಕೊಳ್ಳಲು ಹಾಗೂ ವಿವಿಧ ಕ್ಷೇತ್ರಗಳ ತಜ್ಞರನ್ನು ಒಳಗೊಂಡ ಆಯ್ಕೆ ಸಮಿತಿ ರಚಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ಪ್ರಸಕ್ತ ಸಾಲಿನಲ್ಲಿ ನಡೆಯುವ ಕೆಂಪೇಗೌಡ ಜಯಂತಿಯಲ್ಲಿ ಅರ್ಹ ಪರಸ್ಕೃತರನ್ನು ಆಯ್ಕೆ ಮಾಡಲು ಶಿಕ್ಷಣ, ಕಲೆ, ಕೃಷಿ, ಸಮಾಜ ಸೇವೆ ಸೇರಿದಂತೆ ಇನ್ನಿತರ ಕ್ಷೇತ್ರಗಳಿಗೆ ಓರ್ವ ತಜ್ಞರನ್ನು ನಿಯೋಜಿಸಲಾಗುತ್ತದೆ. ಆ ತಜ್ಞರು ಆಯಾ ಕ್ಷೇತ್ರದಲ್ಲಿ ನಿಪುಣರಾಗಿರಲಿದ್ದು, ಪ್ರಶಸ್ತಿಗೆ ಅರ್ಜ ಪುರಸ್ಕೃತರನ್ನು ಆಯ್ಕೆ ಮಾಡಲಿದ್ದಾರೆ. ಜತೆಗೆ ಪ್ರಶಸ್ತಿಗೆ ಆಯ್ಕೆ ಮಾಡುವ ಗೊಂದಲವೂ ನಿವಾರಣೆಯಾಗಲಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.
ಅರ್ಜಿ ಆಹ್ವಾನ: ಜುಲೈನಲ್ಲಿ ಕೆಂಪೇಗೌಡ ಜಯಂತಿ ನಡೆಸಲು ತೀರ್ಮಾನಿಸಿದ್ದು, ಪ್ರಶಸ್ತಿಗೆ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅದರಂತೆ ಅರ್ಹರು ಜೂ.20 ರೊಳಗಾಗಿ ಅರ್ಜಿ ಸಲ್ಲಿಸಲು ಅವಕಾಶ ವಿದ್ದು, ರಾಜಕಾರಣಿ, ಬಿಬಿಎಂಪಿ ಕಾರ್ಪೊರೇಟ ರ್‌ಗಳ ಪ್ರಭಾವ ನಡೆಯುವುದಿಲ್ಲ.